Saturday, 21 October 2017

ಮಲೆನಾಡಿನ ಜಲಸುಂದರಿಯರು.

                         ದಿನ -೧
                     ಅಪ್ಸರಕೊಂಡ
ದಿನಾಂಕ ೧೩-೧೦-೧೭ ಬೆಳಗ್ಗೆ ೬-೪೫ಕ್ಕೆ ನಮ್ಮನೆಯಿಂದ ಆರಂಭವಾದ ಈ ಮಹಾಪ್ರಯಾಣ ಹೆಮ್ಮಾಡಿ ,ಬೈಂದೂರು , ಭಟ್ಕಳ ಮಾರ್ಗವಾಗಿ ಸಾಗಿ ಮೊದಲನೆಯದಾಗಿ ಹೊನ್ನಾವರದಿಂದ ಸ್ವಲ್ಪ ಹಿಂದೆ ಅಪ್ಸರಕೊಂಡ ಜಲಪಾತಕ್ಕೆ ಭೇಟಿ .ಈ ಸ್ಥಳದಲ್ಲಿ ನದಿಯು ಶರಧಿಯ ಸೇರುವ ಪರಿಯ ನೋಡುವ ಭಾಗ್ಯ ನಮಗೆ ಸಿಗಲಿದೆ .

                       ವಿಭೂತಿ
ಹೊನ್ನಾವರ ಕುಮಟಾ ಮಾರ್ಗವಾಗಿ ಮಾದನಗೇರಿಯಲ್ಲಿ ಬಲಕ್ಕೆ ತಿರುಗಿ ಯಲ್ಲಾಪುರ ಮಾರ್ಗವಾಗಿ ಹಿಲ್ಲೂರಿನಿಂದ ವಿಭೂತಿ ಜಲಪಾತಕ್ಕೆ ತೆರಳಿದೆನು.ಗಾಡಿ ನಿಲ್ಲಿಸಿ ಬೆಟ್ಟದ ಸುಗಮವಾದ ದಾರಿಯಲ್ಲಿ ಮುಕ್ಕಾಲು ಕಿಲೋಮೀಟರ್ ಸಾಗಿದಾಗ ನಮಗೆ ಈ ಜಲಪಾತದ ದರ್ಶನವಾಗುತ್ತದೆ .ಪ್ರಶಾಂತವಾದ ವಾತಾವರಣ ,ಸುಂದರ ಜಲಪಾತ ಅಲ್ಲದೆ ಇದರ ಎರಡನೆಯ ಹಂತವನ್ನು ಗುಡ್ದದಿಂದ ಸ್ವಲ್ಪ ಕೆಳಗಿಳಿದು ನೋಡಬಹುದು .
ನಂತರ ರಾಮನಗುಳಿಯಿಂದ ೫ ಕಿ,ಮೀ. ಗಾಂವ್ಕರ್ ಅವರ ಮನೆಯಲ್ಲಿ ಭೋಜನ ಸೇವಿಸಿದೆನು.

                   ಶಿರಲೆ ಜಲಪಾತ  
ಗೋಪಾಲಕೃಷ್ಣನೊಂದಿಗೆ ಕುಮಟಾ ಯಲ್ಲಾಪುರ ಮಾರ್ಗದಲ್ಲಿ ಇಡುಗುಂದಿಯ ಸಮೀಪ ಬಲಕ್ಕೆ ತಿರುಗಿ ೨ ಕಿ.ಮೀ (ಸ್ವಲ್ಪ ಕಷ್ಟದ ಹಾದಿ)ತಗ್ಗು ಪ್ರದೇಶದ ರಸ್ತೆಯಲ್ಲಿ ತೆರಳಿ ಜಲಪಾತದ ಸಮೀಪ ಗಾಡಿಯನ್ನಿಟ್ಟು ತೋಟದ ಮೂಲಕ ಜಲಪಾತದ ಬುಡಕ್ಕೆ ಹೋದೆವು . ಪುನಃ ಗಾಂವ್ಕರ್  ಮನೆಯಲ್ಲಿ ವಾಸ್ತವ್ಯ.
          
