Sunday, 17 December 2017

ಸಜೀವದಹನ.

ಆ ಇಳಿಸಂಜೆಯ ಹೊತ್ತಿನಲಿ ಎಲ್ಲರೂ ನೋಡ-ನೋಡುತ್ತಿದ್ದಂತೆ ಧಗಧಗನೆ ಉರಿವ ಅಗ್ನಿಜ್ವಾಲೆಗೆ ಆತ ಆಕೆಯನ್ನು ಎತ್ತಿ ಎಸೆದುಬಿಟ್ಟಿದ್ದ.
ಇಷ್ಟುದಿನ ಎಲ್ಲರಿಗೂ ಬೇಕಾಗಿದ್ದ ಆ ಮಹತಾಯಿಯನ್ನು ವಯಸ್ಸಾಗಿದೆ ಎಂಬ ಕಾರಣಕ್ಕೆ ಅಪ್ರಯೋಜಕಳು ಎಂದು ತೀರ್ಮಾನಿಸಿ ಬಿಟ್ಟಿದ್ದರು.ಮನೆಯ ಎಲ್ಲರನ್ನೂ ಇಷ್ಟುದಿನ ಸಲಹಿದಾಕೆ ಎಂಬುದನ್ನೂ ಮರೆತು ಆ ಕೃತ್ಯವನ್ನು ಎಸಗಿಬಿಟ್ಟಿದ್ದರು.
ಆಕೆ ಮನೆಯಲ್ಲಿ ಎಲ್ಲರಿಗೂ ಅಚ್ಚುಮೆಚ್ಚು.     ಆತನೊಬ್ಬನ್ನು ಬಿಟ್ಟು. ಆಕೆಯಾದರೋ ಆತನಿಗೆ ಮನದಲ್ಲಿಯೂ ಕೂಡಾ ಕೆಟ್ಟದ್ದನ್ನು ಭಾವಿಸಿಲ್ಲವೇನೋ....ಆದರೂ ಆತನಿಗೆ ಆಕೆಯೆಂದರೆ ಅಸಹ್ಯ.....ಒಂದೊಮ್ಮೆ ಆಡಿಬಿಟ್ಟಿದ್ದ ಕೂಡ...ನಿನ್ನನ್ನು ಕಡಿದೇ ತೀರುತ್ತೇನೆಂದು.....ಆದರೆ...ಆದರೆ...ಈಗ ಆಕೆಯೂ  ತನ್ನಂತಯೇ ಒಂದು ಜೀವಿ ,ಆಕೆಗೂ ಜೀವವಿದೆ... ಎಂಬುದನ್ನೂ ಮರೆತು ಜೀವಂತವಾಗಿ ಅಗ್ನಿಗೆ ಆಹುತಿಯಾಗಿಸಿಬಿಟ್ಟಿದ್ದ...
ಆಕೆಯ ದೇಹ ಅಗ್ನಿಯಲ್ಲಿ ದಹಿಸುತ್ತಿದ್ದರೂ,ಆಕೆ ಬೊಬ್ಬಿರಿದವಳಲ್ಲ...ಚೀರಿದವಳಲ್ಲ..  ಕೊನೆವರೆಗೂ ಒಂದು ಮಾತೂ ಆಡದೇ ಮೌನಿಯಾಗಿಯೇ ಉಳಿದಳು....ಮೌನಿಯಾಗಿಯೇ....ಸತ್ತಳು....ಮೌನವೇ ಎಲ್ಲದಕ್ಕೂ ಉತ್ತರವೇನೋ ಎಂಬುದಕ್ಕೆ ಜ್ವಲಂತ ಸಾಕ್ಷಿ ಆಕೆ...
ಆಕೆಯ ಆ ಸಾವಿನ ಕ್ಷಣದಲ್ಲೂ ಆತನ ಕಣ್ಣಿನಿಂದ ಒಂದೇ ಒಂದು ಹನಿ ನೀರೂ ಜಾರಲಿಲ್ಲ....ನಿರ್ಭಾವುಕನಾಗಿ ನಿಂತಿದ್ದ....ಆತನ ಮನದಲ್ಲಿದ್ದುದು ಒಂದೇ‌....ಆಕೆ ಇನ್ನು ಅಪ್ರಯೋಜಕಳು ಎಂದು....
ಹಾಗಾದರೆ ವಯಸ್ಸಾದವರಿಗೆ ಬೆಲೆಯೇ ಇಲ್ಲವೇ....
ಈ ಜಗತ್ತಿನಲ್ಲಿ ಅವರಿಗೆ ಬದುಕುವ ಹಕ್ಕಿಲ್ಲವೇ...
ಯಾವುದನ್ನೂ ವಿರೋಧಿಸುವುದಿಲ್ಲ ಎಂದ ಮಾತ್ರಕ್ಕೆ
ಒಪ್ಪಿಗೆ ಎಂದರ್ಥವಲ್ಲ...ಮೌನಂ ಸಮ್ಮತಿ ಲಕ್ಷಣಂ ಎಂದರ್ಥವಲ್ಲ...
ಉರಿವ ಬೆಂಕಿಯಲೂ ....ಮೌನವಾಗಿಯೇ ಉಳಿದ ನೀನು...ಮಹತಾಯಿ...
ನೀನು ಮಹಾತ್ಯಾಗಿ....
ನೀನೇ....ನೀನೇ....
ನಮ್ಮನೆಯ... ಬದನೆಕಾಯಿ (ಗಿಡ).
                                      
                  ©ಅಡಿಗ ( Adiga Clicks , 9483917526 )