ಆವತ್ತು ಶ್ರೀಮತಿ ಅಕ್ಕ ನನಗೆ ದೂರವಾಣಿ ಕರೆ ಮಾಡಿ ,ಪದ್ನಾಪ (ನನ್ನನ್ನು ಅವರು ಕರೆಯುವುದು ಹೀಗೆ) ಪಂಡರಾಪುರಕ್ಕೆ ಹೋತ್ತ್ ನೀನೂ ಬಾ ಎಂದು ನನ್ನನ್ನು ಆಹ್ವಾನಿಸಿದಾಗ ಗೋಡೆಯ ಮೇಲೆ ದೀಪವಿಟ್ಟಂತೆ ನೋಡುವೆ ಎಂದೆ .
ಯಾತ್ರೆಗೆ ಹೋದ ಅನುಭವಕ್ಕೂ ಮೊದಲು ಹೋಗದೇ ಇದ್ದಿದ್ದರೆ ಏನೆಲ್ಲ ಕಳೆದುಕೊಳ್ಳುತ್ತಿದ್ದೆ ಎಂದು ಹೇಳುವುದು ಮುಖ್ಯ . ಏಕೆಂದರೆ ಈ ಯಾತ್ರೆ ನಮ್ಮ ಪೂರ್ಣ ಜೀವನವೆಂಬ ಕಾದಂಬರಿಯ ಒಂದು ಭಾಗವೆಂಬಂತಹ ಅದ್ಭುತ ಪಯಣ , ಸ್ನೇಹಾನುಭವಗಳ ಮಹಾಪೂರ , ಭಾವಗಳ ಸಮ್ಮಿಲನ , ಹಿರಿಯರ ಗಡಣದೊಳಗೆ ಈ ಕಿರಿಯನಿಗೊಂದು ಇರುವಿಕೆಯ ಅವಕಾಶ ತಪ್ಪಿ ಹೋಗುತ್ತಿತ್ತೇನೋ …
ನನ್ನ ಔದ್ಯೋಗಿಕ ವಿಷಯ ಇನ್ನೂ ನಿರ್ಧಾರಿತವಾಗಿಲ್ಲದಿದ್ದರಿಂದ ನಾನು ಶ್ರೀಮತಿ ಅಕ್ಕನಲ್ಲಿ ನೊಡುವೆ ಎಂದದ್ದಾಗಿತ್ತು . ಸ್ವಲ್ಪ ದಿನದ ನಂತರ ಅವರಿಗೆ ಕರೆ ಮಾಡಿ ನಾನೂ ಬರುವೆ ಎಂದಾಗ ಖುಷಿಯಿಂದ ಬಾ , ಹಾಗೆ ಹಣದ ವ್ಯವಹಾರ ನಿನಗೆ ಕೊಡುತ್ತೇನೆ ಎಂದು ದೊಡ್ದದೊಂದು ಜವಾಬ್ದಾರಿಯನ್ನು ನನಗೆ ವಹಿಸಿಬಿಟ್ಟರು .
೨೬.೦೬.೧೯ ಬುಧವಾರ. ಸ್ಥಳ – ಶಂಕರನಾರಾಯಣ
ಇನ್ನೂ ತುಂಬಾ ದಿನ ಇದೆ ಅಂದುಕೊಂಡಿದ್ದ ಆ ದಿನ ಬಂದೆಬಿಟ್ಟಿತು. ನಂದ್ಗೋಳಿ ಸೂರ್ಯ ಭಟ್ಟರ ಮನೆಯಲ್ಲಿ ಅದಾಗಲೆ ಅವರು ತಯಾರಿಸಿದ್ದ ರಾತ್ರಿಯ ಅಡುಗೆ ಮತ್ತು ತಂಡದ ಸದಸ್ಯರೆಲ್ಲ ಸೇರಿ ಮಾಡಿದ ಚಪಾತಿ ಹಾಗೆ ಸಿಹಿ – ಖಾರ ,ನೀರಿನ ವ್ಯವಸ್ಥೆ ಎಲ್ಲವನ್ನೂ ನಮ್ಮ ವಾಹನಕ್ಕೆ (ಬಸ್ ) ತುಂಬಿಸಿ ೨.೧೫ಕ್ಕೆ ನಮ್ಮ ಬಹುದಿನದ ಕನಸಾದ ಯಾತ್ರೆಯನ್ನು ಆರಂಭಿಸಿದೆವು .ಮಳೆರಾಯ ತುಂತುರು ಹನಿಗಳಿಂದ ನಮ್ಮನ್ನು ಹರಸಿ ಕಳುಹಿಸಿದ್ದ.
ಹೊಸ – ಹಳೆ ಪರಿಚಯದವರೊಂದಿಗೆ ಆರಂಭಗೊಂಡ ಈ ಪಯಣಕ್ಕೆ ಕುಂದಾಪುರದಲ್ಲಿ ಇನ್ನೂ ಕೆಲವರು ಸೇರಿ ೩೫ ಜನರ ನಮ್ಮ ತಂಡ ೩.೩೦ಕ್ಕೆ ಕುಂದಾಪುರದಿಂದ ಮಳೆರಾಯನ ಪೂರ್ಣ ಆಶೀರ್ವಾದಿಂದ ಕೊಲ್ಹಾಪುರದೆಡೆಗೆ ಹೊರಟಿತು.ಸುಮಾರು ೪೫೦ಕಿ.ಮಿ ದೂರ ೧೦ ಘಂಟೆಗಳ ಮೊದಲ ಹಂತದ ಪಯಣದ ಹಾದಿಯಾದ ಭಟ್ಕಳದಲ್ಲಿ ಕಾಫಿ ಇತ್ಯಾದಿಯೆಲ್ಲ ಮುಗಿಸಿ , ಪುನಃ ವಾಹನದಲ್ಲಿ ಕೂತಾಗ ಅಲ್ಲಿ ಸಜ್ಜಾಗಿದ್ದು ಮಾತಿನ ರಂಗಮಂಚ.ಯಲ್ಲಾಪುರದಲ್ಲಿ ಊಟಕ್ಕೆ ನಿಲ್ಲಿಸುವಾಗ ಮಾತು –ಕಥೆ –ಭಜನೆ ಇತ್ಯಾದಿಗಳಿಂದ ಸಮಯ ಸರಿದದ್ದೆ ತಿಳಿದಿರಲಿಲ್ಲ.
ಅದಾಗಲೇ ಅಡುಗೆ ತಯಾರಿಸಿ ತಂದದ್ದರಿಂದ ಐತಾಳರಿಗೆ ಮತ್ತು ಚಂದ್ರಣ್ಣಂಗೆ ಸ್ವಲ್ಪ ನಿರಾಳ (ಅಲಿಖಿತವಾಗಿ ಅಡುಗೆಯ ಜವಾಬ್ದಾರಿ ಹೊತ್ತದ್ದರಿಂದ).ಊಟ ಮುಗಿಸಿ ಪುನಃ ಗಾಡಿಯಲ್ಲಿ ಮಾತಿನ ಮಂಟಪದಲ್ಲಿ ಕುಣಿದು ದಣಿಯೆ ನಿದ್ರಾದೇವಿ ಮೆಲ್ಲನೆ ಒಬ್ಬೊಬರನ್ನೆ ತನ್ನ ತೆಕ್ಕೆಗೆ ಎಳೆದುಕೊಳ್ಳುತ್ತಿದ್ದಳು . ಬೆಳಗಿನ ಜಾವ ೨.೩೦ಕ್ಕೆಕೊಲ್ಹಾಪುರದ ರಾಜ್ ವಸತಿಗೃಹಕ್ಕೆ ಬಂದೆವು .
೨೭.೦೬.೧೯ ಗುರುವಾರ. ಸ್ಥಳ – ಕೊಲ್ಹಾಪುರ
ಈ ದಿನ ಮದ್ಯಾಹ್ನದ ಅಡುಗೆಗಾಗಿ ತಂದಿದ್ದ ಸಾಮಾನು – ಪಾತ್ರೆಗಳನ್ನೆಲ್ಲ ವಾಹನದಿಂದ ಇಳಿಸಿ ನಮಗೆ ನಿಗದಿಯಾದ ಕೋಣೆಗಳಿಗೆ ಕೊಂಡೊಯ್ದು ಇನ್ನೇನು ಮಲಗಬೇಕು ಎಂದಾಗ ಭಜನಾ ತಂಡದ ಗುರುಗಳಾದ ವೀಣಕ್ಕನ “ ಬೆಳಗ್ಗೆ ೪ಕ್ಕೆ ದೇವಸ್ಥಾನಕ್ಕೆ ಹೋಗಲು ತಯಾರಾಗಿರಿ “ ಎಂಬ ಸ್ವರ ಆ ಸಮಯಕ್ಕೆ – ಪರಿಸ್ಥಿತಿಗೆ ಕರ್ಣಕಠೋರವಾದದ್ದು ಸುಳ್ಳಲ್ಲ . ಚುಮು-ಚುಮು ಚಳಿಯಲ್ಲೂ ಆ ಕೂಡಲೇ ತಣ್ಣೀರಿನಸ್ನಾನ , ಪ್ರಾತರ್ವಿಧಿಗಳನ್ನೆಲ್ಲ ಪೂರೈಸಿ ಹಾಸಿಗೆಗೆ ಬಿದ್ದು ಕಣ್ಣು ಮುಚ್ಚುವಷ್ಟರಲ್ಲಿ ಘಂಟೆ ಐದಾಗಿತ್ತು . ಸಮೀಪದಲ್ಲೆ ಇದ್ದ ’’ ಶ್ರೀ ಕೊಲ್ಹಾಪುರ ಮಹಾಲಕ್ಷ್ಮಿ ದೇವಾಲಯಕ್ಕೆ “ ಕಾಲ್ನಡಿಗೆಯಲ್ಲೆ ಸಾಗಿ ದೇವಳದ ದಕ್ಷಿಣ ದ್ವಾರದಿಂದ ಪ್ರವೇಶಿಸಿದ್ದರಿಂದ ನೇರವಾಗಿ ಒಳ ಪ್ರಾಂಗಣ ತಲುಪಿ ಸುಲಭವಾಗಿ ದೇವಿಯ ದರುಶನ ಪಡೆವಾಗ ,ದ್ವಾರಪಾಲಕನ ಸೀಟಿ ನಾದಕ್ಕೆ ಬೆರಗಿ ಪ್ರದಕ್ಷಿಣೆ ಬಂದು ಅದಾಗಲೇ ನೆರೆದಿದ್ದ ಜನಸ್ತೋಮವನ್ನು ಒಳಗೊಂಡ ದೇವಳದ ಹೊರ ಪ್ರಾಂಗಣಕ್ಕೆ ಅಡಿಯಿಟ್ಟೆವು .ಭಜನಾ ತಂಡದ ಸದಸ್ಯರು ಆಲಯದಲಿ ದೇವಿಯನ್ನು “ಜಯ ಕೊಲ್ಹಾಪುರ ನಿಲಯೇ “ ಇತ್ಯಾದಿ ಭಜನೆಗಳಿಂದ ಸಂಪ್ರೀತಿಗೊಳಿಸಿ ಮಂಗಳ ಹಾಡಿ ಹೊರ ಬರುವಾಗ ನೇಸರನ ಬಾಲರಶ್ಮಿಯು ನಮ್ಮ ವದನಕ್ಕೆ ಮುತ್ತಿಕ್ಕಲು ಹವಣಿಸುತ್ತಿದ್ದವು. ಅಲ್ಲಿನ ಸುಂದರ ದೃಶ್ಯಗಳನ್ನು ನಮ್ಮ ಕೆಮರಾಗಳಲ್ಲಿ ಸೆರೆಹಿಡಿದು , ತಂಡದ ಚಿತ್ರವನ್ನೂ ಗ್ರಹಿಸಿ ಅಲ್ಲಿನ ವಿಶೇಷ ದೀಪಸ್ಥಂಭವನ್ನು ,
ಮಂಟಪಸ್ಥ ಬಾಲಶ್ವಾನ , ವಿಚಿತ್ರ ಪ್ರಾಣಿಯ ಶಿಲಾಪ್ರತಿಮೆಗಳನ್ನು ಕಂಡು ವಸತಿಗೃಹಕ್ಕೆ ಬಂದು ನಿದ್ದೆ ಕಣ್ಣಲ್ಲೇ ಉಪಾಹಾರ ಮುಗಿಸಿ ಮಲಗುವ ತಯಾರಿಗೆ ’ಶಾಪಿಂಗ್ ’ ಎಂಬ ಮಾಯೆಯು ಅಡ್ಡಿಪಡಿಸಿ , ಕೊಲ್ಹಾಪುರ ತಿರುಗಲು ಆರಂಭಿಸಿದೆವು .
ಸೀರೆ , ವಿಶೇಷ ಚರ್ಮದ ಪಾದರಕ್ಷೆ , ಖಾದಿವಸ್ತ್ರಗಳನ್ನಲ್ಲಾ ಖರೀದಿಸಿ ತಣ್ಣಗೆ ಕಬ್ಬಿನ ಹಾಲನ್ನು ಕುಡಿದು ಅದಾಗ ದೇವರ ದರುಶನ ಮುಗಿಸಿ ಹೊರಬಂದ ಶ್ರೀ ಅಣ್ಣಾ ಹಜಾರೆ ಅವರನ್ನೂ ಕಂಡು ...
ಚದುರಿ ಹೊಗಿದ್ದ ತಂಡದ ಸದಸ್ಯರೆಲ್ಲರನ್ನೂ ಒಡಗೂಡಿ ವಸತಿಗೃಹಕ್ಕೆ ಧಾವಿಸಿದೆವು . ಐತಾಳರು ಅದಾಗಲೇ ತಯಾರಿಸಿದ್ದ ಅಡುಗೆ , ಸಮಾನು ಸರಂಜಾಮುಗಳನ್ನ ವಾಹನಕ್ಕೆ ಹಾಕಿ ,ಅಲ್ಲಿಂದ ನಾರಾಯಣಪುರ ಬಾಲಾಜಿ ದೇವಾಲಯಕ್ಕೆ ಹೊರಟು ಮಾರ್ಗಮಧ್ಯದಲ್ಲೆ ಭೊಜನ ಮುಗಿಸಿ ,
ಸುಜಾತಕ್ಕನಿಗೆ ಸಿಕ್ಕಿದ ಒಂದೇ ಒಂದು ಮಾವಿನಹಣ್ಣನ್ನು ಕಾಡಿ ಪಡೆದು , ಕೆಲವರಿಗೆ ಪಾಲೂ ಕೊಟ್ಟು ನಾನೂ ತಿಂದು , ಕೊಂಡಳ್ಳಿ ಲಕ್ಷ್ಮಿ ಅಕ್ಕ ಮಾಡಿ ತಂದಿದ್ದ ಕೋಡುಬಳೆಯನ್ನ ತಿಂದು ದೇವಾಲಯಕ್ಕೆ ತಲುಪಿದೆವು.
ತಿರುಪತಿಯ ಪಡಿಯಚ್ಚಿನಂತ ಆ ದೇವಾಲಯವನ್ನು ಕಂಡು ಹೊರ ಬರುವಷ್ಟರಲ್ಲಿ ಮಳೆರಾಯನ ಆರ್ಭಟಕ್ಕೆ ನಮ್ಮ ವಾಹನದೆಡೆಗೆ ಓಡೋಡಿ ಬಂದರೆ ವಾಹನದಲ್ಲಿ ಸಾರಥಿಯಿಲ್ಲ , ನಮಗೆ ನಿಲ್ಲಲು ಸೂರಿಲ್ಲ . ಕೊನೆಗೆ ಅಲ್ಲೆ ಅಕ್ಕಪಕ್ಕದ ಬೀದಿವರ್ತಕರ ಜೋಪಡಿಯಲ್ಲಿ ಕೂತು
ಒಂದಷ್ಟು ಹರಟೆ ಮಾಡುವಷ್ಟರಲ್ಲಿ ಚಾಲಕ ಬಂದು ವಾಹನದ ಬಾಗಿಲು ತೆಗೆದು , ನಾವು ಅರ್ಧಂಬರ್ದ ಒದ್ದೆಯಾದ ವಸ್ತ್ರದಲ್ಲೆ ವಾಹನದಲ್ಲಿ ಆಸೀನರಾದೆವು .ಮುಂದೆ ಭರತಖಂಡದ ದ್ವಾದಶ ಜ್ಯೋತಿರ್ಲಿಂಗಗಳಲ್ಲೊಂದಾದ ನಾಸಿಕ್ ಪ್ರಾಂತದ ಶ್ರೀ ತ್ರ್ಯಂಬಕೇಶ್ವರನ ಸನ್ನಿಧಿಯತ್ತ ಪಯಣ .
ಮಾರ್ಗಮಧ್ಯೆ ಭೋಜನ ಮುಗಿಸಿ ನಾಸಿಕ್ ದೇವಾಲಯದಿಂದ ೩೦ಕಿ.ಮಿ ದೂರದ ಪೇಜಾವರ ಮಠದಲ್ಲಿ ಉಳಿಯಲು ವ್ಯವಸ್ಥಯಿದ್ದ ಕಾರಣ ಅಲ್ಲಿಗೆ ತಲುಪಿದೆವು.ಅಲ್ಲಿನ ಮಹದ್ವಾರದ ಒಳಗೆ ಮಲಗಿದ್ದ ದ್ವಾರಪಾಲಕನೋ ಬೆಳಗಿನ ಜಾವದ ಘೋರ ನಿದ್ರೆಯಲ್ಲಿದ್ದನು . ಕೂಗಿದರೂ ಧ್ವನಿ ಕೇಳಲಿಲ್ಲವೆ ಅವಗೆ ... ಮತ್ತೇನು ನಾನು ಅಲ್ಲಿನ ಮಹಾದ್ವಾರವನ್ನು ಮೆಲ್ಲಗೆ ಹಾರಿ ಅವನನ್ನು ಎಬ್ಬಿಸಿ ನನಗೆ ಬರುವ ಅಲ್ಪಸ್ವಲ್ಪ ಹಿಂದಿಯಿಂದ ನಿದ್ರೆಯ ಮಂಪರಿನಲ್ಲಿದ್ದ ಆತನಿಗೆ ಅರ್ಥ ಮಾಡಿಸಿದೆನು .ಆ ಬಳಿಕ ಆತ ಬಾಗಿಲನು ತೆರೆದು ನಮ್ಮ ಕೋಣೆಯನ್ನು ತೋರಿಸಿದನು.ಸುಮಾರು ೫೦ ಜನ ಮಲಗಲು ಇರುವಷ್ಟು ಜಾಗ.ಇಷ್ಟಾಗುವಾಗ ಬೆಳಗ್ಗೆ ೩.೪೫ ಘಂಟೆ . ಪ್ರಾತಃಕಾಲ ೫ಕ್ಕೆ ದೇವಾಲಯದಲ್ಲಿರಬೇಕು .
ದಿನಾಂಕ ೨೮.೬.೧೯ ಶುಕ್ರವಾರ ಸ್ಥಳ – ನಾಸಿಕ್
ಸುಮಾರು ೫.೧೫ಕ್ಕೆ ದೇವಾಲಯ ತಲುಪಿ ಮಹಾದ್ವಾರದಲ್ಲಿ ೨೦ ನಿಮಿಷ ಕಾದು ದೇವಾಲಯದ ದ್ವಾರ ಉದ್ಘಾಟನೆಯ ನಂತರ ದೇಗುಲವನ್ನು ಪ್ರವೇಶಿಸಿದೆವು . ಅಹಾ...
ಸುಂದರ ಶಿಲ್ಪಕಲೆಯ ಅದ್ಭುತ ಪ್ರಾಚೀನ ಶಿಲಾದೇಗುಲ.ಸರತಿಯಲ್ಲಿ ನಿಂತು ಜ್ಯೋತಿರ್ಲಿಂಗರೂಪಿ ತ್ರ್ಯಂಬಕೇಶ್ವರನನ್ನು ಕಂಡು ಆಲಯದ ಹೊರ ಪ್ರಾಂಗಣದ ಪ್ರಶಾಂತ ಸ್ಥಳದಲ್ಲಿ ಮನಸಿಗೆ ತೃಪ್ತಿಯಾಗುವಷ್ಟು ಹೊತ್ತು ಕುಳಿತು , ಚಿತ್ರಗಳನ್ನು ಗ್ರಹಿಸಿದ್ದು ನಾನು ಮಾತ್ರ. ಉಳಿದವರು ಈಶನನ್ನು ಭಜಿಸಿ ಹೊರಬಂದ ನಂತರ ತಂಡಚಿತ್ರವನ್ನು ಪಡೆದು
ಪೇಶ್ವೆಗಳ ಕಾಲದಲ್ಲಿ ಮರುನಿರ್ಮಾಣಗೊಂಡ ದೇಗುಲದ ಬಗ್ಗೆ ಚರ್ಚಿಸಿ ಅಲ್ಲಿಂದ ನಮ್ಮ ವಸತಿಗೃಹಕ್ಕೆ ತೆರಳಿ ನಾನು ಮಲಗಿದ್ದಷ್ಟೇ ಗೊತ್ತು .
ಸುಮಾರು ೯.೩೦ಕ್ಕೆ ಶ್ರೀಮತಿ ಅಕ್ಕ ನನ್ನನ್ನು ಕರೆದಾಗಲೇ ಎಚ್ಚರ , ಅರೆನಿದ್ದೆಯಲ್ಲೆ ಉಪಾಹಾರ ಮುಗಿಸಿ ಅಲ್ಲಿಂದ ಆಟೊವಾಲಾಗಳ ಜೊತೆ ಶೂರ್ಪನಖಾ ಗರ್ವಭಂಗ , ಭಾರತದ ಏಕೈಕ ಶೇಷಲಕ್ಷ್ಮಣ ದೇಗುಲ , ಗೋಶಾಲಾ , ಸೀತಾಪಹರಣ ಸ್ಥಳ , ತ್ರಿಮೂರ್ತಿ ಕುಂಡ ,
ಗೋದಾವರೀ ತೀರದಲ್ಲಿ ಕುಂಭಮೇಳ ನಡೆಯುವ ಸ್ಥಳ ,
೧೨ ಅಡಿ ಎತ್ತರದ ಉದ್ಭವ ಆಂಜನೇಯ ಮೂರ್ತಿ , ಭೈರವನಾಥ ದೇಗುಲ ಇತ್ಯಾದಿಗಳನ್ನು ಅವಸರದಲ್ಲಿ ಕಂಡು ಅಲ್ಲೆ ಬೀದಿ ಬದಿ ೩ಕೆಜಿಗೆ ೫೦ ಎಂದು ಬೊಬ್ಬಿರಿಯುತ್ತಿದ್ದ ವ್ಯಾಪಾರಿಯಲ್ಲಿ ೫೦ಕ್ಕೆ ೪ ಕೆಜಿ ದಾಳಿಂಬೆ ಕೊಂಡು ( ಅದರಲ್ಲಿ ೪ ಕೆಜಿ ಇರಲಿಲ್ಲ ನಾವು ಮೋಸಗೊಂಡದ್ದು , ಮತ್ತು ಒಂದೆ ದಿನಕ್ಕೆ ಅವುಗಳು ಹಾಳಾಗಿದ್ದವು )ವಸತಿಗೃಹಕ್ಕೆ ಬಂದೆವು.
ಅಲ್ಲಿಂದ ನೇರವಾಗಿ ಶಿರಡಿಗೆ ಸುಮಾರು ೧.೩೦ಕ್ಕೆ ತಲುಪಿ ಅಲ್ಲಿ ನಾವು ತಂದಿದ್ದ ಭೋಜನ ಮುಗಿಸಿ ದರುಶನಕ್ಕೆ ಅಣಿಯಾದೆವು.
ಈ ಕ್ಷೇತ್ರದಲ್ಲಿ ನನಗೊಬ್ಬನಿಗಲ್ಲದೆ ಹಲವರ ಮನಸಲ್ಲಿ ಉದ್ಭವಿಸಿದ ಕೆಲವು ಭಾವಗಳನ್ನು ಸಂಕೋಚವಾದರೂ ಹಂಚಿಕೊಳ್ಳುತ್ತೇನೆ .
ಇಲ್ಲಿ ವಾಹನ ನಿಲುಗಡೆ ಸ್ಥಳದಿಂದ ಶ್ರೀಕ್ಷೇತ್ರಕ್ಕೆ ಉಚಿತ ವಾಹನ ವ್ಯವಸ್ಥೆ ಇದ್ದದ್ದೇನೋ ಸರಿ , ಆದರೆ ಸಾವಿರಾರು ಜನ ಬರುವ ಸ್ಥಳದಲ್ಲಿ ಒಂದಂಕಿಯ ಉಚಿತ ವಾಹನ ವ್ಯವಸ್ಥೆ “ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ” ಎಂಬಂತಿತ್ತು. ನಾವು ಆಟೊದಲ್ಲಿ ದೇವಳದ ಒಂದನೆ ದ್ವಾರಕ್ಕೆ ಬಂದಿಳಿದೆವು.ಅಗ ಅಲ್ಲಿಯೆ ಪಕ್ಕದ ಅಂಗಡಿಯ ವ್ಯಾಪಾರಿಯೊಬ್ಬ ಕೈಯಲ್ಲಿ ಚೀಲವೊಂದನ್ನು ಹಿಡಿದು ನಮ್ಮಲ್ಲಿ ಚಪ್ಪಲಿಗಳನ್ನು ಇದಕ್ಕೆ ಹಾಕಿ ದುಡ್ಡು ಕೊಡುವುದು ಬೇಡ ಎಂದ . ಇದರೆಲ್ಲೇನೋ ಮೋಸವಿದೆ ಎಂದು ಹೇಳುವಷ್ಟರಲ್ಲಿ ಹಲವರು ತಮ್ಮ ಚಪ್ಪಲಿಗಳನ್ನು ಹಾಕಿಯಾಗಿತ್ತು , ಉಳಿದವರೂ ಅದೇ ಹಾದಿ ಹಿಡಿದರು . ಕೊನೆಯಲ್ಲುಳಿದ ನಾನೂ ಕೂಡ . ಅಲ್ಲೆ ಆಗಿದ್ದು ಯಡವಟ್ಟು . ಆತ ನನ್ನಲ್ಲಿ ಪ್ರಸಾದ ತೆಗೆದುಕೊಳ್ಳಿ ಎಂದ. ನಾನು ಬೇಡ ಎಂದಾಗ ೨-೩ ಜನ ಬಂದು ಒತ್ತಾಯಿಸಿದರು.ಅದಕ್ಕೂ ಜಗ್ಗದ ನಾನು ನನ್ನ ತಂಡದವರಿಗೆ ಇವರ ಮೋಸದ ಜಾಲದ ಬಗ್ಗೆ ಹೇಳಿದೆ. ಕೊನೆಗೆ ವಾದದಲ್ಲಿ ನಮ್ಮ ಕೈ ಮೇಲಾದಾಗ ಚೀಲದಲ್ಲಿದ್ದ ಅಷ್ಟೂ ಚಪ್ಪಲಿಗಳು ನೆಲಸೇರಿದವು. ಅದನ್ನು ಧರಿಸಿ ಮುಂದೆ ಹೋದಾಗ ದೇವಳದ ವತಿಯಿಂದ ಪಾದರಕ್ಷೆಯನ್ನು ಇಡುವ ಸ್ಥಳದ ಮಾರ್ಗಸೂಚಿ ಇತ್ತು.( ಆ ಫಲಕ ದ್ವಾರದ ಬಳಿಯೆ ಇದ್ದಿದ್ದರೆ ಚೆನ್ನವೆನೋ ಎಂಬುದು ನನ್ನ ಅಶಯ) ಅಲ್ಲಿಂದ ಚಪ್ಪಲಿಗಳನ್ನ ಇಡಬೇಕಾದ ಸ್ಥಳದಲ್ಲಿ ಇಟ್ಟು ಧರ್ಮದರ್ಶನಕ್ಕೆ ಹೊರಟೆವು .ಅದಕ್ಕೆ ಚೀಟಿ ಮಾಡಿಸಬೇಕೆಂದೂ ಅದು ಸುಮಾರು ೭೫೦ಮೀ ದೂರದಲ್ಲಿದೆಯೆಂದೂ ತಿಳಿದು ಅವಸರವಾಗಿ ಅಲ್ಲಿಗೆ ಹೋಗಿ ಅಂತೂ ಚೀಟಿ ಮಾಡಿಸಿದೆವು .ಅಲ್ಲಿನ ವ್ಯವಸ್ಥೆ ಅಬ್ಬಾ....ಕೆಮರಾ ,ಕಂಪ್ಯೂಟರ್ , ಬೆರಳಚ್ಚು ಯಂತ್ರ , QR ಕೋಡ್ ಒಳಗೊಂಡ ಚೀಟಿ ನೋಡುಗರಿಗೆ ದಿಗ್ಭ್ರಮೆ ಹುಟ್ಟಿಸುವ ನಾಟಕದ ಪೊಳ್ಳು (ಅ)ವ್ಯವಸ್ಥೆ . ಯಾಕೆಂದರೆ ಆ ಕೆಮರಾಗಳು ಪೋಟೊ ತೆಗೆಯುವುದೆ ಇಲ್ಲ , ಬೆರಳಚ್ಚು ಯಂತ್ರವಂತೂ ಸೆನ್ಸಾರ್ ತಂತ್ರಜ್ಞಾನವೋ ಎಂಬಂತೆ ಅದನ್ನು ಸ್ಪರ್ಶಿಸುವುದರೊಳಗೇ ಚೀಟಿ ನಮ್ಮ ಕೈ ಸೇರಿಯಾಗಿತ್ತು. ಮಹಿಳೆಯರೊಬ್ಬರಿಗೆ (male) ಪುರುಷ ಎಂದು ಟಂಕಿಸಿದ್ದ ಚೀಟಿ ಸಿಕ್ಕಿದ್ದು ಸಿಬ್ಬಂದಿಗಳ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿ.
