Wednesday, 31 July 2024

ನಿಷ್ಕರುಣಿ ಅಪ್ಪಯ್ಯ...

ಧೋ ಎಂದು ಭೋರ್ಗರೆವ ಮಳೆಯ ಸದ್ದಿಗೆ ಆ ನಾಲ್ವರು ಮಕ್ಕಳ ಚೀರಾಟ ತಾಯಂದಿರಿಗೆ ಕೇಳದೇ ಹೋಯ್ತೆ...

ಆತ ಇಬ್ಬರು ಹೆಂಡಂದಿರ ಮುದ್ದಿನ ಗಂಡ .ಈರ್ವರಿಗೂ ಅವಳಿ ಮಕ್ಕಳು , ಏಳು ಜನರ ತುಂಬು ಸಂಸಾರವದು.

ಎಲ್ಲೋ ಹುಟ್ಟಿ ಇನ್ನೆಲ್ಲೂ ಬೆಳೆದು ಗಂಡನ ಮನೆ ಸೇರಿದ ಆ ಇಬ್ಬರು ಅನಾಥ  ಹೆಣ್ಣು ಮಕ್ಕಳಿಗೆ ಆಶ್ರಯ ನೀಡಿ , ಬೆಳೆಸಿದ ಪೋಷಕರು ಹೇಳುವುದು...ಆಹಾ ಇಬ್ಬರಿಗೂ ಒಂದು ಗಂಡು ಸಿಕ್ಕರೆ ಒಳ್ಳೆಯದಾಗುತ್ತಿತ್ತು.
ಅದು ಅವರ ಹರಕೆಯೋ , ಆ ಹೆಮ್ಮಕ್ಕಳ ಸುಕೃತವೋ.
ಸ್ವಂತ ಅಕ್ಕತಂಗಿಯರ ಹಾಗೆ ಬೆಳೆದ ಅವರು ಒಬ್ಬ ಗಂಡನ ಮುದ್ದಿನ ಹೆಂಡಂದಿರಾಗಿ ಮುಂದೆಯೂ ಕೂಡಾ ಸವತಿಯರಾಗದೆ , ಜಗಳ ಮಾಡದೇ ಬದುಕುತ್ತಿದ್ದವರು. ಅಕ್ಕ ಗುಲಾಬಿ ತನ್ನ ತಂಗಿಯಾದ ನೀಲುವಿನ ಮಕ್ಕಳನ್ನು ತನ್ನ ಸ್ವಂತ ಮಕ್ಕಳಂತೆ ಹಾಲುಣಿಸಿ ಬೆಳೆಸಿದವಳು.ಅಕ್ಕರೆಯಿಂದ ಕಂಡವಳು, ಮಡಿಲಲಿ ಜೋಪಾನ ಮಾಡಿ ಬೆಳೆಸಿದವಳು.ಕೇವಲ ಹತ್ತು ದಿನ ಅಂತರದಲ್ಲಿ ಹುಟ್ಟಿದ ಆ ಮಕ್ಕಳ ಆಟ ಕಂಡು ಸ್ವರ್ಗವೇ ನಾಚುತ್ತಿತ್ತು...
ಆದರೆ ಆ ಜಡಿ ಮಳೆಯ ಕಾರ್ಮುಗಿಲ ರಾತ್ರಿಯ ಕೊನೆಯ ಗಳಿಗೆಯಲ್ಲಿ ಜವರಾಯ
ಅಪ್ಪನ ಸ್ವರೂಪದಲ್ಲಿ ಆ ಮಕ್ಕಳ ಮೇಲೆ ಎರಗಿಬಿಟ್ಟಿನೆ....!!!
ಆ ಮಕ್ಕಳು ಮಾಡಿದ್ದಾದರೂ ಏನು.
ತಾಯಿಯ ಪ್ರೀತಿ ಬಯಸಿದ್ದೆ ಅವುಗಳಿಗೆ ಮುಳುವಾಯಿತೇ..

ಅಯ್ಯೋ ..
ಇಂತಹ ಅಪ್ಪನಿರುವನೆ....ಈ ಭೂಲೋಕದಲ್ಲಿ.
ಹೆಂಡತಿಯ ಪ್ರೀತಿ ಮಕ್ಕಳೆಡೆಗೆ ಮಾತ್ರ ಹರಿಯುತ್ತಿದೆ , ತನ್ನ ಕಡೆ ಗಮನ ಕೊಡುತ್ತಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ನಡೆದೆಹೋಯ್ತು ಆ  ಕಗ್ಗೊಲೆ..
ಹೇ ವಿಧಿಯೇ....

ಬೆಳಗ್ಗೆ ಮಕ್ಕಳ ಅಳು ಕೇಳುವುದಿಲ್ಲವಲ್ಲ ಎಂಬ ದುಗುಡದಿಂದ  ಧಾವಿಸಿದರೆ , ಕಾಣಲು ಇನ್ನೇನು ಉಳಿದಿದೆ....ಅಯ್ಯೋ ದುರ್ವಿಧಿಯೇ.

ಯಾವ ರುಂಡಕೆ  ಯಾವ ಕೈ ಕಾಲುಗಳು ಎಂದು ಗುರುತೇ ಸಿಗದಷ್ಟು ಚಿತ್ರ ವಿಚಿತ್ರವಾಗಿ ಕಗ್ಗೊಲೆ ಮಾಡಿಬಿಟ್ಟಿದ್ದ ಆ ಅಪ್ಪನೆನಿಸಿಕೊಂಡಾತ.
.
.
.
.
.
ಇನ್ನೇನು ಹೇಳಲು ಉಳಿದಿಲ್ಲ ..ಅಂತ್ಯ ಸಂಸ್ಕಾರಗಳನ್ನು ಮುಗಿಸಿ  ಮನೆಗೆ ಬಂದರೆ, ನಗುವಿನಲೆಯಿದ್ದ ಮನೆಯಿಂದು ಮಸಣದ ವಾಸನೆಯಿಂದ ಕರಟುತ್ತಿದೆ...
ಎದೆಯಲ್ಲಿ ಪ್ರತೀಕಾರದ ಅಗ್ನಿ ಉರಿಯುತ್ತಿದೆ.
....
...
...
...
...
...
...
....
....
...
( ಸಂಜೆ ವೇಳೆಗೆ ಮನೆಗೆ  ಮಿಯಾವ್ ಎಂದು ಕಳ್ಳನ ಹಾಗೆ ನುಗ್ಗಲು ಬಂದ ಆ ಅಪ್ಪ ಬೆಕ್ಕನ್ನು ಕೋಲಿನಿಂದ ರಪರಪನೆ ಬಾರಿಸಿ , ಪ್ರತೀಕಾರವನ್ನು ತೀರಿಸಿಕೊಂಡೆವು )

Saturday, 8 July 2023

ನಾಡ ನಡುವಿನ ನೀರ್ ನೀರೆ

ಮಳೆರಾಯನ ಅಬ್ಬರಕೆ ಶಾಲೆಗೆ ಎರಡನೇ ದಿನವೂ ರಜೆ !!!!ಎಂಬ ಸುದ್ದಿ ಸಿಕ್ಕಿದ ತಕ್ಷಣ ನಮ್ಮ ತಲೆಯಲ್ಲಿ ಸುಳಿದ ಮೊದಲ ವಿಚಾರ 
ಜಲಾಧಿವಾಸ ಕೆರಾಡಿಯ 
ಕೇಶವನಾಥೇಶ್ವರನ ದರ್ಶನ. ಈ ಮೊದಲು ಅಲ್ಲಿಗೆ ತೆರಳಿದ್ದರೂ ಮಳೆಗಾಲದಲ್ಲಿ ಮರು ಭೇಟಿಗೆ ಯೋಗ್ಯ ಸ್ಥಳವದು...
ಸೇರುವ ಗಮ್ಯಕ್ಕಿಂತ ಸಾಗುವ ಹಾದಿಯೇ ಕೆಲವೊಮ್ಮೆ ಗಮನ ಸೆಳೆದು ಬಿಡುತ್ತವೆ ಎಂಬ ಉಕ್ತಿಗೆ ಇಂಬು ಕೊಡುವಂತೆ , ನಮಗೆ ಹಾದಿಮಧ್ಯ ಸಿಕ್ಕಿದ್ದು  ನೀರಝರಿ. ಅದರ ಸೌಂದರ್ಯ ವರ್ಣಿಸಲಸದಳ . 
ತಾಯ ಒಡಲಿನಿಂದ ಕೆಳಗಿಳಿವ ಹಾಲ್ಗಲ್ಲದ ಮಗುವಿನಂತೆ....ಅದರ ರೂಪ.
ಬೆಚ್ಚನೆಯ ಗೂಡಲ್ಲಿ ಮರಿಗೆ ಉಣಿಸುವ ತಾಯ ಸ್ಪರ್ಶದ ಸುಖ.
ಬಾಯಾರಿದ ಯಾತ್ರಿಕಗೆ ಅಮೃತದ ಕೊಳ ದೊರಕಿದಂತೆ...
ಹೀಗೆಲ್ಲ ಹೇಳಿದರು ಅದರ ಅನುಭವ ಮಾತ್ರ.....ನೋಡಿಯೇ ಅನುಭವಿಸಿಯೇ ತೀರಬೇಕು...
ಆ ಜಲಧಾರೆಯ ಕಂಡು...ಅವಳ ಅಕ್ಕನನ್ನು ಮಾತಾಡಿಸಿ..
ಇವಳ ತಾಯಿ ಅಜ್ಜಿಯಂದಿರನ್ನು ನೋಡಬೇಕೆಂಬ ಆಶಯಕ್ಕೆ ಸನ್ಮಿತ್ರರಿಂದ ಸಲಹೆಯನ್ನು ಪಡೆದು , ಆಕೆಗೆ ಮತ್ತೆ
 ಬರುವವೆಂಬ ವಾಗ್ದಾನ ನೀಡಿ ನಮ್ಮ ಗಮ್ಯದೆಡೆಗೆ ನಡೆದೆವು....

Wednesday, 15 January 2020

ಹೊಸ ಹಾದಿ

ನಮಸ್ಕಾರ🙏
ಸಹೃದಯರ ಶುಭಾಶೀರ್ವಾದದಿಂದ "Adiga Clicks" ಇಂದಿನಿಂದ  Professional Photography   ಆರಂಭಿಸುತ್ತಿದೆ.

Wednesday, 10 July 2019

ಸುಂದರ ಯಾತ್ರೆಯ ಚಂದದ ಅನುಭವ


ಆವತ್ತು ಶ್ರೀಮತಿ ಅಕ್ಕ ನನಗೆ ದೂರವಾಣಿ ಕರೆ ಮಾಡಿ ,ಪದ್ನಾಪ (ನನ್ನನ್ನು ಅವರು ಕರೆಯುವುದು ಹೀಗೆ) ಪಂಡರಾಪುರಕ್ಕೆ ಹೋತ್ತ್ ನೀನೂ ಬಾ ಎಂದು ನನ್ನನ್ನು ಆಹ್ವಾನಿಸಿದಾಗ ಗೋಡೆಯ ಮೇಲೆ ದೀಪವಿಟ್ಟಂತೆ  ನೋಡುವೆ ಎಂದೆ .
ಯಾತ್ರೆಗೆ ಹೋದ ಅನುಭವಕ್ಕೂ ಮೊದಲು ಹೋಗದೇ ಇದ್ದಿದ್ದರೆ ಏನೆಲ್ಲ ಕಳೆದುಕೊಳ್ಳುತ್ತಿದ್ದೆ ಎಂದು ಹೇಳುವುದು ಮುಖ್ಯ . ಏಕೆಂದರೆ ಈ ಯಾತ್ರೆ ನಮ್ಮ ಪೂರ್ಣ ಜೀವನವೆಂಬ ಕಾದಂಬರಿಯ ಒಂದು ಭಾಗವೆಂಬಂತಹ ಅದ್ಭುತ ಪಯಣ , ಸ್ನೇಹಾನುಭವಗಳ ಮಹಾಪೂರ , ಭಾವಗಳ ಸಮ್ಮಿಲನ , ಹಿರಿಯರ ಗಡಣದೊಳಗೆ ಈ ಕಿರಿಯನಿಗೊಂದು ಇರುವಿಕೆಯ ಅವಕಾಶ ತಪ್ಪಿ ಹೋಗುತ್ತಿತ್ತೇನೋ …
ನನ್ನ ಔದ್ಯೋಗಿಕ ವಿಷಯ ಇನ್ನೂ ನಿರ್ಧಾರಿತವಾಗಿಲ್ಲದಿದ್ದರಿಂದ ನಾನು ಶ್ರೀಮತಿ ಅಕ್ಕನಲ್ಲಿ ನೊಡುವೆ ಎಂದದ್ದಾಗಿತ್ತು . ಸ್ವಲ್ಪ ದಿನದ ನಂತರ ಅವರಿಗೆ ಕರೆ ಮಾಡಿ ನಾನೂ ಬರುವೆ ಎಂದಾಗ ಖುಷಿಯಿಂದ ಬಾ , ಹಾಗೆ ಹಣದ ವ್ಯವಹಾರ ನಿನಗೆ ಕೊಡುತ್ತೇನೆ ಎಂದು ದೊಡ್ದದೊಂದು ಜವಾಬ್ದಾರಿಯನ್ನು ನನಗೆ ವಹಿಸಿಬಿಟ್ಟರು .

