Tuesday, 30 May 2017

ಮಹಾಪ್ರಯಾಣ

ಮಹಾಪ್ರಯಾಣ

ಬಿರುಬಿಸಿಲಿನ ಝಳಕ್ಕೆ ಬೆಂದು  ಬೊಬ್ಬೆ ಬಂದ ಕಾಲುಗಳನ್ನು ಎಳೆದುಕೊಂಡು ಮಲೆನಾಡಿನ ಹೆಬ್ಬಾಗಿಲಾದ ಆಗುಂಬೆಯ ಕಪ್ಪು ಹಾದಿಯಲ್ಲಿ ನಡೆಯುತ್ತಿದ್ದ ಗುರುಪಾದಪ್ಪ . ಅವನ ಈ ಪಯಣ ಗತಜೀವಗಳನ್ನು , ಆ ಭಾವಗಳನ್ನು ನೆನಪ ಸರಪಳಿಯಾಗಿ ಕಾಡಿ ಮನಸನ್ನು ಮಡುಗಟ್ಟಿಸುತ್ತಿತ್ತು .

ಹಚ್ಚ ಹಸುರಿನ ಸೀರೆಯುಟ್ಟ ಆಗುಂಬೆಯಲ್ಲಿ ನಟ್ಟನಡು ಮಧ್ಯಾಹ್ನ ಸೂರ್ಯ ತನ್ನ ಉಗ್ರ ಪ್ರತಾಪವನ್ನು ಕಿರಣಗಳ ಮೂಲಕ ಭುವಿಗೆ ತೋರ ಹೊರಟಂತಿತ್ತು .ತಾಳಲಾರದ ಆ ಬೇಗೆಯಲ್ಲಿಯೂ, ಕಾಲಲ್ಲಿರುವ ಬೊಕ್ಕೆಯನ್ನೂ ಲೆಕ್ಕಿಸದೇ ಹುಬ್ಬಳ್ಳಿಯನ್ನು ತಲುಪುವ ಧಾವಂತದಲ್ಲಿ ಆತ ಹೆಜ್ಜೆ ಹಾಕುತ್ತಿದ್ದ . ಎಂಟನೇ ದಿನದ ಅವನ ಈ ಮಹಾಪ್ರಯಾಣ ಊಟ ಇದ್ದೋ ಇಲ್ಲದೆಯೂ...ನಿದ್ದೆ ಇದ್ದೂ ಇಲ್ಲದೆಯೂ..ಸಾಗುತ್ತಿತ್ತು. ಆದರೆ ಮನಸ್ಸು ಮಾತ್ರ ಅವನನ್ನು ಭೂತದೆಡೆಗೆ ಕೊಂಡೊಯ್ದಿತ್ತು .

ಏಂಟು ತಿಂಗಳ ಹಿಂದೆ ಅವನದ್ದು ತುಂಬು ಸಂಸಾರ . ಮನೆಯೂ ತುಂಬಿತ್ತು ಜನಗಳಿಂದ .ಅಲ್ಲಿ ಖುಶಿಗೆ ಬಡತನವಿರಲಿಲ್ಲ... ಹಾಗಂತ ಬಡತನಕ್ಕೂ ಕೊರತೆಯಿರಲಿಲ್ಲ . ಅವನ ಹೆಂಡತಿ ಲಚ್ಚಿ , ಮಗಳು ಗೌರಿ , ಮಗ ಬಸವ ಶಾಲೆಗೆ ಹೋಗುತ್ತಿದ್ದ . ದುಡಿದರೆ ಊಟ ,ಅಂತಹ ಕೆಲಸ. ವಯಸ್ಸಿಗೆ ಬಂದ ಮಗಳನ್ನು ಸೋದರಿಕೆಯ ಸಂಬಂಧದಲ್ಲಿಯೆ ಮದುವೆ ಮಾಡಿಸಿದ್ದ.ಅವನ ಅಳಿಯ ಅವನ ಹೆಂಡತಿಯ ಸ್ವಂತ ತಮ್ಮ .ಮದುವೆ ಖರ್ಚಿಗೆಂದು ಸಾಹುಕಾರನಲ್ಲಿ ಸಾಲ ಮಾಡಿದ್ದ.

ಗ್ರಹಚಾರ ಕೆಟ್ಟರೆ ಕಷ್ಟ ತಲೆ ಮೇಲೆ ಕೂರುತ್ತದೆಂಬುದಕ್ಕೆ ಗುರುಪಾದಪ್ಪನ ಜೀವನವೇ ಜ್ವಲಂತ ಸಾಕ್ಷಿ . ಮದುವೆಯ ಸಂಭ್ರಮವೆಲ್ಲ ಮುಗಿದು ಯಥಾಪ್ರಕಾರದ ಜೀವನಕ್ಕೆ ತಿರುಗಿ , ಸೌದೆ ತರಲು ಊರ ಹೊರಗೆ ಹೋಗಿದ್ದ ಅವನ ಜೀವಕ್ಕೆ ಜೀವವಾಗಿದ್ದ ಅವನ ಅರ್ಧಾಂಗಿ ಅವನ ಪ್ರೀತಿಯ ಲಚ್ಚಿ ಯಾವುದೋ ಗಾಡಿಯ ಬುಡಕ್ಕೆ ಸಿಕ್ಕಿ ಜೀವ ಕಳೆದುಕೊಂಡಿದ್ದಳು .ಹಣವಿದ್ದವನೇ ಬಲವಂತ ಎಂಬುದೇ ನ್ಯಾಯವಾಗಿದ್ದರಿಂದ ಆ ಅಪರಾಧಿಯಿಂದ  ನ್ಯಾಯವೂ ಲಚ್ಚಿಯೊ್ಡನೆ ಬೀದಿಬದಿಯ ಹೆಣವಾಯ್ತು .

ಇಬ್ಬರೂ ಸೇರಿ ದುಡಿದು ಸಾಲವನ್ನು ಬೇಗನೆ ತೀರಿಸುವ ಎಂದಿದ್ದ ಲಚ್ಚಿ ಜೀವನಪಯಣವನ್ನು ಅರ್ಧಕ್ಕೆ ಮುಗಿಸಿದ್ದಳು .ಶಾಲೆಗೆ ಹೋಗಬೇಕಾದ ಮಗ ದುಡಿಯಲು ಇಳಿದ . ಮಗ ದುಡಿಯುವುದನ್ನು ನೋಡಲಾಗದ ಅಪ್ಪ ಹೆಚ್ಚು ಹಣ ಸಂಪಾದಿಸಿ ಸಾಲ ತೀರಿಸುವ ಆಸೆಗೆ್ ಊರನ್ನು ಬಿಟ್ಟು ಮೇಸ್ತ್ರಿಯೊಂದಿಗೆ ಭಾಷೆ ತಿಳಿಯದ ಕೇರಳದ ಕಣ್ಣೂರಿಗೆ ಹೊರಟಿದ್ದ .

ಸಂಬಳವೇನೋ ಚೆನ್ನಗಿಯೇ ಇತ್ತು , ಆದರೆ ಇವನಿಗೆ ಅಲ್ಲಿಯೂ ಕೈ ಹಿಡಿಯದ ಅದೃಷ್ಟ , ಹೋದ ಕೆಲವೇ ದಿವಸಕ್ಕೆ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಮೇಸ್ತ್ರಿಯನ್ನೂ ಬಲಿತೆಗೆದುಕೊಂಡು ಇವನ ದುಡಿಯುವ ಕೈಗಳನ್ನೂ ಕಿತ್ತುಕೊಂಡಿತ್ತು .

ದೇಶ ತಿಳಿಯದು ಅಲ್ಲಿನ ಭಾಷೆ ತಿಳಿಯದು .ಕೈಯಲ್ಲಿ ಕಾಸಿಲ್ಲ ಮೈಯಲ್ಲಿ ತ್ರಾಣವಿಲ್ಲ . ವಿಧಿಯ ಆಟದ ಮರ್ಮವ ತಿಳಿದವರಾರು ???
ಯಾವ ಜನುಮದ ಅವನ ಬಂಧುವೋ ಒಬ್ಬ ವೈದ್ಯರು ಉಚಿತವಾಗಿ ಅವನ ಕೈಯನ್ನು ಸರಿಪಡಿಸಿದರು . ಅಲ್ಲಿಂದ ಹೊರಬಿದ್ದವ ನಡೆದಾದರೂ ಊರು ಸೇರುತ್ತೇನೆಂದು ಹೊರಟ ....
ಹೋಗುತ್ತಲಿದ್ದ....ಹೋಗುತ್ತಲೇ ಇದ್ದ........
ಗೃಹಲಕ್ಷ್ಮಿಯಾದ ಲಚ್ಚಿಯನ್ನು ಕಳೆದುಕೊಡ , ಕಾಯಕ ನಿಡುವ ಯಜಮಾನನ್ನೂ ಕಳೆದುಕೊಂಡ , ದುಡಿವುದಕ್ಕೆ ಕೈಯಿಲ್ಲ , ದುಡಿದರೂ ಊಟಕ್ಕೇ ಕೈಯಿಲ್ಲ......
ಏತ್ತಲಿನಿಂದಲೋ ಇನ್ನೆತ್ತಲಿನೆಡೆಗೋ ; ತಿಳಿಯದಿದ್ದುದರಿಂದ ತಿಳಿದಿದುರೆಡೆಗೆ ; ಕತ್ತಲಿನಿಂದ ಬೆಳಕಿನೆಡೇಗೋ.... ಪೂರ್ಣವಾಗದ ಅವನ ಮಹಾಪ್ರಯಾಣ  ಸಾಗುತ್ತಲೇ ಇತ್ತು . 

2 comments: