ಎಂದಿನಂತೆ ನನ್ನ ಪಯಣದ ಜೊತೆಗಾರನಾದ ವಿಕ್ರಾಂತ್ 150 ಯನ್ನೇರಿ ಹೊರಟ ನನ್ನ ಪಯಣದ ಗಮ್ಯ ಕಾಪು ಕಡಲತೀರವಾಗಿತ್ತು.
ಮನದೊಳಗೆ ಮುಂದಿನ ಯೋಜನೆಗಳನ್ನೆಲ್ಲಾ ರೂಪಿಸುತ್ತಾ ,
ಪೂರ್ವಭಾವಿ ತಯಾರಿಗಳನ್ನೆಲ್ಲಾ ಮೆಲುಕು ಹಾಕುತ್ತಿದ್ದಾಗಲೇ ಜರುಗಿ ಹೋಯ್ತಲ್ಲ ಈ ಹೃದಯವಿದ್ರಾವಕ ಘಟನೆ….
ನೀನು ಆಟವಾಡುತ್ತಾ ಧುತ್ತನೆ ನನ್ನ ವಿಕ್ರಾಂತನ ಇದಿರು ಬಂದುಬಿಟ್ಟೆಯಲ್ಲ...ಹಾ...ಇದೇನಾಗಿಹೋಯ್ತು.
ಕಣ್ಮುಚ್ಚಿತೆರೆಯುವಷ್ಟರಲ್ಲಿ ಕಪ್ಪು ಟಾರಿನ ಮೇಲೆ ಬಿದ್ದು ವಿಲವಿಲನೆ ಒದ್ದಾಡುತ್ತಿದ್ದ ನಿನ್ನ ನೋಡಿ...ಅಂದುಕೊಂಡದ್ದು ಸತ್ಯ…”ಅತಿವೇಗ ಅಪಾಯಕ್ಕೆ ಕಾರಣ….ಅಜಾಗರೂಕತೆಯು ಮರಣಕ್ಕೆ ಹಾದಿ”….ಯಾರ ತಪ್ಪೆಂದು ಯೋಚಿಸಲಾಗದ ಈ ಸಮಯದಲ್ಲಿ….ವೈದ್ಯಶಾಲೆಯೂ ಹತ್ತಿರವಿಲ್ಲದೆ ಹೋಯ್ತಲ್ಲ…
ನಾನೇನು ಮಾಡಲಿನ್ನು...ದೂರದ ವೈದ್ಯರಲ್ಲಿಗೆ ಹೋಗುವಷ್ಟು ನಿನ್ನಲ್ಲಿ ಪ್ರಾಣವಿಲ್ಲ.
ಕೃಶಕುಸುಮಮೃದು ತನುವನು ನನ್ನ ಈ ಪಾಪಿ ಕರಗಳಲ್ಲೆತ್ತಿ ನನ್ನ
ಮಡಿಲಿಗೆ ನಿನ್ನನ್ನು ಹಾಕಿಕೊಂಡಿದ್ದೇನಷ್ಟೇ…ನಿನ್ನ ಅರೆತೆರೆದ ಕಣ್ಣುಗಳು ಹೇಳಹೊರಟಿದ್ದವು…. ನನ್ನ ಕೊಂದುಬಿಟ್ಟೆಯಲ್ಲ...ಎಂದು...ನಿನ್ನ ದೃಷ್ಟಿಯ ಇರಿತವನ್ನು ಸಹಿಸಲಾಗದೆ ನನ್ನಮನ ಪಾಪದ ಕೂಪದೊಳಗೆ ಇಳಿಯುತ್ತಿದೆ.
ಏನೂ ಮಾಡಲಾಗದ ಅಸಹಾಯಕನಾಗಿದ್ದೆ...ಜಗತ್ತು ಎಷ್ಟೇ ಮುಂದುವರೆದಿದ್ದರೂ ಕೆಲಸಮಯದಲಿ ನಾವು ನಶ್ವರ ಅನ್ನಿಸುತ್ತದೆ….ನಿನ್ನ ಪ್ರಾಣಪಕ್ಷಿ ಹಾರಿಹೋಗುವ ಸಂದರ್ಭ ಪಾಪಪ್ರಜ್ಞೆ ಒಮ್ಮೆಲೆ ಭೋರ್ಗರೆಯತೊಡಗಿತು...
ನಿನಗೆ ತೊಟ್ಟು ನೀರೂ ಕೊಡಲಾಗದವನಾದೆ.ಅಯ್ಯೋ….
ಮುರಿದಕುತ್ತಿಗೆಯ ನಿನಗೆ ಸಾವು ಇದೀಗಲೇ ಮುಚ್ಚುತ್ತಿದ್ದ ಕಣ್ಣಾಲಿಗಳಿಂದ ಸನ್ನಿಹಿತವಾಗುತ್ತಿದೆ.ನಿನ್ನ ತನುವನು ಧರೆಗರ್ಪಿಸುತ್ತಿರುವೆ. ಇಗೋ ನನ್ನಕಡೆಯಿಂದ ನಿನಗೆ ಕೊನೆಯ ನಮನ.ಪ್ರಾಯಶ್ಚಿತ್ತದ ಅಕ್ಷರದ ಮೂಲಕ ನಿನಗರ್ಪಿಸುತ್ತಿರುವೆ.
ಓ ಅಗಲಿದ ಆತ್ಮವೇ
ಇಂತು
ನಿನ್ನ ಕೊಲೆಗಾರ.