೨೬.೦೬.೧೯ ಬುಧವಾರ. ಸ್ಥಳ – ಶಂಕರನಾರಾಯಣ

ಇನ್ನೂ ತುಂಬಾ ದಿನ ಇದೆ ಅಂದುಕೊಂಡಿದ್ದ ಆ ದಿನ ಬಂದೆಬಿಟ್ಟಿತು. ನಂದ್ಗೋಳಿ ಸೂರ್ಯ ಭಟ್ಟರ ಮನೆಯಲ್ಲಿ ಅದಾಗಲೆ ಅವರು ತಯಾರಿಸಿದ್ದ ರಾತ್ರಿಯ ಅಡುಗೆ ಮತ್ತು ತಂಡದ ಸದಸ್ಯರೆಲ್ಲ ಸೇರಿ ಮಾಡಿದ ಚಪಾತಿ ಹಾಗೆ ಸಿಹಿ – ಖಾರ ,ನೀರಿನ ವ್ಯವಸ್ಥೆ  ಎಲ್ಲವನ್ನೂ ನಮ್ಮ ವಾಹನಕ್ಕೆ (ಬಸ್ ) ತುಂಬಿಸಿ ೨.೧೫ಕ್ಕೆ ನಮ್ಮ ಬಹುದಿನದ ಕನಸಾದ  ಯಾತ್ರೆಯನ್ನು  ಆರಂಭಿಸಿದೆವು .ಮಳೆರಾಯ ತುಂತುರು ಹನಿಗಳಿಂದ ನಮ್ಮನ್ನು ಹರಸಿ ಕಳುಹಿಸಿದ್ದ.
ಹೊಸ – ಹಳೆ ಪರಿಚಯದವರೊಂದಿಗೆ ಆರಂಭಗೊಂಡ ಈ ಪಯಣಕ್ಕೆ ಕುಂದಾಪುರದಲ್ಲಿ ಇನ್ನೂ ಕೆಲವರು ಸೇರಿ ೩೫ ಜನರ  ನಮ್ಮ ತಂಡ ೩.೩೦ಕ್ಕೆ ಕುಂದಾಪುರದಿಂದ ಮಳೆರಾಯನ ಪೂರ್ಣ ಆಶೀರ್ವಾದಿಂದ   ಕೊಲ್ಹಾಪುರದೆಡೆಗೆ ಹೊರಟಿತು.ಸುಮಾರು ೪೫೦ಕಿ.ಮಿ ದೂರ ೧೦ ಘಂಟೆಗಳ ಮೊದಲ ಹಂತದ ಪಯಣದ ಹಾದಿಯಾದ  ಭಟ್ಕಳದಲ್ಲಿ ಕಾಫಿ ಇತ್ಯಾದಿಯೆಲ್ಲ ಮುಗಿಸಿ , ಪುನಃ ವಾಹನದಲ್ಲಿ ಕೂತಾಗ ಅಲ್ಲಿ ಸಜ್ಜಾಗಿದ್ದು ಮಾತಿನ ರಂಗಮಂಚ.ಯಲ್ಲಾಪುರದಲ್ಲಿ ಊಟಕ್ಕೆ ನಿಲ್ಲಿಸುವಾಗ ಮಾತು –ಕಥೆ –ಭಜನೆ ಇತ್ಯಾದಿಗಳಿಂದ ಸಮಯ ಸರಿದದ್ದೆ ತಿಳಿದಿರಲಿಲ್ಲ.

ಅದಾಗಲೇ ಅಡುಗೆ ತಯಾರಿಸಿ ತಂದದ್ದರಿಂದ ಐತಾಳರಿಗೆ ಮತ್ತು ಚಂದ್ರಣ್ಣಂಗೆ ಸ್ವಲ್ಪ ನಿರಾಳ (ಅಲಿಖಿತವಾಗಿ ಅಡುಗೆಯ ಜವಾಬ್ದಾರಿ ಹೊತ್ತದ್ದರಿಂದ).ಊಟ ಮುಗಿಸಿ ಪುನಃ ಗಾಡಿಯಲ್ಲಿ ಮಾತಿನ ಮಂಟಪದಲ್ಲಿ ಕುಣಿದು ದಣಿಯೆ ನಿದ್ರಾದೇವಿ ಮೆಲ್ಲನೆ ಒಬ್ಬೊಬರನ್ನೆ ತನ್ನ ತೆಕ್ಕೆಗೆ ಎಳೆದುಕೊಳ್ಳುತ್ತಿದ್ದಳು . ಬೆಳಗಿನ ಜಾವ ೨.೩೦ಕ್ಕೆಕೊಲ್ಹಾಪುರದ ರಾಜ್ ವಸತಿಗೃಹಕ್ಕೆ ಬಂದೆವು .

೨೭.೦೬.೧೯ ಗುರುವಾರ. ಸ್ಥಳ – ಕೊಲ್ಹಾಪುರ

ಈ ದಿನ ಮದ್ಯಾಹ್ನದ ಅಡುಗೆಗಾಗಿ ತಂದಿದ್ದ ಸಾಮಾನು – ಪಾತ್ರೆಗಳನ್ನೆಲ್ಲ ವಾಹನದಿಂದ ಇಳಿಸಿ ನಮಗೆ ನಿಗದಿಯಾದ ಕೋಣೆಗಳಿಗೆ ಕೊಂಡೊಯ್ದು ಇನ್ನೇನು ಮಲಗಬೇಕು ಎಂದಾಗ ಭಜನಾ ತಂಡದ ಗುರುಗಳಾದ ವೀಣಕ್ಕನ “ ಬೆಳಗ್ಗೆ ೪ಕ್ಕೆ ದೇವಸ್ಥಾನಕ್ಕೆ ಹೋಗಲು ತಯಾರಾಗಿರಿ “ ಎಂಬ ಸ್ವರ ಆ ಸಮಯಕ್ಕೆ – ಪರಿಸ್ಥಿತಿಗೆ ಕರ್ಣಕಠೋರವಾದದ್ದು ಸುಳ್ಳಲ್ಲ .  ಚುಮು-ಚುಮು ಚಳಿಯಲ್ಲೂ ಆ ಕೂಡಲೇ ತಣ್ಣೀರಿನಸ್ನಾನ ,  ಪ್ರಾತರ್ವಿಧಿಗಳನ್ನೆಲ್ಲ ಪೂರೈಸಿ ಹಾಸಿಗೆಗೆ ಬಿದ್ದು ಕಣ್ಣು ಮುಚ್ಚುವಷ್ಟರಲ್ಲಿ ಘಂಟೆ ಐದಾಗಿತ್ತು .  ಸಮೀಪದಲ್ಲೆ ಇದ್ದ  ’’ ಶ್ರೀ ಕೊಲ್ಹಾಪುರ ಮಹಾಲಕ್ಷ್ಮಿ ದೇವಾಲಯಕ್ಕೆ “ ಕಾಲ್ನಡಿಗೆಯಲ್ಲೆ ಸಾಗಿ ದೇವಳದ ದಕ್ಷಿಣ ದ್ವಾರದಿಂದ ಪ್ರವೇಶಿಸಿದ್ದರಿಂದ ನೇರವಾಗಿ ಒಳ ಪ್ರಾಂಗಣ ತಲುಪಿ ಸುಲಭವಾಗಿ ದೇವಿಯ ದರುಶನ ಪಡೆವಾಗ ,ದ್ವಾರಪಾಲಕನ ಸೀಟಿ ನಾದಕ್ಕೆ ಬೆರಗಿ ಪ್ರದಕ್ಷಿಣೆ ಬಂದು ಅದಾಗಲೇ ನೆರೆದಿದ್ದ ಜನಸ್ತೋಮವನ್ನು ಒಳಗೊಂಡ ದೇವಳದ ಹೊರ ಪ್ರಾಂಗಣಕ್ಕೆ ಅಡಿಯಿಟ್ಟೆವು .ಭಜನಾ ತಂಡದ ಸದಸ್ಯರು ಆಲಯದಲಿ ದೇವಿಯನ್ನು  “ಜಯ ಕೊಲ್ಹಾಪುರ ನಿಲಯೇ “   ಇತ್ಯಾದಿ ಭಜನೆಗಳಿಂದ ಸಂಪ್ರೀತಿಗೊಳಿಸಿ ಮಂಗಳ ಹಾಡಿ ಹೊರ ಬರುವಾಗ ನೇಸರನ ಬಾಲರಶ್ಮಿಯು ನಮ್ಮ ವದನಕ್ಕೆ ಮುತ್ತಿಕ್ಕಲು ಹವಣಿಸುತ್ತಿದ್ದವು. ಅಲ್ಲಿನ ಸುಂದರ ದೃಶ್ಯಗಳನ್ನು ನಮ್ಮ ಕೆಮರಾಗಳಲ್ಲಿ ಸೆರೆಹಿಡಿದು , ತಂಡದ ಚಿತ್ರವನ್ನೂ ಗ್ರಹಿಸಿ ಅಲ್ಲಿನ ವಿಶೇಷ ದೀಪಸ್ಥಂಭವನ್ನು ,


ಮಂಟಪಸ್ಥ ಬಾಲಶ್ವಾನ , ವಿಚಿತ್ರ ಪ್ರಾಣಿಯ ಶಿಲಾಪ್ರತಿಮೆಗಳನ್ನು ಕಂಡು ವಸತಿಗೃಹಕ್ಕೆ ಬಂದು  ನಿದ್ದೆ ಕಣ್ಣಲ್ಲೇ ಉಪಾಹಾರ ಮುಗಿಸಿ ಮಲಗುವ ತಯಾರಿಗೆ ’ಶಾಪಿಂಗ್ ’ ಎಂಬ ಮಾಯೆಯು ಅಡ್ಡಿಪಡಿಸಿ , ಕೊಲ್ಹಾಪುರ ತಿರುಗಲು ಆರಂಭಿಸಿದೆವು .
ಸೀರೆ , ವಿಶೇಷ ಚರ್ಮದ ಪಾದರಕ್ಷೆ , ಖಾದಿವಸ್ತ್ರಗಳನ್ನಲ್ಲಾ ಖರೀದಿಸಿ ತಣ್ಣಗೆ ಕಬ್ಬಿನ ಹಾಲನ್ನು ಕುಡಿದು ಅದಾಗ ದೇವರ ದರುಶನ ಮುಗಿಸಿ ಹೊರಬಂದ ಶ್ರೀ ಅಣ್ಣಾ ಹಜಾರೆ ಅವರನ್ನೂ ಕಂಡು ...



ಚದುರಿ ಹೊಗಿದ್ದ ತಂಡದ ಸದಸ್ಯರೆಲ್ಲರನ್ನೂ ಒಡಗೂಡಿ ವಸತಿಗೃಹಕ್ಕೆ ಧಾವಿಸಿದೆವು . ಐತಾಳರು ಅದಾಗಲೇ ತಯಾರಿಸಿದ್ದ ಅಡುಗೆ , ಸಮಾನು ಸರಂಜಾಮುಗಳನ್ನ ವಾಹನಕ್ಕೆ ಹಾಕಿ ,ಅಲ್ಲಿಂದ ನಾರಾಯಣಪುರ ಬಾಲಾಜಿ ದೇವಾಲಯಕ್ಕೆ ಹೊರಟು ಮಾರ್ಗಮಧ್ಯದಲ್ಲೆ ಭೊಜನ ಮುಗಿಸಿ ,

ಸುಜಾತಕ್ಕನಿಗೆ ಸಿಕ್ಕಿದ ಒಂದೇ ಒಂದು ಮಾವಿನಹಣ್ಣನ್ನು ಕಾಡಿ ಪಡೆದು , ಕೆಲವರಿಗೆ ಪಾಲೂ ಕೊಟ್ಟು ನಾನೂ ತಿಂದು , ಕೊಂಡಳ್ಳಿ ಲಕ್ಷ್ಮಿ ಅಕ್ಕ ಮಾಡಿ ತಂದಿದ್ದ ಕೋಡುಬಳೆಯನ್ನ ತಿಂದು ದೇವಾಲಯಕ್ಕೆ ತಲುಪಿದೆವು.

ತಿರುಪತಿಯ ಪಡಿಯಚ್ಚಿನಂತ ಆ ದೇವಾಲಯವನ್ನು ಕಂಡು ಹೊರ ಬರುವಷ್ಟರಲ್ಲಿ ಮಳೆರಾಯನ ಆರ್ಭಟಕ್ಕೆ  ನಮ್ಮ ವಾಹನದೆಡೆಗೆ ಓಡೋಡಿ ಬಂದರೆ ವಾಹನದಲ್ಲಿ ಸಾರಥಿಯಿಲ್ಲ , ನಮಗೆ ನಿಲ್ಲಲು ಸೂರಿಲ್ಲ . ಕೊನೆಗೆ ಅಲ್ಲೆ ಅಕ್ಕಪಕ್ಕದ ಬೀದಿವರ್ತಕರ ಜೋಪಡಿಯಲ್ಲಿ ಕೂತು

 ಒಂದಷ್ಟು ಹರಟೆ ಮಾಡುವಷ್ಟರಲ್ಲಿ ಚಾಲಕ ಬಂದು ವಾಹನದ ಬಾಗಿಲು ತೆಗೆದು , ನಾವು ಅರ್ಧಂಬರ್ದ ಒದ್ದೆಯಾದ  ವಸ್ತ್ರದಲ್ಲೆ ವಾಹನದಲ್ಲಿ ಆಸೀನರಾದೆವು .ಮುಂದೆ ಭರತಖಂಡದ ದ್ವಾದಶ ಜ್ಯೋತಿರ್ಲಿಂಗಗಳಲ್ಲೊಂದಾದ ನಾಸಿಕ್ ಪ್ರಾಂತದ ಶ್ರೀ ತ್ರ್ಯಂಬಕೇಶ್ವರನ ಸನ್ನಿಧಿಯತ್ತ ಪಯಣ .
ಮಾರ್ಗಮಧ್ಯೆ ಭೋಜನ ಮುಗಿಸಿ ನಾಸಿಕ್ ದೇವಾಲಯದಿಂದ ೩೦ಕಿ.ಮಿ ದೂರದ ಪೇಜಾವರ ಮಠದಲ್ಲಿ ಉಳಿಯಲು ವ್ಯವಸ್ಥಯಿದ್ದ ಕಾರಣ ಅಲ್ಲಿಗೆ ತಲುಪಿದೆವು.ಅಲ್ಲಿನ ಮಹದ್ವಾರದ ಒಳಗೆ ಮಲಗಿದ್ದ ದ್ವಾರಪಾಲಕನೋ ಬೆಳಗಿನ ಜಾವದ ಘೋರ ನಿದ್ರೆಯಲ್ಲಿದ್ದನು . ಕೂಗಿದರೂ ಧ್ವನಿ ಕೇಳಲಿಲ್ಲವೆ ಅವಗೆ ... ಮತ್ತೇನು ನಾನು ಅಲ್ಲಿನ ಮಹಾದ್ವಾರವನ್ನು ಮೆಲ್ಲಗೆ ಹಾರಿ ಅವನನ್ನು ಎಬ್ಬಿಸಿ ನನಗೆ ಬರುವ ಅಲ್ಪಸ್ವಲ್ಪ ಹಿಂದಿಯಿಂದ ನಿದ್ರೆಯ ಮಂಪರಿನಲ್ಲಿದ್ದ ಆತನಿಗೆ ಅರ್ಥ ಮಾಡಿಸಿದೆನು .ಆ ಬಳಿಕ ಆತ ಬಾಗಿಲನು ತೆರೆದು ನಮ್ಮ ಕೋಣೆಯನ್ನು ತೋರಿಸಿದನು.ಸುಮಾರು ೫೦ ಜನ ಮಲಗಲು ಇರುವಷ್ಟು ಜಾಗ.ಇಷ್ಟಾಗುವಾಗ ಬೆಳಗ್ಗೆ ೩.೪೫ ಘಂಟೆ . ಪ್ರಾತಃಕಾಲ ೫ಕ್ಕೆ ದೇವಾಲಯದಲ್ಲಿರಬೇಕು .

ದಿನಾಂಕ ೨೮.೬.೧೯ ಶುಕ್ರವಾರ ಸ್ಥಳ – ನಾಸಿಕ್

ಸುಮಾರು ೫.೧೫ಕ್ಕೆ ದೇವಾಲಯ ತಲುಪಿ ಮಹಾದ್ವಾರದಲ್ಲಿ ೨೦ ನಿಮಿಷ ಕಾದು ದೇವಾಲಯದ ದ್ವಾರ ಉದ್ಘಾಟನೆಯ ನಂತರ ದೇಗುಲವನ್ನು ಪ್ರವೇಶಿಸಿದೆವು  . ಅಹಾ...


ಸುಂದರ ಶಿಲ್ಪಕಲೆಯ ಅದ್ಭುತ ಪ್ರಾಚೀನ ಶಿಲಾದೇಗುಲ.ಸರತಿಯಲ್ಲಿ ನಿಂತು ಜ್ಯೋತಿರ್ಲಿಂಗರೂಪಿ ತ್ರ್ಯಂಬಕೇಶ್ವರನನ್ನು ಕಂಡು ಆಲಯದ ಹೊರ ಪ್ರಾಂಗಣದ ಪ್ರಶಾಂತ ಸ್ಥಳದಲ್ಲಿ ಮನಸಿಗೆ ತೃಪ್ತಿಯಾಗುವಷ್ಟು ಹೊತ್ತು ಕುಳಿತು , ಚಿತ್ರಗಳನ್ನು ಗ್ರಹಿಸಿದ್ದು ನಾನು ಮಾತ್ರ. ಉಳಿದವರು ಈಶನನ್ನು ಭಜಿಸಿ ಹೊರಬಂದ ನಂತರ ತಂಡಚಿತ್ರವನ್ನು ಪಡೆದು


ಪೇಶ್ವೆಗಳ ಕಾಲದಲ್ಲಿ ಮರುನಿರ್ಮಾಣಗೊಂಡ ದೇಗುಲದ ಬಗ್ಗೆ ಚರ್ಚಿಸಿ ಅಲ್ಲಿಂದ ನಮ್ಮ ವಸತಿಗೃಹಕ್ಕೆ ತೆರಳಿ ನಾನು ಮಲಗಿದ್ದಷ್ಟೇ ಗೊತ್ತು .
ಸುಮಾರು ೯.೩೦ಕ್ಕೆ ಶ್ರೀಮತಿ ಅಕ್ಕ ನನ್ನನ್ನು ಕರೆದಾಗಲೇ ಎಚ್ಚರ , ಅರೆನಿದ್ದೆಯಲ್ಲೆ ಉಪಾಹಾರ ಮುಗಿಸಿ ಅಲ್ಲಿಂದ ಆಟೊವಾಲಾಗಳ ಜೊತೆ ಶೂರ್ಪನಖಾ ಗರ್ವಭಂಗ ,  ಭಾರತದ ಏಕೈಕ ಶೇಷಲಕ್ಷ್ಮಣ ದೇಗುಲ , ಗೋಶಾಲಾ , ಸೀತಾಪಹರಣ ಸ್ಥಳ , ತ್ರಿಮೂರ್ತಿ ಕುಂಡ ,
ಗೋದಾವರೀ ತೀರದಲ್ಲಿ ಕುಂಭಮೇಳ ನಡೆಯುವ ಸ್ಥಳ ,

೧೨ ಅಡಿ ಎತ್ತರದ ಉದ್ಭವ ಆಂಜನೇಯ ಮೂರ್ತಿ , ಭೈರವನಾಥ ದೇಗುಲ ಇತ್ಯಾದಿಗಳನ್ನು ಅವಸರದಲ್ಲಿ ಕಂಡು ಅಲ್ಲೆ ಬೀದಿ ಬದಿ ೩ಕೆಜಿಗೆ ೫೦ ಎಂದು ಬೊಬ್ಬಿರಿಯುತ್ತಿದ್ದ ವ್ಯಾಪಾರಿಯಲ್ಲಿ ೫೦ಕ್ಕೆ ೪ ಕೆಜಿ ದಾಳಿಂಬೆ ಕೊಂಡು ( ಅದರಲ್ಲಿ ೪ ಕೆಜಿ ಇರಲಿಲ್ಲ ನಾವು ಮೋಸಗೊಂಡದ್ದು , ಮತ್ತು ಒಂದೆ ದಿನಕ್ಕೆ ಅವುಗಳು ಹಾಳಾಗಿದ್ದವು )ವಸತಿಗೃಹಕ್ಕೆ ಬಂದೆವು.
ಅಲ್ಲಿಂದ ನೇರವಾಗಿ ಶಿರಡಿಗೆ ಸುಮಾರು ೧.೩೦ಕ್ಕೆ  ತಲುಪಿ ಅಲ್ಲಿ ನಾವು ತಂದಿದ್ದ ಭೋಜನ ಮುಗಿಸಿ  ದರುಶನಕ್ಕೆ ಅಣಿಯಾದೆವು.