                          ದಿನ-೨
                  ಕಾನೂರು ಜಲಪಾತ
ಅಂದರೆ ದಿನಾಂಕ೧೪-೧೦-೧೭ ಬೆಳಿಗ್ಗೆ ಗಾಂವ್ಕರ್ ಅವರ ಮನೆಯಲ್ಲಿ ಪರಿಚಯವಾದ ಪ್ರಸಾದ್ ಅವರೊಂದಿಗೆ ಕಾನೂರು ಜಲಪಾತಕ್ಕೆ ಕೊಡ್ಲಗದ್ದೆ ಘಾಟಿಯ ಮೂಲಕ ಹೋಗಿದ್ದು ...ಅಬ್ಬಾ hill climb game live ಆಡಿದ ಅನುಭವ.(ಅಂತಹ ದಾರಿ).೭ ಕೀ,ಮೀ ಕಾಡಿನ ಒಳಗಡೆ ಗಾಡಿಯ ಮೂಲಕ ಸಾಗಿ  ಸುಮಾರು ೧ ಕೀ.ಮೀ ನಡೆದು ಜಲಪಾತವನ್ನು ವೀಕ್ಷಿಸಿದೆವು...ಇದೊಂದು ಅದ್ಭುತ ಜಲಪಾತ. ನಾವು ಈ ಜಲಪಾತದ ತಲೆಯ ಮೇಲಿದ್ದೆವು .ಹಾಗೂ ಹೀಗೂ ಸಾಹಸ ಮಾಡಿ tripod  ಸಹಾಯದಿಂದ ಒಂದಿಷ್ಟು ಚಿತ್ರಗಳನ್ನು ಸೆರೆಹಿಡಿದು ,ಮತ್ತೂ ಸಾಹಸ ಮಾಡಿ ಬೆಟ್ಟದ ತುದಿಯ ಮರದ ಮೇಲೆ ಹತ್ತಿ ಅಲ್ಲಿಂದಲೂ ಚಿತ್ರಗ್ರಾಹಣ ನಡೆಯಿತು.ಒಂದು ಬೇಸರದ ಸಂಗತಿ ಎಂದರೆ ನನ್ನ camera ಇಂದ ಈ ಜಲಪಾತದ ಪೂರ್ಣ ಚಿತ್ರ ಸೆರೆ ಹಿಡಿಯಲು ಸಾಧ್ಯವಾಗದಿದ್ದದ್ದು .
             
                    ಮಾಗೋಡು ಜಲಪಾತ
ಅಲ್ಲಿಂದ ಪ್ರಸಾದ್ ಅವರಿಂದ ಬೀಳ್ಗೊಂಡು ,ಸ್ವಲ್ಪ ಕಡಿದಾದ ದಾರಿಯಿಂದ ಮಾಗೋಡು ತಲುಪಿದೆನು.ಮಾಗೋಡು ಜಲಪಾತವನ್ನು ದೂರದಿಂದ ಮಾತ್ರ ವೀಕ್ಷಿಸಲು ಸಾಧ್ಯ .ಹಾಗೆ ತುಂಬಾ ಎತ್ತರದಿಂದ ಬೀಳುವ ನೀರಿನಿಂದ ಉಂಟಾಗುವ ಹಿಮ ಮೈಮನಗಳನ್ನು ಪುಳಕಗೊಳಿಸುವುದಂತೂ ಸತ್ಯ .  ಅಲ್ಲದೇ ಕಾಮನಬಿಲ್ಲು ಜಲಪಾತದ ಜೊತೆಗೆ ನಿಂತದ್ದೂ ವಿಶೇಷ.ಇಲ್ಲಿಂದ ನೇರವಾಗಿ ಹಂಗಾರಿ ಮನೆ ತಲುಪಿ ಭೋಜನ ಮಾಡಿ ಹಂಗಾರಿಯ ತಂದೆಯೊಂದಿಗೆ ಸಾತೊಡ್ಡಿಯಸುಂದರಿಯ ನೋಡ ಹೊರಟೆವು.
                     ಸಾತೊಡ್ಡಿ ಜಲಪಾತ
ಅಬ್ಬಾ...ದುರ್ಗಮ ಹಾದಿ ಸುರಿಮಳೆಯು ಜೊತೆಯಾಗಿ ನಮ್ಮನ್ನು ಕಂಗೆಡಿಸಿದ್ದು ನಿಜ.ದಿನದ ಕೊನೆಯ ವೀಕ್ಷಕರಾಗಿ ಅಲ್ಲಿಂದ ವಾಪಾಸಾಗಿ ಪೃಥ್ವಿಯ ಮನೆಗೆ ಹೋಗಿ ಅಲ್ಲಿ ಉಪಾಹಾರ ಸೇವಿಸಿ,ಅಲ್ಲಿಂದ ಹಂಗಾರಿ ಮನೆಗೆ ವಾಪಾಸಾಗಿ ಭೋಜನ ಮುಗಿಸಿ ಮಲಗಿದೆ.

                          ದಿನ-೩
ದಿನಾಂಕ ೧೫-೧೦-೧೭ ಹಂಗಾರಿ ಮನೆಯಿಂದ ಹೊರಟು ಶಿರಸಿಯ ಗಡಿಕೈ ಅಕ್ಷಯಣ್ಣನ ಮನೆಗೆ ಹೋಗಿ ಅವರ ಮನೆಯ ತೋಟದಲ್ಲಿ ಬೆಳೆದ ಅಡಿಕೆ,ಕಾಳುಮೆಣಸು,ಬಾಳೆ ಹಾಗೂ ಇನ್ನಿತರ ಬೆಳೆಗಳ ಬಗ್ಗೆ ಮಾಹಿತಿ ಪಡೆದು ,ಅವುಗಳಿಗೆ ಬರುವ ಕೊಳೆ ಮತ್ತು ಅದರ ನಿವಾರಣೆಯ ಬಗ್ಗೆ ತಿಳಿದು ಅಲ್ಲಿಯೆ ಸಮೀಪದ ಶಿರುಕಲು ಗುಂಡಿ ಎಂಬ ಸಣ್ಣ ಜಲಪಾತಕ್ಕೆ ತೆರಳಿ ಆಕೆಯ ದರುಶನ ಪಡೆದು,ಪುನಃ ಮನೆಗೆ ತೆರಳಿದೆವು.

                        ಉಂಚಳ್ಳಿ ಜಲಪಾತ
ಮಧ್ಯಾಹ್ನ ಭೋಜನ ಮುಗಿಸಿ ನಾನು ಅಕ್ಷಯಣ್ಣ ,ರಶ್ಮಿ ಅಕ್ಕ, ಅಮೃತಾ ಎಲ್ಲರೂ ಒಟ್ಟಾಗಿ ಉಂಚಳ್ಳಿ ಜಲಪಾತಕ್ಕೆ ತೆರಳಿದೆವು. ಅಲ್ಲಿನ ಮಂಜಿನೊಂದಿಗೆ ನಮ್ಮ ಮನದ ದುಗುಡಗಳನ್ನೆಲ್ಲ ಕರಗಿಸಿ ,ಅಲ್ಲಿಂದ ವಾಟೆಹಳ್ಳ ಜಲಪಾತದ ವೀಕ್ಷಣೆಗೆ ತೆರಳಿದೆವು.
ಆಹಾ... ಇಂಬಳಗಳು ನಮಗಾಗಿಯೇ ಕಾಯುತ್ತಿದ್ದವೆನೊ ಎಂಬಂತೆ ನಮ್ಮ ಕಾಲಿಗಂಟಿದ್ದವು.ದಾರಿ ಸಿಗಲಿಲ್ಲ ಎಂಬ ಚಿಂತೆ ಒಂದೆಡೆಯಾದರೆ ಇಂಬಳ ತೆಗೆಯುವ ಮಜಾ ಇನ್ನೊಂದೆಡೆ...ಕೊನೆಗೂ ಜಲಪಾತವನ್ನು ದರ್ಶಿಸುವ ಆಸೆಯನ್ನು ಕೈಬಿಟ್ಟು ನಮ್ಮ ವಾಹನದೆಡೆಗೆ ಓಡಿ-ಓಡಿ ಬಂದೆವು...ಅಲ್ಲಿನ ಹಳ್ಳದಲ್ಲಿ ಇಂಬಳಗಳನ್ನೆಲ್ಲ ನಮ್ಮ ಆಸೆಯೊಂದಿಗೆ ಬಿಟ್ಟು ಬಂದೆವು.
       