ಅಂದರೆ ಮೊದಲೇ ಟಂಕಿಸಿದ ಚೀಟಿಗಳನ್ನು ನಮಗೆ ನೀಡುತ್ತಿದ್ದರು ಎಂದರೆ ತಪ್ಪು ಎಸೆಯುತ್ತಿದ್ದರು ಎನ್ನಬಹುದು. ಇಷ್ಟಾಗುವಾಗ ದರುಶನ ಬೇಕೇ ಎಂಬ ಪ್ರಶ್ನೆ ಮೂಡಿದ್ದೂ ಸುಳ್ಳಲ್ಲ.ಮತ್ತೆ ೧.೩೦ ಘಂಟೆಗಳ ಸರತಿ.ಅಲ್ಲಿ ಪುನಃ ನಮ್ಮ ಕೈಯಲ್ಲಿದ್ದ ಚೀಟಿಯನ್ನು ಪರೀಕ್ಷಿಸುವ (scan) ನಾಟಕ. ನಮ್ಮ ಬಗ್ಗೆ ಯಾವುದೇ ಮಾಹಿತಿಯಿಲ್ಲದ ಆ ಚೀಟಿಯನ್ನು ಏಕೆ ಪರೀಕ್ಷಿಸಿದರು ಎಂಬುದು ಕೊನೆವರೆಗೂ ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿಯಿತು .
ಕೊನೆಗೂ ಸಾಯಿಬಾಬರ ಮೂರ್ತಿಯನ್ನು ಕಂಡು ದೇಗುಲದ ಮತ್ತೊಂದು ದ್ವಾರದಿಂದ ಹೊರಬಂದು ನಮ್ಮ ಪಾದರಕ್ಷೆಗಳನ್ನು ತೆಗೆದುಕೊಳ್ಳುವಾಗ ಸಾಕು ಸಾಕೆನಿಸಿದ್ದು ಸುಳ್ಳಲ್ಲ .
ಇನ್ನೊಂದು ವಿಚಾರವೆಂದರೆ ಪ್ರತಿನಿತ್ಯ ಬರುವ ಸಾವಿರಾರು ಭಕ್ತರಲ್ಲಿ ೮೦% ಜನರು ಪ್ರಸಾದ – ವಸ್ತ್ರ – ಹೂವು ಇತ್ಯಾದಿಗಳನ್ನು ವ್ಯಾಪಾರಿಗಳ ಮೋಸಕ್ಕೋ ಒತ್ತಾಯಕ್ಕೊ ಅಥವಾ ಭಕ್ತಿಯಿಂದಲೋ ದೇವರಿಗೆ ಸಮರ್ಪಿಸುತ್ತಾರೆ . ಆದರೆ ಸಮರ್ಪಿಸಿದ ಮರುಕ್ಷಣದಲ್ಲಿ ಅಲ್ಲಿಂದ ಅವುಗಳನ್ನು ತೆರವುಗೊಳಿಸಿ ಮುಂದೆ ಎಲ್ಲಿಗೆ ಸಾಗಿಸುತ್ತಾರೆ ಎಂಬುದು ಚಿದಂಬರ ರಹಸ್ಯ .
ಆ ಮನುಷ್ಯ ಬದುಕಿದ್ದಿದ್ದರೆ ಡಂಭಾಚಾರದ ಈ ಭಕ್ತಿಯನ್ನು ಬಯಸುತ್ತಿದ್ದನೇ.......
ಮುಂದೆ ಶನಿ ಸಿಂಗಣಾಪುರ ಎಂಬ ದೇಗುಲಕ್ಕೆ ಹೋಗುವಾಗ ಮಾರ್ಗಮಧ್ಯೆ ಗದ್ದೆಯಲ್ಲಿ ಕಾಫಿ , ರಾತ್ರಿಯ ಅಡುಗೆ , ಚಿತ್ರ , ಮಾತು ಎಲ್ಲ ಮುಗಿಸಿ ದೇವಾಲಯದೆಡೆಗೆ ಸುಮಾರು ೪೦ಕಿ.ಮಿ ಹಾಳಾದ ರಾಷ್ಟ್ರೀಯ ಹೆದ್ದಾರಿಯನ್ನು ಕ್ರಮಿಸಲು ತೆಗೆದುಕೊಂಡ ಸಮಯ ಬರೊಬ್ಬರಿ ೨ ಘಂಟೆ .
ಈ ಊರಿನ ವಿಶೇಷತೆ ಎಂದರೆ ಯಾವುದೇ ಮನೆಗು ಬಾಗಿಲುಗಳಿಲ್ಲ.ಶನಿಯ ಪವಾಡ ಎಂದು ನಂಬಿರುವ ಇಲ್ಲಿ ಕಳ್ಳತನ ಆಗುವುದಿಲ್ಲವಂತೆ ,ನಿಜಸ್ಥಿತಿ ಕೂಡ.ಅಲ್ಲಿಯೂ ದರ್ಶನ ಮುಗಿಸಿದೆವು.
ಅಲ್ಲಿಂದ ವಾಹನದಲ್ಲಿ ಹೊರಟು ಮೂಕಾಂಬಿಕ ದೊಡ್ಡಮ್ಮ ತಂದ ಮಾವಿನ ಹಣ್ ಚಟ್ಟನ್ನು ತಿಂದು , ಭೋಜನ ಮುಗಿಸಿ
ಅಂತ್ಯಾಕ್ಷರಿ ಇತ್ಯಾದಿ ಮುಗಿದು ಪಂಡರಾಪುರದ ಹಾದಿಯಲ್ಲಿ ನಿದ್ದೆಗೆ ಶರಣಾದೆವು . ಬೆಳಗ್ಗೆ ೨ ಘಂಟೆಗೆ ಫಲಿಮಾರು ಮಠ ರಾಮಧಾಮಕ್ಕೆ ಬಂದು ಪೂರ್ವನಿಗದಿತ ಕೋಣೆಯಲ್ಲಿ ತಂಗಿದೆವು. ಬೆಳಗ್ಗೆ ತಿಂಡಿ ಮುಗಿಸಿ ೯ಘಂಟೆಗೆ ದೇವರ ದರ್ಶನಕ್ಕೆ ಹೋಗೋಣ ಎಂದಾಗ ನೆಮ್ಮದಿಯ ನಿದ್ದೆ ನಮ್ಮನ್ನಾವರಿಸಿತ್ತು.
೨೯.೬.೧೯ ಶನಿವಾರ ಸ್ಥಳ – ಪಂಡರಾಪುರ
ಬೆಳಗ್ಗೆ ಸ್ನಾನಾಹ್ನಿಕ ಉಪಾಹಾರಗಳೆಲ್ಲ ಮುಗಿದು ೯ಘಂಟೆಗೆ ಪಂಡರೀಶನ ದರ್ಶನಕ್ಕೆ ಆಟೊಗಳಲ್ಲಿ ಹೋಗಿ , ದೇವಸ್ಥಾನದಿಂದ ಸುಮಾರು ೧ಕಿ.ಮಿ ದೂರದಲ್ಲಿದ್ದ ಸರತಿ ಸಾಲಿನ ಬಳಿ ಇಳಿದು ಅಲ್ಲಿಂದ ಮತ್ತೆ ೫೦೦ಮೀ ಭೀಮಾನದಿಯ ತೀರದಲ್ಲೇ ನಡೆದು ಹನುಮಂತನ ಬಾಲದಂತಿದ್ದ ಸರತಿಸಾಲಿನ ಆರಂಭಕ್ಕೆ ಬಂದೆವು.ನಮ್ಮೊಂದಿಗಿದ್ದ ಮೂಕಾಂಬಿಕಾ ದೊಡ್ಡಮ್ಮ ದೇವಾಲಯದ ಬಳಿಯೇ ಸರತಿಗೆ ಸೇರುವೆ ಎಂದು ಅಲ್ಲೆ ಸಿಬ್ಬಂದಿಗಳೊಂದಿಗೆ ಮಾತನಾಡಿ ಅವಕಾಶ ಪಡೆದುಕೊಂಡರು ಕೂಡಾ.
ನಾವು ಸಾಲಿನಲ್ಲಿ ನಿಲ್ಲುವಾಗ ಸಮಯ ಬೆಳಗ್ಗೆ ೯.೪೫.
ವಿಷ್ಣು ಸಹಸ್ರನಾಮ ,ಲಲಿತಾ ಸಹಸ್ರನಾಮ , ಭಜನೆ ಇತ್ಯಾದಿಗಳಿಂದ ಸುಮಾರು ೩ ಘಂಟೆ ನಡೆಸಿದ ಈ ಸಾಲು ನಮಗೆ ಊರು-ಕೇರಿ –ಮಹಡಿ – ಜೋಪಡಿ ಹೀಗೆ ಪೂರ್ಣ ಪಂಡರಾಪುರವನ್ನೇ ತೋರಿಸಿತ್ತು.
ಈ ಸಾಲಿನಲ್ಲಿ ನಿಂತಾಗ ನಾಮ ಹಾಕಲೆಂದೇ ಹಲವರು ಕಾಯುತ್ತಿರುತ್ತಾರೆ. ನಾವು ಅತ್ತಿತ್ತ ನೋಡುವುದರೊಳಗೆ ನಾಮ ಹಣೆಗೆ ಬಿದ್ದಿರುತ್ತರೆ . ಮತ್ತೆ ದುಡ್ದು ಕೇಳುತ್ತಾರೆ .ಇಲ್ಲಿ ಅಬಾಲ ವೃದ್ಧರಾದಿ ಎಲ್ಲರೂ ನಾಮ ಹಾಕುವವರೇ . ಸಣ್ಣ ಮಕ್ಕಳೋ ಸರಿ . ಒಬ್ಬ ಸದೃಢ ಪುರುಷ ಹೀಗೆ ಹೇಳದೇ ಕೇಳದೆ ನಮ್ಮಲ್ಲೊಬ್ಬರಿಗೆ ನಾಮ ಹಾಕಿ ದುಡ್ಡಿಗಾಗಿ ಪರಿಪರಿಯಾಗಿ ಪೀಡಿಸಿ , ಕೊನೆಗೊಂದಿಷ್ಟು ಬೈದೂ ಹೋದ. ಇದು ಒಂದು ರೀತಿಯ ಜನಜೀವನ.
ಅದಲ್ಲದೆ ಸರತಿಯಲ್ಲಿದ್ದಾಗ ಭಿಕ್ಷುಕರು,ನೀರು ವ್ಯಾಪಾರಿಗಳೂ ,ತಿಂಡಿ ಹೂ ಮಾರುವವರೂ ಹೀಗೆ ಹಲವು ರೀತಿಯ ಜನರ ನಡುವೆ ನಮ್ಮ ಗಮನ ಸೆಳೆದದ್ದು ಒಬ್ಬಳು ಹೂ ಮಾರವ ಹುಡುಗಿ .
ಏಕೆಂದರೆ ಸರತಿಯಲ್ಲಿ ಕೈಯೊಡ್ಡಿ ಕೇಳುವ ಮಕ್ಕಳಿಗೆಲ್ಲ ಐದೊ ಹತ್ತೊ ರೂಪಾಯಿ ನೀಡುವ ಪರಿಪಾಠ ಇದ್ದ ನಮ್ಮ ತಂಡದ ಒಬ್ಬ ಮಹಿಳೆ ಆ ಹೂ ಮಾರುವ ಸಣ್ಣ ಹುಡೂಗಿಗೂ ಅದೇಕೋ ಹತ್ತು ರೂ ನೀಡಿದ್ದರು. ಆಗ ಆ ಸಣ್ಣ ಹುಡುಗಿಯ ಮಾತಿಗೆ ನಾವೆಲ್ಲರೂ ದಂಗಾಗಿದ್ದು ನಿಜ. “ಹೂ ತೆಗೆದುಕೊಳ್ಳುವುದಾದರೆ ಮಾತ್ರ ದುಡ್ಡು ನೀಡಿ ಇಲ್ಲವಾದಲ್ಲಿ ದುಡ್ದು ಬೇಡ” ಎಂದಿದ್ದಳು . ಅಬ್ಬಾ…ಅದೆಂತಹ ಪ್ರೌಢಿಮೆ ಅದೆಂತ ಸ್ವಾಭಿಮಾನದ ಬದುಕು ಆಕೆಯದ್ದು.ದುರ್ಜನರ ಮೋಸದ ಕೂಪದಂತಹ ಈ ಸಮಾಜದಲ್ಲಿ ಇದೆಂತಹ ಅಪ್ಪಟ ಚಿನ್ನ .ಈ ಮೊದಲಿನ ಅನುಭವಕ್ಕೂ ಇದಕ್ಕೂ ಅಜಗಜಾಂತರ ವ್ಯತ್ಯಾಸ .ಈಕೆ “ಕೆಸರಿನಲ್ಲಿರುವ ಕಮಲದಂತೆ” ಇದು ನಿಜವಾದ ಜೀವನ.ಆಕೆಯನ್ನು ದೇವ ಚೆನ್ನಾಗಿಟ್ಟಿರಲಿ ಎಂದು ಮನಸಾ ಸ್ಮರಿಸಿ ಮುಂದೆ ಮದ್ಯಾಹ್ನ ೧ಘಂಟೆಗೆ ದೇವಾಲಯವನ್ನು ಪ್ರವೇಶಿಸಿದೆವು.
ದೇವನನ್ನು ಕಣ್ತುಂಬ ಕಂಡು ಇಲ್ಲಿಯವರೆಗಿನ ಜಡವನೆಲ್ಲ ದೂಡಿ ತನುಮನದಲ್ಲಿ ಹೊಸ ಚೈತನ್ಯವನು ತುಂಬಿಕೊಂಡು ಹೊರ ಪ್ರಾಂಗಣಕ್ಕೆ ಬಂದೆವು . ಹಾ ..ದೇವಾಲಯದ ಒಳಗೆ ಇದ್ದ ಜನಜಂಗುಳಿಯನ್ನು ಓರ್ವ ರಕ್ಷಣಾ ಇಲಾಖೆಯ ಮಹಿಳಾ ಸಿಬ್ಬಂದಿಯು ನಿರ್ವಹಿಸುತಿದ್ದ ಪರಿ ಕಂಡು ...ಆಕೆಗೊಂದು ಸಲಾಂ ಹೇಳಿ , ವಿಠಲನ ಎದುರಲ್ಲಿ ಭಜನೆಯ ಅವಕಾಶ ಸಿಗಲಿಲ್ಲವಲ್ಲ ಎಂಬ ಕೊರಗು ಮನದಲ್ಲಿದ್ದರೂ, ಆಲಯದ ಹೊರಾಂಗಣದಲ್ಲಿ ಭಜನೆಕುಣಿತ –ಉರುಳು ಸೇವೆ ಇತ್ಯಾದಿಗಳಿಂದ ಮನಸ್ಸನ್ನು ಹಗುರಾಗಿಸಿ ವಸತಿಗೃಹಕ್ಕೆ ಬಂದೆವು.( ಅಗಸ್ಟ ಮಾಸದವರೆಗೂ ಭಜನೆಗೆ ನೊಂದಣಿ ಆಗಿದ್ದರಿಂದ ನಮಗೆ ಅವಕಾಶ ಸಿಕ್ಕಿರಲಿಲ್ಲ. )
ಮದ್ಯಾಹ್ನ ಎಲ್ಲಾ ಸೇರಿ (ನನ್ನನ್ನು ಬಿಟ್ಟು ಎಕೆಂದರೆ ನಾನು ನಿದ್ದೆ ಮಾಡುತ್ತಿದ್ದೆ) ಪಾಯಸಯುಕ್ತ ರುಚಿಯಾದ ಅಡುಗೆ ತಯಾರಿಸಿದ್ದರು.ಎಲ್ಲರೂ ಸವಿಯಾದ ಭೋಜನ ಮುಗಿಸಿ ವಿಶ್ರಾಂತಿಗೆಂದು ಹೊರಟೆವು.
ಆಗ ಮಹಿಳೆಯರು ’ಶಾಪಿಂಗ್ ’ ಹೊರಡಲನುವಾದರು .ಸಂಗೀತ ಉಪಕರಣಗಳು ಇಲ್ಲಿ ಅಗ್ಗಕ್ಕೆ ಸಿಗುತ್ತವೆ ಎಂಬ ಮಾತು ಕೇಳಿ ನಾನು ಉತ್ಸುಕನಾಗಿ(ವಸ್ತುತಃ ಸಂಗೀತದ ವಿಷಯದಲ್ಲಿ ಬಡವ ಆದರೂ ) ಮಹಿಳೆಯರ ’ಶಾಪಿಂಗ್ ’ ನ ಭಯಂಕರತೆಯನ್ನು ಅರಿಯದೆ ಅವರೊಂದಿಗೆ ಹೊರಟೆ .
ಎಲ್ಲರೂ ಸೇರಿ ಸಂಗೀತ ಉಪಕರಣಗಳಲ್ಲಿ ಹಾರ್ಮೋನಿಯಮ್ , ಕಂಜೀರ , ತಾಳ , ಡೋಲಕ್ , ತಂಬೂರ ಇತ್ಯಾದಿಗಳನ್ನು ಕೊಂಡು ನಂತರ ಮಹಿಳೆಯರ ತಂಡ ಸೀರೆ ಅಂಗಡಿಯತ್ತ ದಾಪುಗಾಲಿಟ್ಟಿತು.
ಅಬ್ಬಾ... ನಮ್ಮಗಳ ಪಾಡೋ ಹೇಳತೀರದು.
ಅಂತೂ ೧.೩೦ ಘಂಟೆಯ ನಂತರ ಅಲ್ಲಿಂದ ಹೊರಬಂದು ವನಿತಾಸ್ಯೂತ ಕೊಳ್ಳಲು ಹೊರಟರು . ನಾವುಗಳು ರಸ್ತೆ ಬದಿ ಕಾಯುತ್ತಾ ನಿಂತಾಗ ಕಂಡ ಈ ದೃಶ್ಯ ನಮ್ಮ ಪಾಲಿಗೆ ಆಶ್ಚರ್ಯವೆ ಸರಿ. ೧ರೂ ನಾಣ್ಯವನ್ನು ಆ ಯಂತ್ರದೊಳಗೆ ಹಾಕಿದಾಗ ೧ಲೀ ನೀರನ್ನು ನೀಡುತ್ತದೆ . ನಾವೂ ನಮ್ಮ ಬಾಟಲಿಗಳಲ್ಲಿ ನೀರು ತುಂಬಿಸಿಕೊಂಡು ಮತ್ತೆ ರಸ್ತೆಯ ಪಕ್ಕ ನಿಂತೆವು .ಇದಲ್ಲ ವಿಷಯ ...ಆಗ ಅಲ್ಲಿಗೆ ಬಂದ ಇಬ್ಬರು ಹತ್ತಿಪ್ಪತ್ತು ಬಾಟಲಿಗಳಲ್ಲಿ ನೀರನ್ನು ತುಂಬಿಸಿಕೊಂಡದ್ದು ಅಸಲಿ ಆಶ್ಚರ್ಯ .ದೇವಾಲಯಕ್ಕೆ ಹೋಗುವಾಗ ಸಾಲಿನಲ್ಲಿ ನಿಂತು ದಣಿವ ಭಕ್ತರಿಗೆ ೨೦ ರೂಗೆ ೧ ಬಾಟಲಿಯಂತೆ ಮಾರಾಟ ಮಾಡುವ ಪ್ರತಿಷ್ಠಿತ ಸಂಸ್ಥೆಯ ಹೆಸರುಳ್ಳ ನೀರಿನ ಬಾಟಲಿಗೆ ನೀರಿನ್ನು ಪೂರಕೆ ಮಾಡುತ್ತಿದ್ದದ್ದು ಇದೆ ಯಂತ್ರ...ಅಬ್ಬಾ ಆ ಮಹಾಶಯರು ಇಲ್ಲಿ ೧ರೂಗೆ ನೀರು ತುಂಬಿಸಿ ನಮಗೆ ೨೦ರೂಗೆ ಮಾರುತ್ತಿದ್ದರು . ಎಂತಾ ವ್ಯಾಪಾರ ಬುದ್ಧಿ...
ಇದೆಲ್ಲ ವಿಸ್ಮಯಗಳನ್ನು ಅರಗಿಸಿಕೊಂಡು ವಸತಿಗೃಹಕ್ಕೆ ಹಿಂದಿರುಗುವಾಗ ಕತ್ತಲಾಗಿತ್ತು .
ನಮ್ಮ ಮನದಲ್ಲಿದ್ದ ಭಜನೆಯ ವಿಷಯದ ಕೊರಗು ವಿಠಲನಿಗೆ ಕೇಳಿಸಿತೊ ಎಂಬಂತೆ ,ಇಲ್ಲಿನ ಮಠದ ದೇವಳದಲ್ಲಿ ಭಜನೆಗೆ ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯವೇ ಸರಿ.ಇಲ್ಲೂ ವಿಶೇಷ ಅಂದರೆ ನಾನು ಕಂಜೀರ ಬಾರಿಸಿದ್ದು ( ನುಡಿಸುವಿಕೆಗೂ ಬಾರಿಸುವಿಕೆಗೂ ವ್ಯತ್ಯಾಸವಿದೆ ಎಂಬುದು ತಿಳಿದವರಿಗೆ ಗೊತ್ತು). ಕುಣಿತ ಭಜನೆಗಳು ಮುಗಿದು ರಾತ್ರಿಯ ಭೋಜನವನ್ನೂ ಮುಗಿಸಿ ಚಂದ್ರಣ್ಣನೊಂದಿಗೆ ಪ್ರಯಾಣದ ಆಯ ವ್ಯಯ ಸಹಿತ ಲೆಕ್ಕಾಚಾರಗಳನ್ನು ಮುಗಿಸಿ ನಮ್ಮೂರಿನತ್ತ ಹೊರಟೆವು.
ದಿನಾಂಕ-೩೦-6-19 ಭಾನುವಾರ
ಬೆಳಗ್ಗೆ ೭ಘಂಟೆಗೆ ಯಲ್ಲಾಪುರದಲ್ಲಿ ಉಪಾಹಾರ ಮುಗಿಸಿ ಇನ್ನೂ ೪ ಘಂಟೆಯ ನಮ್ಮ ಪ್ರಯಾಣದಲ್ಲಿ ಯಾತ್ರೆಯ ಅನಿಸಿಕೆ-ಅನುಭವ ಹೇಳುವ ಹಾಗೆ ತಂಡದ ಪ್ರತಿಯೊಬ್ಬರಿಗೂ ಹಾಡುವ ಅವಕಾಶವನ್ನು ನೀಡಿ , ಆದಾದ ಮೇಲೆ ಮಾತು - ಕಥೆ, ಕೊನೆಗೆ ಅದೆಲ್ಲ ಮುಗಿದು ದಾರಿ ಸಾಗಿದಂತೆ ನಮ್ಮೆಲ್ಲರ ಮನವೂ ಭಾರವಾಗತೊಡಗಿತ್ತು .
ನಾಲ್ಕೈದು ದಿನಗಳ ಈ ಪಯಣ ಎಲ್ಲರ ಜೀವನದ ಒಂದು ಅದ್ಭುತ ಭಾಗ ಎಂದರೂ ತಪ್ಪಾಗಲಾರದು. ಆರಂಭದಲ್ಲಿದ್ದ ಅಪರಿಚಿತ ಭಾವ ಕರಗಿ ಸ್ನೇಹ ಉದಿಸಿ ,
ಈಗ ಆ ಸ್ನೇಹದ ವಿರಹ ಭಾವಕ್ಕೋ ಸ್ನೇಹದ ಔದಾರ್ಯಕ್ಕೋ , ಅಥವಾ ಆನಂದಕ್ಕೋ ,ಬೇಸರಕ್ಕೋ.... ಹಲವರ ಮನ , ಕೆಲವರ ಕಣ್ಣಂಚಲಿ ಆನಂದಭಾಷ್ಪ. ಎಲ್ಲರ ಮಾತು ಮುಗಿದು ಸಣ್ಣ ಮೌನ ಮನೆ ಮಾಡಿತ್ತು.ಈ ಯಾತ್ರೆ ,ಭಜನೆ , ಊಟ, ದರ್ಶನ , ಮಾತು -ಕಥೆ , ಹರಟೆ,ಚರ್ಚೆ ಇನ್ನೊಬ್ಬರ ಕಾಲೆಳೆಯುವುದು...ಅಹಾ… ಈ ಯಾತ್ರೆ ಹಲವು ಭಾವಗಳ ರಸದೌತಣ.
ಮಧ್ಯಾಹ್ನ ೧ಘಂಟೆಗೆ ಶಂಕರನಾರಯಣ ತಲುಪಿ ಪಾತ್ರೆಗಳನ್ನು ವಿಪ್ರಭವನದಲ್ಲಿರಿಸಿ , ಶ್ರೀಮತಿ ಅಕ್ಕನ (ಉಪ್ಪೂರರ )ಮನೆಯಲ್ಲೇ ಊಟ ಮುಗಿಸಿ ಅದಾಗಲೇ ನನಗೆ ಸಿದ್ಧವಾಗಿದ್ದ ಹಾಸಿಗೆಯಲ್ಲಿ ಬಿದ್ದು ಗಡದ್ದಾಗಿ ನಿದ್ದೆ ಮಾಡಿದ್ದವನಿಗೆ ಸಂಜೆ ೬ಕ್ಕೆ ತೀರ್ಥರೂಪರ ಕರೆಯಿಂದಲೆ ಎಚ್ಚರವಾದದ್ದು.
ಸುಂದರ ಯಾತ್ರೆಯ ಚಂದದ ಅನುಭವಗಳನ್ನು ಮೆಲುಕು ಹಾಕುತ್ತಾ ,
ಖುಶಿಯ ಭಂಡಾರವನ್ನು ಮನದಲ್ಲಿ , ಒಗೆಯಲು ಇದ್ದ ಬಟ್ಟೆಯನ್ನು ಬೆನ್ನಲ್ಲಿ ಹೊತ್ತು ನನ್ನ ವಿಕ್ರಾಂತನನ್ನೇರಿ ಮನೆಯೆಡೆಗೆ ಸಾಗಿದೆ.
|| ಸರ್ವೇ ಜನಾಃ ಸುಖಿನೋ ಭವಂತು ||
✍️ ಪದ್ಮನಾಭ ಅಡಿಗ.ಟಿ
Blog& Page - ADIGA CLICKS
( 9483917526 )