ಈ ಕ್ಷೇತ್ರದಲ್ಲಿ ನನಗೊಬ್ಬನಿಗಲ್ಲದೆ ಹಲವರ ಮನಸಲ್ಲಿ ಉದ್ಭವಿಸಿದ ಕೆಲವು ಭಾವಗಳನ್ನು ಸಂಕೋಚವಾದರೂ ಹಂಚಿಕೊಳ್ಳುತ್ತೇನೆ .
ಇಲ್ಲಿ ವಾಹನ ನಿಲುಗಡೆ ಸ್ಥಳದಿಂದ ಶ್ರೀಕ್ಷೇತ್ರಕ್ಕೆ ಉಚಿತ ವಾಹನ ವ್ಯವಸ್ಥೆ ಇದ್ದದ್ದೇನೋ ಸರಿ , ಆದರೆ ಸಾವಿರಾರು ಜನ ಬರುವ ಸ್ಥಳದಲ್ಲಿ ಒಂದಂಕಿಯ ಉಚಿತ ವಾಹನ ವ್ಯವಸ್ಥೆ “ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ” ಎಂಬಂತಿತ್ತು. ನಾವು ಆಟೊದಲ್ಲಿ ದೇವಳದ ಒಂದನೆ ದ್ವಾರಕ್ಕೆ ಬಂದಿಳಿದೆವು.ಅಗ ಅಲ್ಲಿಯೆ ಪಕ್ಕದ ಅಂಗಡಿಯ ವ್ಯಾಪಾರಿಯೊಬ್ಬ ಕೈಯಲ್ಲಿ ಚೀಲವೊಂದನ್ನು ಹಿಡಿದು ನಮ್ಮಲ್ಲಿ ಚಪ್ಪಲಿಗಳನ್ನು ಇದಕ್ಕೆ ಹಾಕಿ ದುಡ್ಡು ಕೊಡುವುದು ಬೇಡ ಎಂದ . ಇದರೆಲ್ಲೇನೋ ಮೋಸವಿದೆ ಎಂದು ಹೇಳುವಷ್ಟರಲ್ಲಿ ಹಲವರು ತಮ್ಮ ಚಪ್ಪಲಿಗಳನ್ನು ಹಾಕಿಯಾಗಿತ್ತು , ಉಳಿದವರೂ ಅದೇ ಹಾದಿ ಹಿಡಿದರು . ಕೊನೆಯಲ್ಲುಳಿದ ನಾನೂ ಕೂಡ . ಅಲ್ಲೆ ಆಗಿದ್ದು ಯಡವಟ್ಟು . ಆತ ನನ್ನಲ್ಲಿ ಪ್ರಸಾದ ತೆಗೆದುಕೊಳ್ಳಿ ಎಂದ. ನಾನು ಬೇಡ ಎಂದಾಗ ೨-೩ ಜನ ಬಂದು ಒತ್ತಾಯಿಸಿದರು.ಅದಕ್ಕೂ ಜಗ್ಗದ ನಾನು ನನ್ನ ತಂಡದವರಿಗೆ  ಇವರ ಮೋಸದ ಜಾಲದ ಬಗ್ಗೆ ಹೇಳಿದೆ. ಕೊನೆಗೆ ವಾದದಲ್ಲಿ ನಮ್ಮ ಕೈ ಮೇಲಾದಾಗ ಚೀಲದಲ್ಲಿದ್ದ ಅಷ್ಟೂ ಚಪ್ಪಲಿಗಳು ನೆಲಸೇರಿದವು. ಅದನ್ನು ಧರಿಸಿ ಮುಂದೆ ಹೋದಾಗ ದೇವಳದ ವತಿಯಿಂದ ಪಾದರಕ್ಷೆಯನ್ನು ಇಡುವ ಸ್ಥಳದ ಮಾರ್ಗಸೂಚಿ ಇತ್ತು.( ಆ ಫಲಕ ದ್ವಾರದ ಬಳಿಯೆ ಇದ್ದಿದ್ದರೆ ಚೆನ್ನವೆನೋ ಎಂಬುದು ನನ್ನ ಅಶಯ) ಅಲ್ಲಿಂದ ಚಪ್ಪಲಿಗಳನ್ನ ಇಡಬೇಕಾದ ಸ್ಥಳದಲ್ಲಿ ಇಟ್ಟು ಧರ್ಮದರ್ಶನಕ್ಕೆ ಹೊರಟೆವು .ಅದಕ್ಕೆ ಚೀಟಿ ಮಾಡಿಸಬೇಕೆಂದೂ ಅದು ಸುಮಾರು ೭೫೦ಮೀ ದೂರದಲ್ಲಿದೆಯೆಂದೂ ತಿಳಿದು ಅವಸರವಾಗಿ ಅಲ್ಲಿಗೆ ಹೋಗಿ ಅಂತೂ ಚೀಟಿ ಮಾಡಿಸಿದೆವು .ಅಲ್ಲಿನ ವ್ಯವಸ್ಥೆ ಅಬ್ಬಾ....ಕೆಮರಾ ,ಕಂಪ್ಯೂಟರ್ , ಬೆರಳಚ್ಚು ಯಂತ್ರ , QR ಕೋಡ್ ಒಳಗೊಂಡ ಚೀಟಿ ನೋಡುಗರಿಗೆ ದಿಗ್ಭ್ರಮೆ ಹುಟ್ಟಿಸುವ ನಾಟಕದ ಪೊಳ್ಳು (ಅ)ವ್ಯವಸ್ಥೆ . ಯಾಕೆಂದರೆ ಆ ಕೆಮರಾಗಳು ಪೋಟೊ ತೆಗೆಯುವುದೆ ಇಲ್ಲ , ಬೆರಳಚ್ಚು ಯಂತ್ರವಂತೂ ಸೆನ್ಸಾರ್ ತಂತ್ರಜ್ಞಾನವೋ  ಎಂಬಂತೆ ಅದನ್ನು ಸ್ಪರ್ಶಿಸುವುದರೊಳಗೇ ಚೀಟಿ ನಮ್ಮ ಕೈ ಸೇರಿಯಾಗಿತ್ತು. ಮಹಿಳೆಯರೊಬ್ಬರಿಗೆ (male) ಪುರುಷ ಎಂದು ಟಂಕಿಸಿದ್ದ ಚೀಟಿ ಸಿಕ್ಕಿದ್ದು ಸಿಬ್ಬಂದಿಗಳ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿ.
ಅಂದರೆ ಮೊದಲೇ ಟಂಕಿಸಿದ ಚೀಟಿಗಳನ್ನು ನಮಗೆ ನೀಡುತ್ತಿದ್ದರು ಎಂದರೆ ತಪ್ಪು ಎಸೆಯುತ್ತಿದ್ದರು ಎನ್ನಬಹುದು. ಇಷ್ಟಾಗುವಾಗ ದರುಶನ ಬೇಕೇ ಎಂಬ ಪ್ರಶ್ನೆ ಮೂಡಿದ್ದೂ ಸುಳ್ಳಲ್ಲ.ಮತ್ತೆ ೧.೩೦ ಘಂಟೆಗಳ ಸರತಿ.ಅಲ್ಲಿ ಪುನಃ ನಮ್ಮ ಕೈಯಲ್ಲಿದ್ದ ಚೀಟಿಯನ್ನು ಪರೀಕ್ಷಿಸುವ (scan) ನಾಟಕ. ನಮ್ಮ ಬಗ್ಗೆ ಯಾವುದೇ ಮಾಹಿತಿಯಿಲ್ಲದ ಆ ಚೀಟಿಯನ್ನು ಏಕೆ ಪರೀಕ್ಷಿಸಿದರು ಎಂಬುದು ಕೊನೆವರೆಗೂ ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿಯಿತು .
ಕೊನೆಗೂ ಸಾಯಿಬಾಬರ ಮೂರ್ತಿಯನ್ನು  ಕಂಡು ದೇಗುಲದ ಮತ್ತೊಂದು ದ್ವಾರದಿಂದ ಹೊರಬಂದು ನಮ್ಮ ಪಾದರಕ್ಷೆಗಳನ್ನು ತೆಗೆದುಕೊಳ್ಳುವಾಗ ಸಾಕು ಸಾಕೆನಿಸಿದ್ದು ಸುಳ್ಳಲ್ಲ .
ಇನ್ನೊಂದು ವಿಚಾರವೆಂದರೆ ಪ್ರತಿನಿತ್ಯ ಬರುವ ಸಾವಿರಾರು ಭಕ್ತರಲ್ಲಿ ೮೦% ಜನರು ಪ್ರಸಾದ – ವಸ್ತ್ರ – ಹೂವು ಇತ್ಯಾದಿಗಳನ್ನು ವ್ಯಾಪಾರಿಗಳ ಮೋಸಕ್ಕೋ ಒತ್ತಾಯಕ್ಕೊ ಅಥವಾ ಭಕ್ತಿಯಿಂದಲೋ ದೇವರಿಗೆ ಸಮರ್ಪಿಸುತ್ತಾರೆ . ಆದರೆ  ಸಮರ್ಪಿಸಿದ ಮರುಕ್ಷಣದಲ್ಲಿ ಅಲ್ಲಿಂದ ಅವುಗಳನ್ನು ತೆರವುಗೊಳಿಸಿ ಮುಂದೆ ಎಲ್ಲಿಗೆ ಸಾಗಿಸುತ್ತಾರೆ ಎಂಬುದು ಚಿದಂಬರ ರಹಸ್ಯ .
ಆ ಮನುಷ್ಯ ಬದುಕಿದ್ದಿದ್ದರೆ ಡಂಭಾಚಾರದ ಈ ಭಕ್ತಿಯನ್ನು ಬಯಸುತ್ತಿದ್ದನೇ.......
     ಮುಂದೆ ಶನಿ ಸಿಂಗಣಾಪುರ ಎಂಬ ದೇಗುಲಕ್ಕೆ ಹೋಗುವಾಗ ಮಾರ್ಗಮಧ್ಯೆ ಗದ್ದೆಯಲ್ಲಿ ಕಾಫಿ , ರಾತ್ರಿಯ ಅಡುಗೆ , ಚಿತ್ರ , ಮಾತು ಎಲ್ಲ ಮುಗಿಸಿ ದೇವಾಲಯದೆಡೆಗೆ ಸುಮಾರು ೪೦ಕಿ.ಮಿ ಹಾಳಾದ ರಾಷ್ಟ್ರೀಯ ಹೆದ್ದಾರಿಯನ್ನು ಕ್ರಮಿಸಲು ತೆಗೆದುಕೊಂಡ ಸಮಯ ಬರೊಬ್ಬರಿ ೨ ಘಂಟೆ .
ಈ ಊರಿನ ವಿಶೇಷತೆ ಎಂದರೆ ಯಾವುದೇ ಮನೆಗು ಬಾಗಿಲುಗಳಿಲ್ಲ.ಶನಿಯ ಪವಾಡ ಎಂದು ನಂಬಿರುವ ಇಲ್ಲಿ ಕಳ್ಳತನ ಆಗುವುದಿಲ್ಲವಂತೆ ,ನಿಜಸ್ಥಿತಿ ಕೂಡ.ಅಲ್ಲಿಯೂ ದರ್ಶನ ಮುಗಿಸಿದೆವು.
ಅಲ್ಲಿಂದ ವಾಹನದಲ್ಲಿ ಹೊರಟು ಮೂಕಾಂಬಿಕ ದೊಡ್ಡಮ್ಮ ತಂದ ಮಾವಿನ ಹಣ್ ಚಟ್ಟನ್ನು ತಿಂದು , ಭೋಜನ ಮುಗಿಸಿ
ಅಂತ್ಯಾಕ್ಷರಿ ಇತ್ಯಾದಿ ಮುಗಿದು ಪಂಡರಾಪುರದ ಹಾದಿಯಲ್ಲಿ ನಿದ್ದೆಗೆ ಶರಣಾದೆವು . ಬೆಳಗ್ಗೆ ೨ ಘಂಟೆಗೆ ಫಲಿಮಾರು ಮಠ ರಾಮಧಾಮಕ್ಕೆ ಬಂದು ಪೂರ್ವನಿಗದಿತ ಕೋಣೆಯಲ್ಲಿ ತಂಗಿದೆವು. ಬೆಳಗ್ಗೆ ತಿಂಡಿ ಮುಗಿಸಿ ೯ಘಂಟೆಗೆ ದೇವರ ದರ್ಶನಕ್ಕೆ ಹೋಗೋಣ ಎಂದಾಗ ನೆಮ್ಮದಿಯ ನಿದ್ದೆ ನಮ್ಮನ್ನಾವರಿಸಿತ್ತು.

೨೯.೬.೧೯ ಶನಿವಾರ ಸ್ಥಳ – ಪಂಡರಾಪುರ

ಬೆಳಗ್ಗೆ ಸ್ನಾನಾಹ್ನಿಕ ಉಪಾಹಾರಗಳೆಲ್ಲ ಮುಗಿದು ೯ಘಂಟೆಗೆ ಪಂಡರೀಶನ ದರ್ಶನಕ್ಕೆ ಆಟೊಗಳಲ್ಲಿ ಹೋಗಿ , ದೇವಸ್ಥಾನದಿಂದ ಸುಮಾರು ೧ಕಿ.ಮಿ ದೂರದಲ್ಲಿದ್ದ ಸರತಿ ಸಾಲಿನ ಬಳಿ ಇಳಿದು ಅಲ್ಲಿಂದ ಮತ್ತೆ ೫೦೦ಮೀ ಭೀಮಾನದಿಯ ತೀರದಲ್ಲೇ ನಡೆದು ಹನುಮಂತನ ಬಾಲದಂತಿದ್ದ ಸರತಿಸಾಲಿನ ಆರಂಭಕ್ಕೆ ಬಂದೆವು.ನಮ್ಮೊಂದಿಗಿದ್ದ ಮೂಕಾಂಬಿಕಾ ದೊಡ್ಡಮ್ಮ ದೇವಾಲಯದ ಬಳಿಯೇ ಸರತಿಗೆ ಸೇರುವೆ ಎಂದು ಅಲ್ಲೆ ಸಿಬ್ಬಂದಿಗಳೊಂದಿಗೆ ಮಾತನಾಡಿ ಅವಕಾಶ ಪಡೆದುಕೊಂಡರು ಕೂಡಾ.




ನಾವು ಸಾಲಿನಲ್ಲಿ ನಿಲ್ಲುವಾಗ ಸಮಯ ಬೆಳಗ್ಗೆ ೯.೪೫.

ವಿಷ್ಣು ಸಹಸ್ರನಾಮ ,ಲಲಿತಾ ಸಹಸ್ರನಾಮ , ಭಜನೆ ಇತ್ಯಾದಿಗಳಿಂದ ಸುಮಾರು ೩ ಘಂಟೆ ನಡೆಸಿದ ಈ ಸಾಲು ನಮಗೆ ಊರು-ಕೇರಿ –ಮಹಡಿ – ಜೋಪಡಿ ಹೀಗೆ ಪೂರ್ಣ ಪಂಡರಾಪುರವನ್ನೇ ತೋರಿಸಿತ್ತು.


ಈ ಸಾಲಿನಲ್ಲಿ ನಿಂತಾಗ ನಾಮ ಹಾಕಲೆಂದೇ ಹಲವರು ಕಾಯುತ್ತಿರುತ್ತಾರೆ. ನಾವು ಅತ್ತಿತ್ತ ನೋಡುವುದರೊಳಗೆ ನಾಮ ಹಣೆಗೆ ಬಿದ್ದಿರುತ್ತರೆ . ಮತ್ತೆ ದುಡ್ದು ಕೇಳುತ್ತಾರೆ .ಇಲ್ಲಿ ಅಬಾಲ ವೃದ್ಧರಾದಿ ಎಲ್ಲರೂ ನಾಮ ಹಾಕುವವರೇ . ಸಣ್ಣ ಮಕ್ಕಳೋ ಸರಿ . ಒಬ್ಬ ಸದೃಢ ಪುರುಷ ಹೀಗೆ ಹೇಳದೇ ಕೇಳದೆ ನಮ್ಮಲ್ಲೊಬ್ಬರಿಗೆ ನಾಮ ಹಾಕಿ ದುಡ್ಡಿಗಾಗಿ ಪರಿಪರಿಯಾಗಿ ಪೀಡಿಸಿ , ಕೊನೆಗೊಂದಿಷ್ಟು ಬೈದೂ ಹೋದ. ಇದು ಒಂದು ರೀತಿಯ ಜನಜೀವನ.
ಅದಲ್ಲದೆ ಸರತಿಯಲ್ಲಿದ್ದಾಗ ಭಿಕ್ಷುಕರು,ನೀರು ವ್ಯಾಪಾರಿಗಳೂ ,ತಿಂಡಿ ಹೂ ಮಾರುವವರೂ ಹೀಗೆ ಹಲವು ರೀತಿಯ ಜನರ ನಡುವೆ ನಮ್ಮ ಗಮನ ಸೆಳೆದದ್ದು ಒಬ್ಬಳು ಹೂ ಮಾರವ ಹುಡುಗಿ .
ಏಕೆಂದರೆ ಸರತಿಯಲ್ಲಿ ಕೈಯೊಡ್ಡಿ ಕೇಳುವ ಮಕ್ಕಳಿಗೆಲ್ಲ ಐದೊ ಹತ್ತೊ ರೂಪಾಯಿ ನೀಡುವ ಪರಿಪಾಠ ಇದ್ದ ನಮ್ಮ ತಂಡದ  ಒಬ್ಬ ಮಹಿಳೆ ಆ ಹೂ ಮಾರುವ ಸಣ್ಣ ಹುಡೂಗಿಗೂ ಅದೇಕೋ ಹತ್ತು ರೂ ನೀಡಿದ್ದರು. ಆಗ ಆ ಸಣ್ಣ ಹುಡುಗಿಯ ಮಾತಿಗೆ ನಾವೆಲ್ಲರೂ ದಂಗಾಗಿದ್ದು ನಿಜ. “ಹೂ ತೆಗೆದುಕೊಳ್ಳುವುದಾದರೆ ಮಾತ್ರ ದುಡ್ಡು  ನೀಡಿ ಇಲ್ಲವಾದಲ್ಲಿ ದುಡ್ದು ಬೇಡ” ಎಂದಿದ್ದಳು . ಅಬ್ಬಾ…ಅದೆಂತಹ ಪ್ರೌಢಿಮೆ ಅದೆಂತ ಸ್ವಾಭಿಮಾನದ ಬದುಕು ಆಕೆಯದ್ದು.ದುರ್ಜನರ ಮೋಸದ ಕೂಪದಂತಹ ಈ ಸಮಾಜದಲ್ಲಿ ಇದೆಂತಹ ಅಪ್ಪಟ ಚಿನ್ನ .ಈ ಮೊದಲಿನ ಅನುಭವಕ್ಕೂ ಇದಕ್ಕೂ ಅಜಗಜಾಂತರ ವ್ಯತ್ಯಾಸ .ಈಕೆ “ಕೆಸರಿನಲ್ಲಿರುವ ಕಮಲದಂತೆ” ಇದು ನಿಜವಾದ ಜೀವನ.ಆಕೆಯನ್ನು ದೇವ ಚೆನ್ನಾಗಿಟ್ಟಿರಲಿ ಎಂದು ಮನಸಾ ಸ್ಮರಿಸಿ ಮುಂದೆ ಮದ್ಯಾಹ್ನ ೧ಘಂಟೆಗೆ ದೇವಾಲಯವನ್ನು ಪ್ರವೇಶಿಸಿದೆವು.
ದೇವನನ್ನು ಕಣ್ತುಂಬ ಕಂಡು ಇಲ್ಲಿಯವರೆಗಿನ ಜಡವನೆಲ್ಲ ದೂಡಿ ತನುಮನದಲ್ಲಿ ಹೊಸ ಚೈತನ್ಯವನು ತುಂಬಿಕೊಂಡು ಹೊರ ಪ್ರಾಂಗಣಕ್ಕೆ ಬಂದೆವು . ಹಾ ..ದೇವಾಲಯದ ಒಳಗೆ ಇದ್ದ ಜನಜಂಗುಳಿಯನ್ನು ಓರ್ವ ರಕ್ಷಣಾ ಇಲಾಖೆಯ ಮಹಿಳಾ ಸಿಬ್ಬಂದಿಯು ನಿರ್ವಹಿಸುತಿದ್ದ ಪರಿ ಕಂಡು ...ಆಕೆಗೊಂದು ಸಲಾಂ ಹೇಳಿ , ವಿಠಲನ ಎದುರಲ್ಲಿ ಭಜನೆಯ ಅವಕಾಶ ಸಿಗಲಿಲ್ಲವಲ್ಲ ಎಂಬ ಕೊರಗು  ಮನದಲ್ಲಿದ್ದರೂ, ಆಲಯದ ಹೊರಾಂಗಣದಲ್ಲಿ ಭಜನೆಕುಣಿತ –ಉರುಳು ಸೇವೆ ಇತ್ಯಾದಿಗಳಿಂದ ಮನಸ್ಸನ್ನು ಹಗುರಾಗಿಸಿ ವಸತಿಗೃಹಕ್ಕೆ ಬಂದೆವು.( ಅಗಸ್ಟ ಮಾಸದವರೆಗೂ ಭಜನೆಗೆ ನೊಂದಣಿ ಆಗಿದ್ದರಿಂದ ನಮಗೆ ಅವಕಾಶ ಸಿಕ್ಕಿರಲಿಲ್ಲ. )
ಮದ್ಯಾಹ್ನ ಎಲ್ಲಾ ಸೇರಿ (ನನ್ನನ್ನು ಬಿಟ್ಟು ಎಕೆಂದರೆ ನಾನು ನಿದ್ದೆ ಮಾಡುತ್ತಿದ್ದೆ)  ಪಾಯಸಯುಕ್ತ ರುಚಿಯಾದ ಅಡುಗೆ ತಯಾರಿಸಿದ್ದರು.ಎಲ್ಲರೂ ಸವಿಯಾದ ಭೋಜನ ಮುಗಿಸಿ ವಿಶ್ರಾಂತಿಗೆಂದು ಹೊರಟೆವು.


ಆಗ  ಮಹಿಳೆಯರು  ’ಶಾಪಿಂಗ್ ’ ಹೊರಡಲನುವಾದರು .ಸಂಗೀತ ಉಪಕರಣಗಳು ಇಲ್ಲಿ ಅಗ್ಗಕ್ಕೆ ಸಿಗುತ್ತವೆ ಎಂಬ ಮಾತು ಕೇಳಿ ನಾನು ಉತ್ಸುಕನಾಗಿ(ವಸ್ತುತಃ ಸಂಗೀತದ ವಿಷಯದಲ್ಲಿ ಬಡವ ಆದರೂ ) ಮಹಿಳೆಯರ  ’ಶಾಪಿಂಗ್ ’ ನ ಭಯಂಕರತೆಯನ್ನು ಅರಿಯದೆ ಅವರೊಂದಿಗೆ   ಹೊರಟೆ .
ಎಲ್ಲರೂ ಸೇರಿ ಸಂಗೀತ ಉಪಕರಣಗಳಲ್ಲಿ ಹಾರ್ಮೋನಿಯಮ್ , ಕಂಜೀರ , ತಾಳ , ಡೋಲಕ್ , ತಂಬೂರ ಇತ್ಯಾದಿಗಳನ್ನು ಕೊಂಡು ನಂತರ ಮಹಿಳೆಯರ ತಂಡ ಸೀರೆ ಅಂಗಡಿಯತ್ತ ದಾಪುಗಾಲಿಟ್ಟಿತು.


ಅಬ್ಬಾ... ನಮ್ಮಗಳ ಪಾಡೋ ಹೇಳತೀರದು.
ಅಂತೂ ೧.೩೦ ಘಂಟೆಯ ನಂತರ ಅಲ್ಲಿಂದ ಹೊರಬಂದು ವನಿತಾಸ್ಯೂತ ಕೊಳ್ಳಲು ಹೊರಟರು . ನಾವುಗಳು ರಸ್ತೆ ಬದಿ ಕಾಯುತ್ತಾ ನಿಂತಾಗ ಕಂಡ ಈ ದೃಶ್ಯ ನಮ್ಮ ಪಾಲಿಗೆ ಆಶ್ಚರ್ಯವೆ ಸರಿ. ೧ರೂ ನಾಣ್ಯವನ್ನು ಆ ಯಂತ್ರದೊಳಗೆ ಹಾಕಿದಾಗ ೧ಲೀ ನೀರನ್ನು ನೀಡುತ್ತದೆ . ನಾವೂ ನಮ್ಮ ಬಾಟಲಿಗಳಲ್ಲಿ ನೀರು ತುಂಬಿಸಿಕೊಂಡು ಮತ್ತೆ ರಸ್ತೆಯ ಪಕ್ಕ ನಿಂತೆವು .ಇದಲ್ಲ ವಿಷಯ ...ಆಗ ಅಲ್ಲಿಗೆ ಬಂದ ಇಬ್ಬರು ಹತ್ತಿಪ್ಪತ್ತು  ಬಾಟಲಿಗಳಲ್ಲಿ ನೀರನ್ನು ತುಂಬಿಸಿಕೊಂಡದ್ದು ಅಸಲಿ ಆಶ್ಚರ್ಯ .ದೇವಾಲಯಕ್ಕೆ ಹೋಗುವಾಗ ಸಾಲಿನಲ್ಲಿ ನಿಂತು ದಣಿವ ಭಕ್ತರಿಗೆ ೨೦ ರೂಗೆ ೧ ಬಾಟಲಿಯಂತೆ  ಮಾರಾಟ ಮಾಡುವ ಪ್ರತಿಷ್ಠಿತ ಸಂಸ್ಥೆಯ ಹೆಸರುಳ್ಳ ನೀರಿನ ಬಾಟಲಿಗೆ ನೀರಿನ್ನು ಪೂರಕೆ ಮಾಡುತ್ತಿದ್ದದ್ದು ಇದೆ ಯಂತ್ರ...ಅಬ್ಬಾ ಆ ಮಹಾಶಯರು ಇಲ್ಲಿ ೧ರೂಗೆ ನೀರು ತುಂಬಿಸಿ ನಮಗೆ ೨೦ರೂಗೆ ಮಾರುತ್ತಿದ್ದರು . ಎಂತಾ ವ್ಯಾಪಾರ ಬುದ್ಧಿ...
ಇದೆಲ್ಲ ವಿಸ್ಮಯಗಳನ್ನು ಅರಗಿಸಿಕೊಂಡು ವಸತಿಗೃಹಕ್ಕೆ ಹಿಂದಿರುಗುವಾಗ ಕತ್ತಲಾಗಿತ್ತು .

ನಮ್ಮ ಮನದಲ್ಲಿದ್ದ  ಭಜನೆಯ ವಿಷಯದ ಕೊರಗು ವಿಠಲನಿಗೆ ಕೇಳಿಸಿತೊ ಎಂಬಂತೆ ,ಇಲ್ಲಿನ ಮಠದ ದೇವಳದಲ್ಲಿ ಭಜನೆಗೆ ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯವೇ ಸರಿ.ಇಲ್ಲೂ ವಿಶೇಷ ಅಂದರೆ ನಾನು ಕಂಜೀರ ಬಾರಿಸಿದ್ದು ( ನುಡಿಸುವಿಕೆಗೂ ಬಾರಿಸುವಿಕೆಗೂ ವ್ಯತ್ಯಾಸವಿದೆ ಎಂಬುದು ತಿಳಿದವರಿಗೆ ಗೊತ್ತು). ಕುಣಿತ ಭಜನೆಗಳು ಮುಗಿದು ರಾತ್ರಿಯ ಭೋಜನವನ್ನೂ ಮುಗಿಸಿ  ಚಂದ್ರಣ್ಣನೊಂದಿಗೆ ಪ್ರಯಾಣದ ಆಯ ವ್ಯಯ ಸಹಿತ ಲೆಕ್ಕಾಚಾರಗಳನ್ನು ಮುಗಿಸಿ ನಮ್ಮೂರಿನತ್ತ ಹೊರಟೆವು.

ದಿನಾಂಕ-೩೦-6-19 ಭಾನುವಾರ

ಬೆಳಗ್ಗೆ ೭ಘಂಟೆಗೆ ಯಲ್ಲಾಪುರದಲ್ಲಿ ಉಪಾಹಾರ ಮುಗಿಸಿ ಇನ್ನೂ ೪ ಘಂಟೆಯ ನಮ್ಮ ಪ್ರಯಾಣದಲ್ಲಿ ಯಾತ್ರೆಯ ಅನಿಸಿಕೆ-ಅನುಭವ ಹೇಳುವ ಹಾಗೆ  ತಂಡದ ಪ್ರತಿಯೊಬ್ಬರಿಗೂ ಹಾಡುವ ಅವಕಾಶವನ್ನು ನೀಡಿ  , ಆದಾದ ಮೇಲೆ ಮಾತು - ಕಥೆ, ಕೊನೆಗೆ ಅದೆಲ್ಲ ಮುಗಿದು ದಾರಿ ಸಾಗಿದಂತೆ ನಮ್ಮೆಲ್ಲರ ಮನವೂ ಭಾರವಾಗತೊಡಗಿತ್ತು .






ನಾಲ್ಕೈದು ದಿನಗಳ ಈ ಪಯಣ ಎಲ್ಲರ ಜೀವನದ ಒಂದು ಅದ್ಭುತ ಭಾಗ ಎಂದರೂ ತಪ್ಪಾಗಲಾರದು. ಆರಂಭದಲ್ಲಿದ್ದ ಅಪರಿಚಿತ ಭಾವ ಕರಗಿ ಸ್ನೇಹ ಉದಿಸಿ ,

ಈಗ ಆ ಸ್ನೇಹದ ವಿರಹ ಭಾವಕ್ಕೋ ಸ್ನೇಹದ ಔದಾರ್ಯಕ್ಕೋ , ಅಥವಾ ಆನಂದಕ್ಕೋ ,ಬೇಸರಕ್ಕೋ.... ಹಲವರ ಮನ , ಕೆಲವರ ಕಣ್ಣಂಚಲಿ ಆನಂದಭಾಷ್ಪ. ಎಲ್ಲರ ಮಾತು ಮುಗಿದು ಸಣ್ಣ ಮೌನ ಮನೆ ಮಾಡಿತ್ತು.ಈ ಯಾತ್ರೆ  ,ಭಜನೆ , ಊಟ, ದರ್ಶನ , ಮಾತು -ಕಥೆ , ಹರಟೆ,ಚರ್ಚೆ ಇನ್ನೊಬ್ಬರ ಕಾಲೆಳೆಯುವುದು...ಅಹಾ… ಈ ಯಾತ್ರೆ ಹಲವು ಭಾವಗಳ ರಸದೌತಣ.

ಮಧ್ಯಾಹ್ನ ೧ಘಂಟೆಗೆ ಶಂಕರನಾರಯಣ ತಲುಪಿ ಪಾತ್ರೆಗಳನ್ನು ವಿಪ್ರಭವನದಲ್ಲಿರಿಸಿ , ಶ್ರೀಮತಿ ಅಕ್ಕನ (ಉಪ್ಪೂರರ )ಮನೆಯಲ್ಲೇ ಊಟ ಮುಗಿಸಿ ಅದಾಗಲೇ ನನಗೆ ಸಿದ್ಧವಾಗಿದ್ದ ಹಾಸಿಗೆಯಲ್ಲಿ ಬಿದ್ದು ಗಡದ್ದಾಗಿ ನಿದ್ದೆ ಮಾಡಿದ್ದವನಿಗೆ ಸಂಜೆ ೬ಕ್ಕೆ ತೀರ್ಥರೂಪರ ಕರೆಯಿಂದಲೆ ಎಚ್ಚರವಾದದ್ದು.
ಸುಂದರ ಯಾತ್ರೆಯ ಚಂದದ ಅನುಭವಗಳನ್ನು ಮೆಲುಕು ಹಾಕುತ್ತಾ ,

ಖುಶಿಯ ಭಂಡಾರವನ್ನು ಮನದಲ್ಲಿ , ಒಗೆಯಲು ಇದ್ದ ಬಟ್ಟೆಯನ್ನು ಬೆನ್ನಲ್ಲಿ ಹೊತ್ತು  ನನ್ನ ವಿಕ್ರಾಂತನನ್ನೇರಿ ಮನೆಯೆಡೆಗೆ ಸಾಗಿದೆ.

||  ಸರ್ವೇ ಜನಾಃ ಸುಖಿನೋ ಭವಂತು  ||
                                                 
                                                         ✍️ ಪದ್ಮನಾಭ ಅಡಿಗ.ಟಿ
                                       Blog& Page - ADIGA CLICKS
                                                                  ( 9483917526 )

Wednesday, 26 December 2018

ಹಾರಿಹೋದ ಪಕ್ಷಿಪ್ರಾಣ.

ಎಂದಿನಂತೆ ನನ್ನ ಪಯಣದ ಜೊತೆಗಾರನಾದ ವಿಕ್ರಾಂತ್ 150 ಯನ್ನೇರಿ ಹೊರಟ ನನ್ನ ಪಯಣದ ಗಮ್ಯ ಕಾಪು ಕಡಲತೀರವಾಗಿತ್ತು.

ಮನದೊಳಗೆ ಮುಂದಿನ ಯೋಜನೆಗಳನ್ನೆಲ್ಲಾ ರೂಪಿಸುತ್ತಾ ,

ಪೂರ್ವಭಾವಿ ತಯಾರಿಗಳನ್ನೆಲ್ಲಾ ಮೆಲುಕು ಹಾಕುತ್ತಿದ್ದಾಗಲೇ ಜರುಗಿ ಹೋಯ್ತಲ್ಲ ಈ ಹೃದಯವಿದ್ರಾವಕ ಘಟನೆ….

ನೀನು ಆಟವಾಡುತ್ತಾ ಧುತ್ತನೆ ನನ್ನ ವಿಕ್ರಾಂತನ ಇದಿರು ಬಂದುಬಿಟ್ಟೆಯಲ್ಲ...ಹಾ...ಇದೇನಾಗಿಹೋಯ್ತು.

ಕಣ್ಮುಚ್ಚಿತೆರೆಯುವಷ್ಟರಲ್ಲಿ ಕಪ್ಪು ಟಾರಿನ ಮೇಲೆ ಬಿದ್ದು ವಿಲವಿಲನೆ ಒದ್ದಾಡುತ್ತಿದ್ದ ನಿನ್ನ ನೋಡಿ...ಅಂದುಕೊಂಡದ್ದು ಸತ್ಯ…”ಅತಿವೇಗ ಅಪಾಯಕ್ಕೆ ಕಾರಣ….ಅಜಾಗರೂಕತೆಯು ಮರಣಕ್ಕೆ ಹಾದಿ”….ಯಾರ ತಪ್ಪೆಂದು ಯೋಚಿಸಲಾಗದ ಈ ಸಮಯದಲ್ಲಿ….ವೈದ್ಯಶಾಲೆಯೂ ಹತ್ತಿರವಿಲ್ಲದೆ ಹೋಯ್ತಲ್ಲ…

ನಾನೇನು ಮಾಡಲಿನ್ನು...ದೂರದ ವೈದ್ಯರಲ್ಲಿಗೆ ಹೋಗುವಷ್ಟು ನಿನ್ನಲ್ಲಿ ಪ್ರಾಣವಿಲ್ಲ.

ಕೃಶಕುಸುಮಮೃದು ತನುವನು ನನ್ನ ಈ ಪಾಪಿ ಕರಗಳಲ್ಲೆತ್ತಿ ನನ್ನ

ಮಡಿಲಿಗೆ ನಿನ್ನನ್ನು ಹಾಕಿಕೊಂಡಿದ್ದೇನಷ್ಟೇ…ನಿನ್ನ ಅರೆತೆರೆದ ಕಣ್ಣುಗಳು ಹೇಳಹೊರಟಿದ್ದವು…. ನನ್ನ ಕೊಂದುಬಿಟ್ಟೆಯಲ್ಲ...ಎಂದು...ನಿನ್ನ ದೃಷ್ಟಿಯ ಇರಿತವನ್ನು ಸಹಿಸಲಾಗದೆ ನನ್ನಮನ ಪಾಪದ ಕೂಪದೊಳಗೆ ಇಳಿಯುತ್ತಿದೆ.

ಏನೂ ಮಾಡಲಾಗದ ಅಸಹಾಯಕನಾಗಿದ್ದೆ...ಜಗತ್ತು ಎಷ್ಟೇ ಮುಂದುವರೆದಿದ್ದರೂ ಕೆಲಸಮಯದಲಿ ನಾವು ನಶ್ವರ ಅನ್ನಿಸುತ್ತದೆ….ನಿನ್ನ ಪ್ರಾಣಪಕ್ಷಿ ಹಾರಿಹೋಗುವ ಸಂದರ್ಭ  ಪಾಪಪ್ರಜ್ಞೆ ಒಮ್ಮೆಲೆ ಭೋರ್ಗರೆಯತೊಡಗಿತು...

ನಿನಗೆ ತೊಟ್ಟು ನೀರೂ ಕೊಡಲಾಗದವನಾದೆ.ಅಯ್ಯೋ….

ಮುರಿದಕುತ್ತಿಗೆಯ ನಿನಗೆ ಸಾವು ಇದೀಗಲೇ ಮುಚ್ಚುತ್ತಿದ್ದ ಕಣ್ಣಾಲಿಗಳಿಂದ ಸನ್ನಿಹಿತವಾಗುತ್ತಿದೆ.ನಿನ್ನ ತನುವನು ಧರೆಗರ್ಪಿಸುತ್ತಿರುವೆ. ಇಗೋ ನನ್ನಕಡೆಯಿಂದ ನಿನಗೆ ಕೊನೆಯ ನಮನ.ಪ್ರಾಯಶ್ಚಿತ್ತದ ಅಕ್ಷರದ ಮೂಲಕ ನಿನಗರ್ಪಿಸುತ್ತಿರುವೆ.

                          ಓ ಅಗಲಿದ ಆತ್ಮವೇ

                                                   ಇಂತು

                                           ನಿನ್ನ ಕೊಲೆಗಾರ.

Thursday, 25 October 2018

ಚಾರ್ಮಾಡಿಯ ಸುತ್ತ.

ಈ ಬಾರಿಯ ನವರಾತ್ರಿಯ ನಂತರ ಒಬ್ಬಳನ್ನಾದರೂ ನೋಡಲೇಬೇಕೆಂಬ ನನ್ನ ಹಂಬಲಕೆ ...ಇಂಬು ಕೊಟ್ಟದ್ದು ಚಾರ್ಮಾಡಿಯ ಸನಿಹದ ಹಲವು ಹಾದಿಗಳು....
ದಶಮಿಯಂದು ಸಂಜೆ ಪ್ರದೀಪನ ಮನೆ ತಲುಪಿ...ಅಲ್ಲಿಂದ ಮರುದಿನ ಬೆಳಗ್ಗೆ ಸ್ನಾನೋಪಾಹಾರಗಳನ್ನೆಲ್ಲ ಮುಗಿಸಿ, ಸಾತ್ವಿಕನ ಆಗಮನ ಗಗನಕುಸುಮವಾದಾಗ ನಾನೊಬ್ಬನೇ ಹೊರಟು ನಿಂತದ್ದು ಯರ್ಮಾಯಿ ಹಾಗೂ ಇನ್ನಿತರ ಚಾರ್ಮಾಡಿಯ ಸಮೀಪದ ಜಲಸುಂದರಿಯರ ನೋಡಲು.
ಉಜಿರೆಗೆ ಬಂದು ಗೂಗಲ್ ಸಹಾಯ ಕೇಳಲು ನನ್ನ ದೂರವಾಣಿಯನ್ನು ಹಿಡಿದರೆ ....ನಾನು ಹ್ಯಾಂಗ್ ತೋರಿಸ್ಲೀ ಅಂತ ....ಹ್ಯಾಂಗ್ ಆಗ್ತಿತ್ತು....
ನಂತರ ಸ್ಥಳೀಯರ ಬಳಿ ಕೇಳಿ ಮೊದಲಿಗೆ ಎರ್ಮಾಯಿಗೆ ಹೋಗಲು ಹಾದಿ ಹಿಡಿದೆ...ಅಬ್ಬಾ....
ದುರ್ಗಮ ಹಾದಿಯ ಗುಪ್ತಸುಂದರಿ......
ನನಗೆ ಜೊತೆಯಾಗಿ ನನ್ನ ವಿಕ್ರಾಂತ್ 150  ನನ್ನೊಂದಿಗಿದ್ದ....ಅವನ ಸಹಕಾರ ಅತ್ಯಮೂಲ್ಯ.. ಅವನನ್ನು ಅವಳ ಹತ್ತಿರ ಕೊಂಡೊಯ್ಯಲು ಸಾಧ್ಯವಿರಲಿಲ್ಲ...ಸ್ವಲ್ಪ ದೂರ ನಡೆದು....ಊಹೆಮಾಡಿದ ಹಾದಿಯಲ್ಲಿ ಸಾಗಿ...ಕೊನೆಗೆ ಜಲಪಾತದ ಶಿರೋಭಾಗಕ್ಕೆ ತಲುಪಿ...ಅಷ್ಟಿಷ್ಟು ಚಿತ್ರಗಳನ್ನು ಕ್ಲಿಕ್ಕಿಸಿ...ಅಲ್ಲಿಂದ ಜೊತೆಗಾರನಲ್ಲಿಗೆ ಬಂದು , ಅವನನ್ನು ಕಾಡು- ಗುಡ್ಡ - ಕಲ್ಲು - ನದಿ ...ಹೀಗೆ ನಾನಾವಿಧ ಭಯಂಕರ ಮಾರ್ಗಗಳಲ್ಲಿ ನಡೆಸಿ ಮುಖ್ಯ ಹಾದಿಗೆ ತಿರುಗಿದೆ.
    ನಂತರ ಇನ್ನೊಬ್ಬ ಸುಂದರಿಯ ನೋಡಲು ಹೋಗಿ....ತೊರೆ ಪಕ್ಕದ ಮಾರ್ಗಗಳನನುಸರಿಸಿ ನಡೆವಾಗ ಬೆಂಗಳೂರಿನ ಒಂದು ತಂಡ ಆಕೆಯ ನೋಡಿ ಹಿಂದಿರುಗಿತ್ತು.ಅವರು ಕೇಳಿದ್ದು ನೋಡಿ ಈಗಲೂ ನಗು ಬರುತ್ತಿದೆ...."ಉಳಿದವರು ಹಿಂದಿದ್ದಾರಾ"... ಅಂತ....ಯಾರಿದ್ದಾರೆ ನನ್ನ ಬಿಟ್ಟು ....ಈ ಒಂಟಿಪಯಣಿಗನೊಂದಿಗೆ....
ಅಂತೂ ಹದಿನೈದು ನಿಮಿಷಗಳ ಸುಲಭ ಕಾಲ್ನಡಿಗೆಯ ಹಾದಿಯನು ಕ್ರಮಿಸಿ ಆಕೆಯ ಸನಿಹ ಬಂದಾಗ ವರುಣ ಭುವಿಯೆಡಗೆ ದೃಷ್ಟಿ ಹಾಯಿಸತೊಡಗಿದ್ದ.ಅದೂ ಭಯಂಕರ  ನಾದ - ಪ್ರಕಾಶಗಳ ಸಮ್ಮಿಲನದಲ್ಲಿ...ಆ ಅಲ್ಪ ಸಮಯದಲ್ಲೇ ಆಕೆಯ ಸೌಂದರ್ಯವ ಸವಿದು , ನನ್ನ ಸಹಚಾರಿಣಿಗೂ ತೋರಿಸುವಷ್ಟರಲ್ಲಿ , ಮುಸಲಧಾರೆ ಸುರಿಯತೊಡಗಿತ್ತು.
ನಾನು ಒದ್ದೆಯಾದರೂ ಸಮಸ್ಯೆಯಿಲ್ಲ....ಆದರೆ ನನ್ನೊಂದಿಗೆ ಬಂದ ನನ್ನ ಸಹಚಾರಿಣಿಗೆ ಮಳೆ ಎಂದರೆ ಅಲರ್ಜಿ.
ಅದಕ್ಕಾಗಿ ಓಡೋಡಿ ನನ್ನ ವಿಕ್ರಾಂತನ ಬಳಿಬಂದೆ...
ಆ ಬೆಂಗಳೂರಿನ ತಂಡದ ಓರ್ವ ಪೋರಿಯ ಕಾಲುಗಳು ಕಾಡಹಾದಿಯನ್ನು ಕಂಡದ್ದು ಇದೇ ಮೊದಲೇನೋ....ಪಾಪ...ಬೊಬ್ಬರಿಯುತ್ತಿದ್ದವು....
ಅವರುಗಳ ಆಗ್ರಹಕ್ಕೆ ಆ ಪೋರಿಯನು ಅವರ ವಾಹನದವರೆಗೂ ಕರೆದೊಯ್ಯುವ ಜವಾಬ್ದಾರಿ ನನ್ನದಾಯ್ತು....ನಾನಂತೂ ಪೂರಾ ಒದ್ದೆ...ವಿಕ್ರಾಂತನೂ ಇಂತಹ ದಾರಿಯನ್ನು ಈ ಮೊದಲು ಕಂಡವನಲ್ಲ...ನನ್ ಚೀಲವೂ ನೀರು....ಜೊತೆಯಲಿ  ಆ ಪೋರಿ...ಹೊರಟಿದ್ದೇನೋ ಸರಿ....ಮುಕ್ಕಾಲು ಹಾದಿ ಸವೆಯುವಷ್ಟರಲ್ಲಿ ಮಳೆಗೆ ಒದ್ದೆಯಾದ ಗುಡ್ಡದ ಮೇಲುಬದಿಗೆ ತಲಪುವ ಹಾದಿ ಅದಾಗಲೇ ಜಾರತೊಡಗಿತ್ತು.ಆ ಪೋರಿಯನ್ನು ಅಲ್ಲೇ ಇಳಿಸಿದರೂ ನನ್ನ ವಿಕ್ರಾಂತ ಜಪ್ಪಯ್ಯ ಎಂದರೂ ಮುಂದೆಹೋಗಗೊಡಲಿಲ್ಲ.
"ಸಹಾಯಕ್ಕೆ ಪ್ರತಿಫಲ ಬಯಸದಿದ್ದರೂ ಸಿಗುವುದು ಖಂಡಿತ " ಎಂಬುದಕ್ಕೆ ಈ ಸನ್ನಿವೇಶ ನಿದರ್ಶನ. ಆ ಬೆಂಗಳೂರು ಪೋರಿಯ ಸಂಗಡಿಗರು ನನ್ನ ವಿಕ್ರಾಂತನನ್ನು ಗುಡ್ಡ ಹತ್ತುವ  ತನಕ ಹಿಡಿದು ನನ್ನನ್ನಾವರಿಸಿದ್ದ ದುಗುಡ ಭಾವವನು ಕಳೆದರೆಂದರೂ ತಪ್ಪಾಗಲಾರದೇನೋ...
ಅಲ್ಲಿಂದ ಚಾರ್ಮಾಡಿಯ ಮಾರ್ಗದಲ್ಲಿ ಚಲಿಸುವಾಗ ಮಿತ್ರ ಸಾತ್ವಿಕನ ಕರೆ ನನ್ನನ್ನು ನಿಲ್ಲಿಸಿತು.ಅವನೂ ನನ್ನ ಜೊತೆಯಾಗುವೆನೆಂದಾಗ ಮುಂದೆ ಕೊಟ್ಟಿಗೆಹಾರದಲ್ಲಿ ಅವನಿಗಾಗಿ ತುಸು ಕಾಯುವ ನೆಪದಲ್ಲಿ ಕಾಫಿ ಹೀರಿ...ಅಲ್ಲಿಂದ ಮುಂದೆ ಹೊರನಾಡು - ಶೃಂಗೇರಿ ವೃತ್ತದಲ್ಲಿ ಸವಿತಾ ಕ್ಯಾಂಟಿನ್ ಅಲ್ಲಿ ಅಜ್ಜಿ ಮಾಡಿದ ಮೆಣಸಿನ ಬಜ್ಜಿ ತಿಂದು , ಸಾತ್ವಿಕನ ಆಗಮನದ ನಂತರ ಮತ್ತೊಮ್ಮೆ ಬಜ್ಜಿ - ಚಹಾ ಸವಿದು ಅಲ್ಲಿಂದ ಶೃಂಗೇರಿ ಗಣೇಶಸದನಕೆ ತಲುಪಿದೆವು.
ಅಲ್ಲಿ ...ನಾನು, ಸಾತ್ವಿಕ , ಹಂಗಾರಿ , ಗಣೇಶ , ಮತ್ತೊಬ್ಬ ಗಣೇಶ ಹೀಗೆ ಐವರ ಮಾತು ಮುಗಿಲು ಮುಟ್ಟದ್ದು ನಮ್ಮ ಪುಣ್ಯ, ಅಷ್ಟು ಹರಟೆ. ಮಧ್ಯೆ ಸಾತ್ವಿಕ ಕೇಳುವ ಪ್ರಶ್ನೆ ನಾಳೆ ಎಲ್ಲಿ ಹೋಗುದು?
ಅದಕ್ಕೊಂದು ಉತ್ತರ.....ಕಥೆ...ಓತ್ಲಾ...ಕ್ಯಾತನಮಕ್ಕಿ ಹೋಗಲು ಬೆಳಗ್ಗೆ ಐದು ಘಂಟೆಗೆ ಏಳುವುದು ಎಂದು ನಿಶ್ಚಯಿಸಿ ಮಲಗುವಾಗ ರಾತ್ರಿಯ ಕೊನೆಯ ಯಾಮ ಆರಂಭವಾಗಿತ್ತು.
ಮರುದಿನ ಐದು ಘಂಟೆಗೆ ಎದ್ದದ್ದು ಸರಿಯಾದರೂ ಹೊರಡುವ ಗಳಿಗೆ ಬದಲಾಗಿ....ಕ್ಯಾತನಮಕ್ಕಿಯಲ್ಲಿ ನೋಡಬೇಕೆಂದಿದ್ದ ಸೂರ್ಯೋದಯ ಮಧ್ಯದಾರಿಯಲೆ ಕಂಡೆವು.
ಅಲ್ಲಲ್ಲಿ ಫೋಟೋ..ನೆಲ್ಲಿ...ಹಾಗೆ ಹೀಗೆ ಎಂದು ಸವಾರಿ ನಿಂತು ನಿಂತು ಸಾಗಿ...ಕ್ಯಾತನಮಕ್ಕಿ ಎಂಬ ಸ್ವರ್ಗದ ಬಾಗಿಲಿನಂತಿದ್ದ
ಆ ಗುಡ್ಡದ ಬುಡಕ್ಕೆ ದುರ್ಗಮವೆಂದುಕೊಂಡ ಹಾದಿಯಲ್ಲಿ ಬಂದೆವು...ಯಾಕೆಂದರೆ ನಿಜವಾದ ದುರ್ಗಮ ಹಾದಿ ಮುಂದಿನದ್ದು.ಜೀಪ್ ನಲ್ಲಿ ಹೋಗಬೇಕಿದ್ದ ಆ ಪ್ರದೇಶಕ್ಕೆ ನಮ್ಮ ಬೈಕ್ನಲ್ಲೇ ಹೋಗುವ ಆಲೋಚನೆ - ನಿರ್ಧಾರ ಗಟ್ಟಿಯಾದಾಗ ಉತ್ಸಾಹ ನೂರ್ಮಡಿಯಾಗಿತ್ತು.
    ಆದರೆ  ಅರ್ಧ ಹಾದಿ ಕಡಿದಾದ ದಾರಿ ಕ್ರಮಿಸುವಷ್ಟರಲ್ಲಿ ನಮಗಿದಿರಾದ ಹಾದಿಯ ಕಂಡು ನಿಬ್ಬೆರಗಾಗಿ ..ನನ್ನ ವಿಕ್ರಾಂತನ ಚಾಲನೆಯ ಉಸ್ತುವಾರಿ ಗಣೇಶನ ಹೆಗಲಿಗೇರಿಸಿದೆ.
ಅಬ್ಬಬ್ಬಾ....ಅದೆಂತಹ ದಾರಿ....ಅಲ್ಲಲ್ಲಾ....ಹೊಂಡ...ಕಲ್ಲು....ಜಾರು ಮಣ್ಣು....ಗಾಡಿಯ ಚಕ್ರ ತಿರುಗುವುದು ಬಿಟ್ಟರೆ ಮುಂದೆ ಹೋಗುವುದೇ ಇಲ್ಲ...ಯಾಕಪ್ಪಾ ಬೈಕ್ ತಂದೆವೂ ಎಂಬಷ್ಟರಲ್ಲಿ ಜೀಪ್ ನಲ್ಲಿ ಬರುತ್ತಿದ್ದ ಇನ್ನೊಂದು ತಂಡದ ನಾಲ್ಕಾರು ಜನ ನಮ್ಮ ಸಹಾಯಕ್ಕೆ ಬಂದರು.
(ವಿ.ಸೂ-ಯಾರಾದರೂ ಹೋಗುವುದಿದ್ದರೆ ಜೀಪ್ನಲ್ಲೇ ಹೋಗುವುದು ಅತ್ಯುತ್ತಮ.)
ಹಾಗೂ ಹೀಗೂ ಗುಡ್ಡದ ಶಿಖರ ತಲುಪುವಷ್ಟರಲ್ಲಿ ಸಾಕು- ಸಾಕಾಗಿತ್ತು...
ಆದರೆ ಅಲ್ಲಿನ ಸೌಂದರ್ಯ ಅದೆಲ್ಲವನ್ನೂ ಮರೆಸಿ ಮನಸಲಿ ಆನಂದದ ಹೊಳೆಹರಿಯಲಾರ‌ಂಭಿಸಿದ್ದು ಅದಕ್ಕಿಂತ ನಿಜ...
ಸುತ್ತೆಲ್ಲಾ ನೋಡಿದರೂ ಹಸಿರ ಹೊದ್ದ ಪರ್ವತರಾಜನ ಅಂಗೋಪಾಂಗಗಳು ಕಣ್ಮನಗಳನ್ನು ಸೆಳೆಯುತ್ತಿತ್ತು.
ಒಂದೆಡೆ ನೀರಝರಿ...ಮಗದೊಂದೆಡೆ ಹಸಿರಸಿರಿ.
ಆಹಾ ...ಭುವಿಸ್ವರ್ಗವಯ್ಯಾ.....ಅದರಲ್ಲೂ ಭಾರತ್ ಮಹಾನ್....ಅಲ್ಲೂ ಕರ್ಣಾಟಕ ಸೌಂದರ್ಯದ ತವರೂರು.....ಆಹಾ.....ಸರಿವ ತಣ್ಣಗಿನ ಗಾಳಿ
 ಮೈಯ ಸೋಕಿ ಮನವ ಪುಳಕಿಸುತ್ತಿದ್ದವು.
ಅಲ್ಲಲ್ಲಾ ಚಿತ್ರಗಳನ್ನು ಕ್ಲಿಕ್ಕಿಸಿ ಮತ್ತೊಂದು ಗುಡ್ಡಕ್ಕೆ ಹೋಗುವ ಹಾದಿಯ ಪರಿಸ್ಥಿತಿ ನೋಡಿ ಅರ್ಧಕ್ಕೆ ಹಿಂತಿರುಗಿ , ಅಲ್ಲಿಂದ ವಾಪಾಸಾಗುವ ಆಲೋಚನೆ ಮಾಡುವಾಗ ಮನದಲ್ಲಿ ಅದಾಗಲೇ ದುಗುಡ ಆವರಿಸಿಯಾಗಿತ್ತು. ಹಾದಿಯ ನೆನೆದು.
ಆ ಹಾದಿಯ ಪರಿಯ ಆಲೋಚಿಸಿದರೇ ಮೈ ಜುಮ್ಮೆನ್ನುತ್ತದೆ.ಅಬ್ಬಬ್ಬಾ.....
ಅಂತೂ ಇಂತೂ ಕೆಳಗಿಳಿದು , ಮಧ್ಯದಲ್ಲಿ ಚಾ - ಬಿಸ್ಕತ್ತುಗಳನ್ನು ಸವಿದು ಗಣೇಶನ ಮನೆಗೆ ಬಂದು ಸ್ನಾನ ಮಾಡಿ
ಅದಾಗಲೇ ಜ್ಯೋತಿ ಅಕ್ಕ ಮಾಡಿಟ್ಟಿದ್ದ (ಉರ್ವಾರುಕ)
ಸೌತೆಕಾಯಿ ಕಡುಬನ್ನು ತಿಂದು...ಮಧ್ಯಾಹ್ನ ಭರ್ಜರಿ ಊಟವನ್ನೂ ಮಾಡಿ....ಭಯಂಕರ ಕ್ರಿಕೆಟ್ ಆಡಿ...ಸಂಜೆ ಅಲ್ಲಿಂದ ಹೊರಟು ಆಗುಂಬೆ ಮಾರ್ಗವಾಗಿ ಸಾತ್ವಿಕ ಆತನ ಮನೆ , ನಾನು ನಮ್ಮ ಸೂರಿನೆಡೆಗೆ ತಲುಪಿ....ಮತ್ತೆ ಮತ್ತೆ ಆ ರುದ್ರಭಯಂಕರ ಅನುಭವಗಳನ್ನು ಮೆಲುಕು ಹಾಕುತ್ತಿದ್ದೇನೆ....










Wednesday, 15 August 2018

ಔಷಧ ಕಂಪೆನಿಗಳ ಕರಾಳ ಮಾಫಿಯಾ ಮುಖವಾಡ.

ಹೀಗೊಂದು ಲೆಕ್ಕಾಚಾರ
           ಬೇರೆ  ಮೆಡಿಕಲ್ ನಲ್ಲಿ
ನನ್ನ ತಂದೆಯ ಒಂದು ಬಿಪಿ ಮಾತ್ರೆಗೆ 7.6₹
ನನ್ನ ದೊಡ್ಡಮ್ಮನ ಒಂದು ಬಿಪಿ ಮಾತ್ರೆಗೆ 5.8₹
         ಜನ್ ಔಷಧಿ ಕೇಂದ್ರದಲ್ಲಿ
ತಂದೆಯ ಒಂದು ಬಿಪಿ ಮಾತ್ರೆಗೆ 2.8₹
ದೊಡ್ಡಮ್ಮನ ಒಂದು ಬಿಪಿ ಮಾತ್ರೆಗೆ 0.9₹
          ನಾನು ಇಬ್ಬರಿಗೂ ಮೂರು ತಿಂಗಳಿಗೆ ಆಗುವಷ್ಟು ಮಾತ್ರೆ ತಂದಾಗ , ಬೇರೆ ಮೆಡಿಕಲ್ ನಲ್ಲಿ  1340₹ ಹಾಗೂ ಜನ್ ಔಷಧಿಯಲ್ಲಿ 370₹  ಎರಡಕ್ಕೂ ಇರುವ ವ್ಯತ್ಯಾಸ 1340₹ - 370₹= 970₹ , ಸರಿಸುಮಾರು  ಒಂದು ಸಾವಿರ ರೂಗಳ ವ್ಯತ್ಯಾಸ.
ಹಾಗಾದರೆ ಒಂದು  ವರ್ಷಕ್ಕೆ "3880₹".
       ( ನಾವು ಈವರೆಗೆ ಮಾತ್ರೆ ತರುತ್ತಿದ್ದ ಮೆಡಿಕಲ್ ಇರುವುದು ಹತ್ತಿರದ ಶಂಕರನಾರಾಯಣದಲ್ಲಿ (4km),
ಆದರೆ ಜನ್ ಔಷಧಿ ಕೇಂದ್ರ ಇರುವುದು ಕುಂದಾಪುರದಲ್ಲಿ(20km). ನಾನು ಈ ಕಾರಣಕ್ಕಾಗಿಯೇ ಕುಂದಾಪುರಕ್ಕೆ ಹೋದರೂ ಅಬ್ಬಬ್ಬಾ ಅಂದರೆ ತಗಲುವ  ಖರ್ಚು  200₹ . )
            ಇಷ್ಟು ವರ್ಷಗಳಿಂದ ಬಿಪಿ - ಶುಗರ್ ಗಳ ಹೆಸರಿನಲ್ಲಿ ಮೆಡಿಕಲ್ ಗಳ ಮೂಲಕ ಔಷಧ ಕಂಪೆನಿಗಳು  ಜನರ ಹಣವನ್ನು ದೋಚುತ್ತಿದ್ದ ಹಣ ........ಎಷ್ಟಾಗಬಹುದು....ಊಹಿಸಲೂ ಕಷ್ಟಸಾಧ್ಯ.
         ಕೇವಲ ಇಬ್ಬರಿಗೆ ಒಂದು ವರ್ಷಕ್ಕೆ 3880₹ ಆದರೆ ಭಾರತದಲ್ಲಿ ಕಡಿಮೆಯೆಂದರೂ ಕೇವಲ 40ಲಕ್ಷ ಜನ ಬಿಪಿ ಮಾತ್ರೆಯೊಂದನ್ನೇ ತೆಗೆದುಕೊಳ್ಳುತ್ತಾರೆ ಅಂದುಕೊಂಡರೆ ಅದರ ಮೊತ್ತ.........
(ಮಾತ್ರೆಯ ನಿಜವಾದ  ಖರ್ಚಲ್ಲ)
ಅಂದರೆ ಮೆಡಿಕಲ್ ಮಾಫಿಯಾ ಎಂಬ ಮಾಯಾಜಾಲ ಜನರನ್ನು ಸುಲಿಯುತ್ತಿದ್ದ ಹಣದ ಮೊತ್ತ
77600000000 ₹ .(ಏಳುಸಾವಿರದ ಏಳುನೂರಾ ಎಪ್ಪತ್ತಾರು ಕೋಟಿ )
ಇದು ಕೇವಲ ಒಂದು ಮಾತ್ರೆಯಿಂದ ದೋಚಿದ ಹಣ ಅಂದರೆ ನನ್ನಂತಹ ಕೋಟಿ ಜನರ ಒಂದು ವರ್ಷದ ದುಡಿಮೆಗೆ ಸಮ , ಅಥವಾ ಭಾರತದ ನೂರಿಪ್ಪತ್ತೈದು ಕೋಟಿ (125)ಜನರಿಗೆ
ಸುಮಾರು 2-3 ತಿಂಗಳುಗಳ ಕಾಲ  ಉಚಿತವಾಗಿ ಊಟ  ಕೊಡುವಷ್ಟು ......
         ಹಾಗಾದರೆ ಭಾರತದಲ್ಲಿ ಎಷ್ಟು ಕೋಟಿ ಜನ,
ಎಷ್ಟು ವರ್ಷಗಳಿಂದ , ಇಂತಹ ಎಷ್ಟು ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರಬಹುದು..‌‌‌ಅದರ ಮೊತ್ತ ಎಷ್ಟಾಗಬಹುದು.
( ಹಾಗೇ ಆಲೋಚಿಸಿದರೆ... ಸುಮಾರು   40 ಕೋಟಿ ಜನ ಕೇವಲ ಬಿಪಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ ಅಂದುಕೊಂಡರೆ ಒಂದು ವರ್ಷದ ಮೊತ್ತ  7.76e11₹.
ಹಾಗಾದರೆ  5 ಮಾತ್ರೆ  5ವರ್ಷಗಳಿಂದ ಎಂದು ಲೆಕ್ಕ ಮಾಡಿದಾಗ ಅದರ ಮೊತ್ತ 1.94e13 ₹ )
(ಈ ಮೊತ್ತಗಳನ್ನು Calculator ನಲ್ಲಿ ಕಾಣಬಹುದು.)
ಹಾಗೆ ಬಿಪಿ,ಶುಗರ್ , ಕ್ಯಾಲ್ಸಿಯಂ ಹೀಗೆ ಹತ್ತು ಹಲವಾರು ಕಾಯಿಲೆಗಳ ಸೋಗಿನಲ್ಲಿ ಜನರನ್ನು ದೋಚುತ್ತಿದ್ದ , ದೋಚುತ್ತಿರುವ ನಾವು ಹೀಗೇ ಮುಂದುವರೆದರೆ ಮುಂದೆಯೂ ದೋಚಬಹುದಾದ ಹಣದ ಮೊತ್ತ ಎಷ್ಟಾಗಬಹುದೆಂದು ಊಹಿಸಲೂ ಅಸಾಧ್ಯ. )
          ಕೊನೆಯ ಮಾತು.
ಸಾಧ್ಯವಾದಷ್ಟು ಜನ್ ಔಷಧಿ ಕೇಂದ್ರದಲ್ಲಿ ಔಷಧಗಳನ್ನು ಸ್ವೀಕರಿಸಿ , ನಿಮ್ಮ ಊರಿನಲ್ಲಿಯೂ ಕೇಂದ್ರದ ಸ್ಥಾಪನೆಗೆ ಮನವಿ ಸಲ್ಲಿಸಿ.
     (ವಿ .ಸೂ . ಕೇವಲ ಸಾಮಾನ್ಯ ವ್ಯಕ್ತಿಯಾಗಿ ಕೇಂದ್ರ ಸರಕಾರದ ಈ ಜನ್ ಔಷಧಿ ಯೋಜನೆಯನ್ನು ಪ್ರತಿಯೊಬ್ಬರಿಗೂ ತಲುಪಿಸುವ ನಿಟ್ಟಿನಲ್ಲಿ ಬರೆದಂಥ ಲೇಖನವೇ , ಹೊರತಾಗಿ ಯಾವುದೇ ಪಕ್ಷ , ವ್ಯಕ್ತಿಯ ಹೊಗಳಿಕೆಯ   ಅಥವಾ ಪ್ರಚಾರದ ಕುರಿತಾದದ್ದಲ್ಲ.)
📝 ಪದ್ಮನಾಭ ಅಡಿಗ
(9483917526)