                   ಭೀಮನಗುಡ್ಡ
ಅಲ್ಲಿಂದ ಭೀಮನಗುಡ್ದಕ್ಕೆ ತಲುಪಿ ಅಲ್ಲಿನ ಹಿತವಾದ ಮಂಜಿಗೆ ನಮ್ಮ ಮೈಯೊಡ್ದಿ ಮನೆಯಿಂದ ತಂದ ಮುಳ್ಳುಸೌತೆಗೆ,ಉಪ್ಪು,ಹುಳಿ ಖಾರವನ್ನು ಮಿಶ್ರಣ ಮಾಡಿ ಸವಿದದ್ದು ನೆನಪಿನ ಸುರುಳಿಯೊಳಗುಳಿದ ಅನುಭವ.ಅದೇ ಸಂದರ್ಭದಲ್ಲಿ ಮೋಡ ಕರಗಿ ಪ್ರಕೃತಿಮಾತೆ ಒಮ್ಮೆ ನಮಗೆ ದರುಶನವಿತ್ತಳು.ಕತ್ತಲಾದಂತೆ ಅಲ್ಲಿಂದ ಹೊರಟು ಗಡಿಕೈ ತಲುಪಿ ಬಿಸಿ-ಬಿಸಿ ಕಾಫಿ ಹೀರಿ ಚಿಪ್ಸ್ ತಿಂದು,ಅಲ್ಲಿಂದ ಬೀಳ್ಗೊಂದು ಉಷಾಳ ಮನೆ ತಲುಪಿ ಉಭಯಕುಶಲೋಪರಿಯೊಂದಿಗೆ ಅಜ್ಜಿಯೊಂದಿಗೆ ಹರಟಿ,ಭೋಜನ ಮುಗಿಸಿ...ಪುನಃ ಹರಟುತ್ತಿದ್ದಾಗ ಚಿಕ್ಕಮ್ಮ ಚಾಪೆ ಹಾಸಿದ್ದೇನೆ ಎಂದಾಗ ನಿದ್ದೆಗೆ ಅನುವಾದೆನು.
      
                        ದಿನ -೪
                   ಬುರುಡೆ ಜಲಪಾತ
ದಿನಾಂಕ ೧೬-೧೦-೧೭ರಂದು ಬೆಳಗೆದ್ದು ತಿಂಡಿ ಮುಗಿಸಿ ಅಲ್ಲಿಂದ ಹೊರಟು ಬುರುಡೆ ಜಲಪಾತದ ವೀಕ್ಷಣೆಗೆ online map ಸಹಾಯದಿಂದ ತಲುಪಬೇಕೆಂಬ ಆಶಯದಿಂದ map ಹೇಳಿದ ದಾರಿಯಲ್ಲಿ ಸಾಗಿದಾಗ ಮುರಿದ ಸೇತುವೆಯೊಂದು ಗಾಬರಿಪಡಿಸಿತ್ತು ,ಆದರು ಕೆಲ ದ್ವಿಚಕ್ರಸವಾರರು ಅದನ್ನು ದಾಟುವುದನ್ನು ನೋಡಿ ನಾನೂ ಧೈರ್ಯ ಮಾಡಿ ದಾಟಿದೆ.ಆದರೆ ಯಡವಟ್ಟದದ್ದು ಅದರ ನಂತರ  map ತೋರಿಸಿದ ಹಾದಿಯಲ್ಲಿ ಸಾಗಿದ ನಾನು,ದಾರಿ ಕಾಣದೆ ಊರವರ ಸಹಾಯದಿಂದ ,ಮತ್ತು map ಅಲ್ಲಿ ಇದ್ದ ಒಂದು ದೂರವಾಣಿ ಸಂಖ್ಯೆಗೆ ಕರೆಮಾಡಿದಾಗ ಆದರ್ಶ ಎಂಬವರು ದಾರಿಯ ಮಾಹಿತಿ ನೀಡಿದರು.ಅಲ್ಲದೇ ಕ್ಯಾದಗಿ ಅರಣ್ಯ ಇಲಾಖೆ ಸಿಬ್ಬಂದಿಗಳ ವಚನಾನುಸಾರ ಸಾಗಿ ಜಲಪಾತದ ತಲೆಯವರೆಗೂ ವಾಹನದಿಂದ ಸಾಗದೆನು.ಆದರೆ ಅಲ್ಲಿಂದ ಜಲಪಾತದ ವೀಕ್ಷಣೆ ಅಸಾಧ್ಯ , ಅದಕ್ಕೆ ಸುಮಾರು ೨೦೦ ಮೀಟರ್ನಷ್ಟು ಕಡಿದಾದ ಇಳಿಜಾರು ಪ್ರದೇಶದಿಂದ ಕೆಳಗೆ ಹೋಗಬೇಕು.ಸ್ವಲ್ಪ ಅಪಾಯಕಾರಿ ಪ್ರದೇಶ ಎನ್ನಬಹುದೇನೋ.ಕೆಳಕ್ಕೆ ಹೋದಂತೆ ಆಮ್ಲಜನಕದ ಕೊರತೆ ಕಾಣುತ್ತದೆ.ಮತ್ತೂ ಕೆಳಗಿಳಿದಾಗ ನಿರ್ಮಲವಾದ ಝರಿಯೊಂದಿಗಿನ ಸುಂದರಪ್ರಕೃತಿಮಾತೆ ನಮಗೆ ಕಾಣಸಿಗುವಳು.ಅಲ್ಲಿ ಸ್ವಚ್ಛಂದವಾಗಿ ವಿಹರಿಸಿ ಮತ್ತೂ ಕೆಳಗಿನ ಝರಿಯನ್ನು ಸಾಹಸದಿಂದ ದಟ್ಟ ಕಾಡಿನ ನಡುವೆ ಸಾಗಿ ಅಲ್ಪ ಸ್ವಲ್ಪ ಕಾಮನಬಿಲ್ಲಿನ ಕೂಡುವಿಕೆಯೊಂದಿಗೆ ಮಾತ್ರವೇ ಕಂಡು ಮನಃಪಟಲದಲ್ಲಿ ಮಾತ್ರ ಮುದ್ರಿಸಿಕೊಳ್ಳಬಹುದು.ಮತ್ತೂ ಸ್ವಲ್ಪ ಹೊತ್ತು ಸ್ವರ್ಗದ ಬಾಗಿಲಿನಂತಿದ್ದ ಜಲಧಾರೆಯ ಬುಡದಲ್ಲಿ  ಕುಳಿತು ವಾಪಾಸಾಗುವ ಹಾದಿಯ ನೆನೆದು ರುದ್ರರಮಣೀಯ ಜಲಧಾರೆಯನ್ನು ಮತ್ತೊಮ್ಮೆ ಕಂಡು ಅಂತೂ ಇಂತೂ ಗುಡ್ಡ ಹತ್ತಿ ವಾಹನವಿದ್ದಲ್ಲಿ  ತಲುಪಿದೆನು.
ಈ ಜಲಪಾತಕ್ಕೆ ಉಬ್ಬಸ , breathing ಸಮಸ್ಯೆ ಇರುವವರು ಇಳಿಯುವುದು ಅಪಾಯಕಾರಿ.
ಬುರುಡೆ ಜಲಪಾತಕ್ಕೆ ಸಿದ್ಧಾಪುರ-ಕುಮಟಾ ಹಾದಿಯು ಸೂಕ್ತ.

           ಅಲ್ಲಿಂದ ಹೊರಟು ಸಿದ್ಧಾಪುರಕ್ಕೆ ಬಂದು ಚಪಾತಿ ತಿಂದು,ಅಲ್ಲಿಂದ ಜೋಗ ಜಲಪಾತ ನೋಡುವ ಶಾಸ್ತ್ರ ಮುಗಿಸಿದೆನು.ಹೀಗೆ ಹೇಳಿದ್ದು ಯಾಕೆಂದರೆ ಪ್ರಾಕ್ರತಿಕ ಸೌಂದರ್ಯ ಸವಿದವಗೆ ಈ ಕೃತಕವೆನ್ನಿಸುವ ಸುಗಮ ಹಾದಿಯ ಜನಸಾಗರವಿರುವ ಜಲಪಾತ ರುಚಿಸಲಿಲ್ಲ.
ಅಲ್ಲಿಂದ ಸಾಗರದ ಹೆಗ್ಗೋಡಿಗೆ ಬಂದು ವಸ್ತ್ರವಿನ್ಯಾಸ ಖಾದಿ ವಸ್ತ್ರಗಳನ್ನು ಖರೀದಿಸಿ ,ದೀಕ್ಷಿತರ ಮನೆಯಲ್ಲಿ ತಡರಾತ್ರಿಯವರಗೂ ಅಲ್ಲಿದ್ದ ಪುಟಾಣಿಗಳೊಂದಿಗೆ ಹರಟಿದೆವು.
                        ದಿನ-೫
ದಿನಾಂಕ ೧೭-೧೦-೧೭ಅವರನ್ನು ಬೀಳ್ಕೊಟ್ಟು ,ಅಲ್ಲಿಂದ ಶೃಂಗೇರಿಗೆ ಬಂದು ಉಷಾ ಅಕ್ಕನ ಕೈಯಡುಗೆಯ ಸವಿದು ,ನಾ ಓದಿದ ಪರಿಸರಕ್ಕೆ ಹೋಗಿ ಆತ್ಮೀಯರ ಮಾತನಾಡಿಸಿ ಹೆಗ್ಗದ್ದೆಗೆ ಬಂದು ಒಂದಿಷ್ಟು ಹರಟಿದೆವು.
        
                         ದಿನ -೬
ದಿನಾಂಕ ೧೮-೧೦-೧೭  ಹಬ್ಬದ ಸ್ನಾನ ಮುಗಿಸಿ ಪ್ರದೀಪನ ಮನೆಗೆ ತೆರಳಿ ಅಲ್ಲಿಂದ,ಪುತ್ತೂರಿನ ಸಂತೃಪ್ತಿಗೆ ಹೋಗಿ ಸಂತೃಪ್ತರಾಗಿ ,ಪುನಃ ವೇಣೂರಿಗೆ ವಾಪಾಸಾದೆವು.
                        
                         ದಿನ -೭
         ಅಲ್ಲಿಂದ ಹೊರಟು ನಮ್ಮನೆಗೆ ತಲುಪಿದಲ್ಲಿಗೆ ನನ್ನ ಮಹಾಪ್ರಯಾಣ ಸುಖಾಂತ್ಯವಾಯಿತು.

          ಈ ಪಯಣದಲ್ಲಿ  ೧೦೨೪ ಕೀ.ಮೀ ಕ್ರಮಿಸಿ ೧೦+೧ ಜಲಪಾತಗಳು,೧ ಗುಡ್ಡ ಪ್ರದೇಶವನ್ನು ಹಾಗೂ ಹತ್ತಾರು ಊರುಗಳು ,ಹತ್ತಾರು ಮನೆಗಳು ...ಹಲವಾರು ಸಂಸ್ಕೃತಿಯ ಕಂಡು,ಕೃಷಿಯ ಕಿಂಚಿತ್ ಜ್ಞಾನ ಪಡೆದು ....ಆತ್ಮೀಯರನ್ನು ಕಂಡು ...ಹೊಸ ಪರಿಚಯಗಳೊಂದಿಗೆ...ಪಟಪಟನೆ ಮಾತಾಡುವ  ಐಶು ಪುಟ್ಟಿ.....ಈ ಎಲ್ಲವನ್ನೂ...ಎಲ್ಲರನ್ನೂ ನನ್ನ ಅನುಭವದ ನೆನಪಿನ ಸರಣಿಯೊಳಗೆ ದಾಖಲಿಸುತಿಹೆನು.
ಚಿತ್ರ ಸಂಖ್ಯೆ ಮತ್ತು ಸ್ಥಳ
೧- ಅಪ್ಸರಕೊಂಡ
೨- ಅಪ್ಸರಕೊಂಡದಿಂದ ಸಮುದ್ರ
೩- ವಿಭೂತಿ
೪- ಶಿರಲೆ
೫,೬- ಕಾನೂರು
೭- ಮಾಗೋಡು
೮- ಮಾಗೋಡುವಿನಿಂದ ಕಾಣುವ ಅನಾಮಿಕೆ.
೯- ಸಾತೊಡ್ಡಿ
೧೦- ಶಿರುಕಲುಗುಂಡಿ
೧೧-  ಉಂಚಳ್ಳಿ
೧೨- ವಾಟೆಹಳ್ಳದ ಸಮೀಪ
೧೩- ಬುರುಡೆಯ ಸಮೀಪದ ಸುಂದರ ದೃಶ್ಯ.
೧೪- ಬುರುಡೆಗೆ ಹೋಗುವಾಗ ಇದಿರಾದ ಮುರಿದ ಸೇತುವೆ
೧೫,೧೬,೧೭- ಬುರಡೆ ಜಲಪಾತದ ಹಂತಗಳು.
೧೯- ಜೋಗ
                   *******************

11 comments: