Wednesday, 26 December 2018

ಹಾರಿಹೋದ ಪಕ್ಷಿಪ್ರಾಣ.

ಎಂದಿನಂತೆ ನನ್ನ ಪಯಣದ ಜೊತೆಗಾರನಾದ ವಿಕ್ರಾಂತ್ 150 ಯನ್ನೇರಿ ಹೊರಟ ನನ್ನ ಪಯಣದ ಗಮ್ಯ ಕಾಪು ಕಡಲತೀರವಾಗಿತ್ತು.

ಮನದೊಳಗೆ ಮುಂದಿನ ಯೋಜನೆಗಳನ್ನೆಲ್ಲಾ ರೂಪಿಸುತ್ತಾ ,

ಪೂರ್ವಭಾವಿ ತಯಾರಿಗಳನ್ನೆಲ್ಲಾ ಮೆಲುಕು ಹಾಕುತ್ತಿದ್ದಾಗಲೇ ಜರುಗಿ ಹೋಯ್ತಲ್ಲ ಈ ಹೃದಯವಿದ್ರಾವಕ ಘಟನೆ….

ನೀನು ಆಟವಾಡುತ್ತಾ ಧುತ್ತನೆ ನನ್ನ ವಿಕ್ರಾಂತನ ಇದಿರು ಬಂದುಬಿಟ್ಟೆಯಲ್ಲ...ಹಾ...ಇದೇನಾಗಿಹೋಯ್ತು.

ಕಣ್ಮುಚ್ಚಿತೆರೆಯುವಷ್ಟರಲ್ಲಿ ಕಪ್ಪು ಟಾರಿನ ಮೇಲೆ ಬಿದ್ದು ವಿಲವಿಲನೆ ಒದ್ದಾಡುತ್ತಿದ್ದ ನಿನ್ನ ನೋಡಿ...ಅಂದುಕೊಂಡದ್ದು ಸತ್ಯ…”ಅತಿವೇಗ ಅಪಾಯಕ್ಕೆ ಕಾರಣ….ಅಜಾಗರೂಕತೆಯು ಮರಣಕ್ಕೆ ಹಾದಿ”….ಯಾರ ತಪ್ಪೆಂದು ಯೋಚಿಸಲಾಗದ ಈ ಸಮಯದಲ್ಲಿ….ವೈದ್ಯಶಾಲೆಯೂ ಹತ್ತಿರವಿಲ್ಲದೆ ಹೋಯ್ತಲ್ಲ…

ನಾನೇನು ಮಾಡಲಿನ್ನು...ದೂರದ ವೈದ್ಯರಲ್ಲಿಗೆ ಹೋಗುವಷ್ಟು ನಿನ್ನಲ್ಲಿ ಪ್ರಾಣವಿಲ್ಲ.

ಕೃಶಕುಸುಮಮೃದು ತನುವನು ನನ್ನ ಈ ಪಾಪಿ ಕರಗಳಲ್ಲೆತ್ತಿ ನನ್ನ

ಮಡಿಲಿಗೆ ನಿನ್ನನ್ನು ಹಾಕಿಕೊಂಡಿದ್ದೇನಷ್ಟೇ…ನಿನ್ನ ಅರೆತೆರೆದ ಕಣ್ಣುಗಳು ಹೇಳಹೊರಟಿದ್ದವು…. ನನ್ನ ಕೊಂದುಬಿಟ್ಟೆಯಲ್ಲ...ಎಂದು...ನಿನ್ನ ದೃಷ್ಟಿಯ ಇರಿತವನ್ನು ಸಹಿಸಲಾಗದೆ ನನ್ನಮನ ಪಾಪದ ಕೂಪದೊಳಗೆ ಇಳಿಯುತ್ತಿದೆ.

ಏನೂ ಮಾಡಲಾಗದ ಅಸಹಾಯಕನಾಗಿದ್ದೆ...ಜಗತ್ತು ಎಷ್ಟೇ ಮುಂದುವರೆದಿದ್ದರೂ ಕೆಲಸಮಯದಲಿ ನಾವು ನಶ್ವರ ಅನ್ನಿಸುತ್ತದೆ….ನಿನ್ನ ಪ್ರಾಣಪಕ್ಷಿ ಹಾರಿಹೋಗುವ ಸಂದರ್ಭ  ಪಾಪಪ್ರಜ್ಞೆ ಒಮ್ಮೆಲೆ ಭೋರ್ಗರೆಯತೊಡಗಿತು...

ನಿನಗೆ ತೊಟ್ಟು ನೀರೂ ಕೊಡಲಾಗದವನಾದೆ.ಅಯ್ಯೋ….

ಮುರಿದಕುತ್ತಿಗೆಯ ನಿನಗೆ ಸಾವು ಇದೀಗಲೇ ಮುಚ್ಚುತ್ತಿದ್ದ ಕಣ್ಣಾಲಿಗಳಿಂದ ಸನ್ನಿಹಿತವಾಗುತ್ತಿದೆ.ನಿನ್ನ ತನುವನು ಧರೆಗರ್ಪಿಸುತ್ತಿರುವೆ. ಇಗೋ ನನ್ನಕಡೆಯಿಂದ ನಿನಗೆ ಕೊನೆಯ ನಮನ.ಪ್ರಾಯಶ್ಚಿತ್ತದ ಅಕ್ಷರದ ಮೂಲಕ ನಿನಗರ್ಪಿಸುತ್ತಿರುವೆ.

                          ಓ ಅಗಲಿದ ಆತ್ಮವೇ

                                                   ಇಂತು

                                           ನಿನ್ನ ಕೊಲೆಗಾರ.

Thursday, 25 October 2018

ಚಾರ್ಮಾಡಿಯ ಸುತ್ತ.

ಈ ಬಾರಿಯ ನವರಾತ್ರಿಯ ನಂತರ ಒಬ್ಬಳನ್ನಾದರೂ ನೋಡಲೇಬೇಕೆಂಬ ನನ್ನ ಹಂಬಲಕೆ ...ಇಂಬು ಕೊಟ್ಟದ್ದು ಚಾರ್ಮಾಡಿಯ ಸನಿಹದ ಹಲವು ಹಾದಿಗಳು....
ದಶಮಿಯಂದು ಸಂಜೆ ಪ್ರದೀಪನ ಮನೆ ತಲುಪಿ...ಅಲ್ಲಿಂದ ಮರುದಿನ ಬೆಳಗ್ಗೆ ಸ್ನಾನೋಪಾಹಾರಗಳನ್ನೆಲ್ಲ ಮುಗಿಸಿ, ಸಾತ್ವಿಕನ ಆಗಮನ ಗಗನಕುಸುಮವಾದಾಗ ನಾನೊಬ್ಬನೇ ಹೊರಟು ನಿಂತದ್ದು ಯರ್ಮಾಯಿ ಹಾಗೂ ಇನ್ನಿತರ ಚಾರ್ಮಾಡಿಯ ಸಮೀಪದ ಜಲಸುಂದರಿಯರ ನೋಡಲು.
ಉಜಿರೆಗೆ ಬಂದು ಗೂಗಲ್ ಸಹಾಯ ಕೇಳಲು ನನ್ನ ದೂರವಾಣಿಯನ್ನು ಹಿಡಿದರೆ ....ನಾನು ಹ್ಯಾಂಗ್ ತೋರಿಸ್ಲೀ ಅಂತ ....ಹ್ಯಾಂಗ್ ಆಗ್ತಿತ್ತು....
ನಂತರ ಸ್ಥಳೀಯರ ಬಳಿ ಕೇಳಿ ಮೊದಲಿಗೆ ಎರ್ಮಾಯಿಗೆ ಹೋಗಲು ಹಾದಿ ಹಿಡಿದೆ...ಅಬ್ಬಾ....
ದುರ್ಗಮ ಹಾದಿಯ ಗುಪ್ತಸುಂದರಿ......
ನನಗೆ ಜೊತೆಯಾಗಿ ನನ್ನ ವಿಕ್ರಾಂತ್ 150  ನನ್ನೊಂದಿಗಿದ್ದ....ಅವನ ಸಹಕಾರ ಅತ್ಯಮೂಲ್ಯ.. ಅವನನ್ನು ಅವಳ ಹತ್ತಿರ ಕೊಂಡೊಯ್ಯಲು ಸಾಧ್ಯವಿರಲಿಲ್ಲ...ಸ್ವಲ್ಪ ದೂರ ನಡೆದು....ಊಹೆಮಾಡಿದ ಹಾದಿಯಲ್ಲಿ ಸಾಗಿ...ಕೊನೆಗೆ ಜಲಪಾತದ ಶಿರೋಭಾಗಕ್ಕೆ ತಲುಪಿ...ಅಷ್ಟಿಷ್ಟು ಚಿತ್ರಗಳನ್ನು ಕ್ಲಿಕ್ಕಿಸಿ...ಅಲ್ಲಿಂದ ಜೊತೆಗಾರನಲ್ಲಿಗೆ ಬಂದು , ಅವನನ್ನು ಕಾಡು- ಗುಡ್ಡ - ಕಲ್ಲು - ನದಿ ...ಹೀಗೆ ನಾನಾವಿಧ ಭಯಂಕರ ಮಾರ್ಗಗಳಲ್ಲಿ ನಡೆಸಿ ಮುಖ್ಯ ಹಾದಿಗೆ ತಿರುಗಿದೆ.
    ನಂತರ ಇನ್ನೊಬ್ಬ ಸುಂದರಿಯ ನೋಡಲು ಹೋಗಿ....ತೊರೆ ಪಕ್ಕದ ಮಾರ್ಗಗಳನನುಸರಿಸಿ ನಡೆವಾಗ ಬೆಂಗಳೂರಿನ ಒಂದು ತಂಡ ಆಕೆಯ ನೋಡಿ ಹಿಂದಿರುಗಿತ್ತು.ಅವರು ಕೇಳಿದ್ದು ನೋಡಿ ಈಗಲೂ ನಗು ಬರುತ್ತಿದೆ...."ಉಳಿದವರು ಹಿಂದಿದ್ದಾರಾ"... ಅಂತ....ಯಾರಿದ್ದಾರೆ ನನ್ನ ಬಿಟ್ಟು ....ಈ ಒಂಟಿಪಯಣಿಗನೊಂದಿಗೆ....
ಅಂತೂ ಹದಿನೈದು ನಿಮಿಷಗಳ ಸುಲಭ ಕಾಲ್ನಡಿಗೆಯ ಹಾದಿಯನು ಕ್ರಮಿಸಿ ಆಕೆಯ ಸನಿಹ ಬಂದಾಗ ವರುಣ ಭುವಿಯೆಡಗೆ ದೃಷ್ಟಿ ಹಾಯಿಸತೊಡಗಿದ್ದ.ಅದೂ ಭಯಂಕರ  ನಾದ - ಪ್ರಕಾಶಗಳ ಸಮ್ಮಿಲನದಲ್ಲಿ...ಆ ಅಲ್ಪ ಸಮಯದಲ್ಲೇ ಆಕೆಯ ಸೌಂದರ್ಯವ ಸವಿದು , ನನ್ನ ಸಹಚಾರಿಣಿಗೂ ತೋರಿಸುವಷ್ಟರಲ್ಲಿ , ಮುಸಲಧಾರೆ ಸುರಿಯತೊಡಗಿತ್ತು.
ನಾನು ಒದ್ದೆಯಾದರೂ ಸಮಸ್ಯೆಯಿಲ್ಲ....ಆದರೆ ನನ್ನೊಂದಿಗೆ ಬಂದ ನನ್ನ ಸಹಚಾರಿಣಿಗೆ ಮಳೆ ಎಂದರೆ ಅಲರ್ಜಿ.
ಅದಕ್ಕಾಗಿ ಓಡೋಡಿ ನನ್ನ ವಿಕ್ರಾಂತನ ಬಳಿಬಂದೆ...
ಆ ಬೆಂಗಳೂರಿನ ತಂಡದ ಓರ್ವ ಪೋರಿಯ ಕಾಲುಗಳು ಕಾಡಹಾದಿಯನ್ನು ಕಂಡದ್ದು ಇದೇ ಮೊದಲೇನೋ....ಪಾಪ...ಬೊಬ್ಬರಿಯುತ್ತಿದ್ದವು....
ಅವರುಗಳ ಆಗ್ರಹಕ್ಕೆ ಆ ಪೋರಿಯನು ಅವರ ವಾಹನದವರೆಗೂ ಕರೆದೊಯ್ಯುವ ಜವಾಬ್ದಾರಿ ನನ್ನದಾಯ್ತು....ನಾನಂತೂ ಪೂರಾ ಒದ್ದೆ...ವಿಕ್ರಾಂತನೂ ಇಂತಹ ದಾರಿಯನ್ನು ಈ ಮೊದಲು ಕಂಡವನಲ್ಲ...ನನ್ ಚೀಲವೂ ನೀರು....ಜೊತೆಯಲಿ  ಆ ಪೋರಿ...ಹೊರಟಿದ್ದೇನೋ ಸರಿ....ಮುಕ್ಕಾಲು ಹಾದಿ ಸವೆಯುವಷ್ಟರಲ್ಲಿ ಮಳೆಗೆ ಒದ್ದೆಯಾದ ಗುಡ್ಡದ ಮೇಲುಬದಿಗೆ ತಲಪುವ ಹಾದಿ ಅದಾಗಲೇ ಜಾರತೊಡಗಿತ್ತು.ಆ ಪೋರಿಯನ್ನು ಅಲ್ಲೇ ಇಳಿಸಿದರೂ ನನ್ನ ವಿಕ್ರಾಂತ ಜಪ್ಪಯ್ಯ ಎಂದರೂ ಮುಂದೆಹೋಗಗೊಡಲಿಲ್ಲ.
"ಸಹಾಯಕ್ಕೆ ಪ್ರತಿಫಲ ಬಯಸದಿದ್ದರೂ ಸಿಗುವುದು ಖಂಡಿತ " ಎಂಬುದಕ್ಕೆ ಈ ಸನ್ನಿವೇಶ ನಿದರ್ಶನ. ಆ ಬೆಂಗಳೂರು ಪೋರಿಯ ಸಂಗಡಿಗರು ನನ್ನ ವಿಕ್ರಾಂತನನ್ನು ಗುಡ್ಡ ಹತ್ತುವ  ತನಕ ಹಿಡಿದು ನನ್ನನ್ನಾವರಿಸಿದ್ದ ದುಗುಡ ಭಾವವನು ಕಳೆದರೆಂದರೂ ತಪ್ಪಾಗಲಾರದೇನೋ...
ಅಲ್ಲಿಂದ ಚಾರ್ಮಾಡಿಯ ಮಾರ್ಗದಲ್ಲಿ ಚಲಿಸುವಾಗ ಮಿತ್ರ ಸಾತ್ವಿಕನ ಕರೆ ನನ್ನನ್ನು ನಿಲ್ಲಿಸಿತು.ಅವನೂ ನನ್ನ ಜೊತೆಯಾಗುವೆನೆಂದಾಗ ಮುಂದೆ ಕೊಟ್ಟಿಗೆಹಾರದಲ್ಲಿ ಅವನಿಗಾಗಿ ತುಸು ಕಾಯುವ ನೆಪದಲ್ಲಿ ಕಾಫಿ ಹೀರಿ...ಅಲ್ಲಿಂದ ಮುಂದೆ ಹೊರನಾಡು - ಶೃಂಗೇರಿ ವೃತ್ತದಲ್ಲಿ ಸವಿತಾ ಕ್ಯಾಂಟಿನ್ ಅಲ್ಲಿ ಅಜ್ಜಿ ಮಾಡಿದ ಮೆಣಸಿನ ಬಜ್ಜಿ ತಿಂದು , ಸಾತ್ವಿಕನ ಆಗಮನದ ನಂತರ ಮತ್ತೊಮ್ಮೆ ಬಜ್ಜಿ - ಚಹಾ ಸವಿದು ಅಲ್ಲಿಂದ ಶೃಂಗೇರಿ ಗಣೇಶಸದನಕೆ ತಲುಪಿದೆವು.
ಅಲ್ಲಿ ...ನಾನು, ಸಾತ್ವಿಕ , ಹಂಗಾರಿ , ಗಣೇಶ , ಮತ್ತೊಬ್ಬ ಗಣೇಶ ಹೀಗೆ ಐವರ ಮಾತು ಮುಗಿಲು ಮುಟ್ಟದ್ದು ನಮ್ಮ ಪುಣ್ಯ, ಅಷ್ಟು ಹರಟೆ. ಮಧ್ಯೆ ಸಾತ್ವಿಕ ಕೇಳುವ ಪ್ರಶ್ನೆ ನಾಳೆ ಎಲ್ಲಿ ಹೋಗುದು?
ಅದಕ್ಕೊಂದು ಉತ್ತರ.....ಕಥೆ...ಓತ್ಲಾ...ಕ್ಯಾತನಮಕ್ಕಿ ಹೋಗಲು ಬೆಳಗ್ಗೆ ಐದು ಘಂಟೆಗೆ ಏಳುವುದು ಎಂದು ನಿಶ್ಚಯಿಸಿ ಮಲಗುವಾಗ ರಾತ್ರಿಯ ಕೊನೆಯ ಯಾಮ ಆರಂಭವಾಗಿತ್ತು.
ಮರುದಿನ ಐದು ಘಂಟೆಗೆ ಎದ್ದದ್ದು ಸರಿಯಾದರೂ ಹೊರಡುವ ಗಳಿಗೆ ಬದಲಾಗಿ....ಕ್ಯಾತನಮಕ್ಕಿಯಲ್ಲಿ ನೋಡಬೇಕೆಂದಿದ್ದ ಸೂರ್ಯೋದಯ ಮಧ್ಯದಾರಿಯಲೆ ಕಂಡೆವು.
ಅಲ್ಲಲ್ಲಿ ಫೋಟೋ..ನೆಲ್ಲಿ...ಹಾಗೆ ಹೀಗೆ ಎಂದು ಸವಾರಿ ನಿಂತು ನಿಂತು ಸಾಗಿ...ಕ್ಯಾತನಮಕ್ಕಿ ಎಂಬ ಸ್ವರ್ಗದ ಬಾಗಿಲಿನಂತಿದ್ದ
ಆ ಗುಡ್ಡದ ಬುಡಕ್ಕೆ ದುರ್ಗಮವೆಂದುಕೊಂಡ ಹಾದಿಯಲ್ಲಿ ಬಂದೆವು...ಯಾಕೆಂದರೆ ನಿಜವಾದ ದುರ್ಗಮ ಹಾದಿ ಮುಂದಿನದ್ದು.ಜೀಪ್ ನಲ್ಲಿ ಹೋಗಬೇಕಿದ್ದ ಆ ಪ್ರದೇಶಕ್ಕೆ ನಮ್ಮ ಬೈಕ್ನಲ್ಲೇ ಹೋಗುವ ಆಲೋಚನೆ - ನಿರ್ಧಾರ ಗಟ್ಟಿಯಾದಾಗ ಉತ್ಸಾಹ ನೂರ್ಮಡಿಯಾಗಿತ್ತು.
    ಆದರೆ  ಅರ್ಧ ಹಾದಿ ಕಡಿದಾದ ದಾರಿ ಕ್ರಮಿಸುವಷ್ಟರಲ್ಲಿ ನಮಗಿದಿರಾದ ಹಾದಿಯ ಕಂಡು ನಿಬ್ಬೆರಗಾಗಿ ..ನನ್ನ ವಿಕ್ರಾಂತನ ಚಾಲನೆಯ ಉಸ್ತುವಾರಿ ಗಣೇಶನ ಹೆಗಲಿಗೇರಿಸಿದೆ.
ಅಬ್ಬಬ್ಬಾ....ಅದೆಂತಹ ದಾರಿ....ಅಲ್ಲಲ್ಲಾ....ಹೊಂಡ...ಕಲ್ಲು....ಜಾರು ಮಣ್ಣು....ಗಾಡಿಯ ಚಕ್ರ ತಿರುಗುವುದು ಬಿಟ್ಟರೆ ಮುಂದೆ ಹೋಗುವುದೇ ಇಲ್ಲ...ಯಾಕಪ್ಪಾ ಬೈಕ್ ತಂದೆವೂ ಎಂಬಷ್ಟರಲ್ಲಿ ಜೀಪ್ ನಲ್ಲಿ ಬರುತ್ತಿದ್ದ ಇನ್ನೊಂದು ತಂಡದ ನಾಲ್ಕಾರು ಜನ ನಮ್ಮ ಸಹಾಯಕ್ಕೆ ಬಂದರು.
(ವಿ.ಸೂ-ಯಾರಾದರೂ ಹೋಗುವುದಿದ್ದರೆ ಜೀಪ್ನಲ್ಲೇ ಹೋಗುವುದು ಅತ್ಯುತ್ತಮ.)
ಹಾಗೂ ಹೀಗೂ ಗುಡ್ಡದ ಶಿಖರ ತಲುಪುವಷ್ಟರಲ್ಲಿ ಸಾಕು- ಸಾಕಾಗಿತ್ತು...
ಆದರೆ ಅಲ್ಲಿನ ಸೌಂದರ್ಯ ಅದೆಲ್ಲವನ್ನೂ ಮರೆಸಿ ಮನಸಲಿ ಆನಂದದ ಹೊಳೆಹರಿಯಲಾರ‌ಂಭಿಸಿದ್ದು ಅದಕ್ಕಿಂತ ನಿಜ...
ಸುತ್ತೆಲ್ಲಾ ನೋಡಿದರೂ ಹಸಿರ ಹೊದ್ದ ಪರ್ವತರಾಜನ ಅಂಗೋಪಾಂಗಗಳು ಕಣ್ಮನಗಳನ್ನು ಸೆಳೆಯುತ್ತಿತ್ತು.
ಒಂದೆಡೆ ನೀರಝರಿ...ಮಗದೊಂದೆಡೆ ಹಸಿರಸಿರಿ.
ಆಹಾ ...ಭುವಿಸ್ವರ್ಗವಯ್ಯಾ.....ಅದರಲ್ಲೂ ಭಾರತ್ ಮಹಾನ್....ಅಲ್ಲೂ ಕರ್ಣಾಟಕ ಸೌಂದರ್ಯದ ತವರೂರು.....ಆಹಾ.....ಸರಿವ ತಣ್ಣಗಿನ ಗಾಳಿ
 ಮೈಯ ಸೋಕಿ ಮನವ ಪುಳಕಿಸುತ್ತಿದ್ದವು.
ಅಲ್ಲಲ್ಲಾ ಚಿತ್ರಗಳನ್ನು ಕ್ಲಿಕ್ಕಿಸಿ ಮತ್ತೊಂದು ಗುಡ್ಡಕ್ಕೆ ಹೋಗುವ ಹಾದಿಯ ಪರಿಸ್ಥಿತಿ ನೋಡಿ ಅರ್ಧಕ್ಕೆ ಹಿಂತಿರುಗಿ , ಅಲ್ಲಿಂದ ವಾಪಾಸಾಗುವ ಆಲೋಚನೆ ಮಾಡುವಾಗ ಮನದಲ್ಲಿ ಅದಾಗಲೇ ದುಗುಡ ಆವರಿಸಿಯಾಗಿತ್ತು. ಹಾದಿಯ ನೆನೆದು.
ಆ ಹಾದಿಯ ಪರಿಯ ಆಲೋಚಿಸಿದರೇ ಮೈ ಜುಮ್ಮೆನ್ನುತ್ತದೆ.ಅಬ್ಬಬ್ಬಾ.....
ಅಂತೂ ಇಂತೂ ಕೆಳಗಿಳಿದು , ಮಧ್ಯದಲ್ಲಿ ಚಾ - ಬಿಸ್ಕತ್ತುಗಳನ್ನು ಸವಿದು ಗಣೇಶನ ಮನೆಗೆ ಬಂದು ಸ್ನಾನ ಮಾಡಿ
ಅದಾಗಲೇ ಜ್ಯೋತಿ ಅಕ್ಕ ಮಾಡಿಟ್ಟಿದ್ದ (ಉರ್ವಾರುಕ)
ಸೌತೆಕಾಯಿ ಕಡುಬನ್ನು ತಿಂದು...ಮಧ್ಯಾಹ್ನ ಭರ್ಜರಿ ಊಟವನ್ನೂ ಮಾಡಿ....ಭಯಂಕರ ಕ್ರಿಕೆಟ್ ಆಡಿ...ಸಂಜೆ ಅಲ್ಲಿಂದ ಹೊರಟು ಆಗುಂಬೆ ಮಾರ್ಗವಾಗಿ ಸಾತ್ವಿಕ ಆತನ ಮನೆ , ನಾನು ನಮ್ಮ ಸೂರಿನೆಡೆಗೆ ತಲುಪಿ....ಮತ್ತೆ ಮತ್ತೆ ಆ ರುದ್ರಭಯಂಕರ ಅನುಭವಗಳನ್ನು ಮೆಲುಕು ಹಾಕುತ್ತಿದ್ದೇನೆ....










Wednesday, 15 August 2018

ಔಷಧ ಕಂಪೆನಿಗಳ ಕರಾಳ ಮಾಫಿಯಾ ಮುಖವಾಡ.

ಹೀಗೊಂದು ಲೆಕ್ಕಾಚಾರ
           ಬೇರೆ  ಮೆಡಿಕಲ್ ನಲ್ಲಿ
ನನ್ನ ತಂದೆಯ ಒಂದು ಬಿಪಿ ಮಾತ್ರೆಗೆ 7.6₹
ನನ್ನ ದೊಡ್ಡಮ್ಮನ ಒಂದು ಬಿಪಿ ಮಾತ್ರೆಗೆ 5.8₹
         ಜನ್ ಔಷಧಿ ಕೇಂದ್ರದಲ್ಲಿ
ತಂದೆಯ ಒಂದು ಬಿಪಿ ಮಾತ್ರೆಗೆ 2.8₹
ದೊಡ್ಡಮ್ಮನ ಒಂದು ಬಿಪಿ ಮಾತ್ರೆಗೆ 0.9₹
          ನಾನು ಇಬ್ಬರಿಗೂ ಮೂರು ತಿಂಗಳಿಗೆ ಆಗುವಷ್ಟು ಮಾತ್ರೆ ತಂದಾಗ , ಬೇರೆ ಮೆಡಿಕಲ್ ನಲ್ಲಿ  1340₹ ಹಾಗೂ ಜನ್ ಔಷಧಿಯಲ್ಲಿ 370₹  ಎರಡಕ್ಕೂ ಇರುವ ವ್ಯತ್ಯಾಸ 1340₹ - 370₹= 970₹ , ಸರಿಸುಮಾರು  ಒಂದು ಸಾವಿರ ರೂಗಳ ವ್ಯತ್ಯಾಸ.
ಹಾಗಾದರೆ ಒಂದು  ವರ್ಷಕ್ಕೆ "3880₹".
       ( ನಾವು ಈವರೆಗೆ ಮಾತ್ರೆ ತರುತ್ತಿದ್ದ ಮೆಡಿಕಲ್ ಇರುವುದು ಹತ್ತಿರದ ಶಂಕರನಾರಾಯಣದಲ್ಲಿ (4km),
ಆದರೆ ಜನ್ ಔಷಧಿ ಕೇಂದ್ರ ಇರುವುದು ಕುಂದಾಪುರದಲ್ಲಿ(20km). ನಾನು ಈ ಕಾರಣಕ್ಕಾಗಿಯೇ ಕುಂದಾಪುರಕ್ಕೆ ಹೋದರೂ ಅಬ್ಬಬ್ಬಾ ಅಂದರೆ ತಗಲುವ  ಖರ್ಚು  200₹ . )
            ಇಷ್ಟು ವರ್ಷಗಳಿಂದ ಬಿಪಿ - ಶುಗರ್ ಗಳ ಹೆಸರಿನಲ್ಲಿ ಮೆಡಿಕಲ್ ಗಳ ಮೂಲಕ ಔಷಧ ಕಂಪೆನಿಗಳು  ಜನರ ಹಣವನ್ನು ದೋಚುತ್ತಿದ್ದ ಹಣ ........ಎಷ್ಟಾಗಬಹುದು....ಊಹಿಸಲೂ ಕಷ್ಟಸಾಧ್ಯ.
         ಕೇವಲ ಇಬ್ಬರಿಗೆ ಒಂದು ವರ್ಷಕ್ಕೆ 3880₹ ಆದರೆ ಭಾರತದಲ್ಲಿ ಕಡಿಮೆಯೆಂದರೂ ಕೇವಲ 40ಲಕ್ಷ ಜನ ಬಿಪಿ ಮಾತ್ರೆಯೊಂದನ್ನೇ ತೆಗೆದುಕೊಳ್ಳುತ್ತಾರೆ ಅಂದುಕೊಂಡರೆ ಅದರ ಮೊತ್ತ.........
(ಮಾತ್ರೆಯ ನಿಜವಾದ  ಖರ್ಚಲ್ಲ)
ಅಂದರೆ ಮೆಡಿಕಲ್ ಮಾಫಿಯಾ ಎಂಬ ಮಾಯಾಜಾಲ ಜನರನ್ನು ಸುಲಿಯುತ್ತಿದ್ದ ಹಣದ ಮೊತ್ತ
77600000000 ₹ .(ಏಳುಸಾವಿರದ ಏಳುನೂರಾ ಎಪ್ಪತ್ತಾರು ಕೋಟಿ )
ಇದು ಕೇವಲ ಒಂದು ಮಾತ್ರೆಯಿಂದ ದೋಚಿದ ಹಣ ಅಂದರೆ ನನ್ನಂತಹ ಕೋಟಿ ಜನರ ಒಂದು ವರ್ಷದ ದುಡಿಮೆಗೆ ಸಮ , ಅಥವಾ ಭಾರತದ ನೂರಿಪ್ಪತ್ತೈದು ಕೋಟಿ (125)ಜನರಿಗೆ
ಸುಮಾರು 2-3 ತಿಂಗಳುಗಳ ಕಾಲ  ಉಚಿತವಾಗಿ ಊಟ  ಕೊಡುವಷ್ಟು ......
         ಹಾಗಾದರೆ ಭಾರತದಲ್ಲಿ ಎಷ್ಟು ಕೋಟಿ ಜನ,
ಎಷ್ಟು ವರ್ಷಗಳಿಂದ , ಇಂತಹ ಎಷ್ಟು ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರಬಹುದು..‌‌‌ಅದರ ಮೊತ್ತ ಎಷ್ಟಾಗಬಹುದು.
( ಹಾಗೇ ಆಲೋಚಿಸಿದರೆ... ಸುಮಾರು   40 ಕೋಟಿ ಜನ ಕೇವಲ ಬಿಪಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ ಅಂದುಕೊಂಡರೆ ಒಂದು ವರ್ಷದ ಮೊತ್ತ  7.76e11₹.
ಹಾಗಾದರೆ  5 ಮಾತ್ರೆ  5ವರ್ಷಗಳಿಂದ ಎಂದು ಲೆಕ್ಕ ಮಾಡಿದಾಗ ಅದರ ಮೊತ್ತ 1.94e13 ₹ )
(ಈ ಮೊತ್ತಗಳನ್ನು Calculator ನಲ್ಲಿ ಕಾಣಬಹುದು.)
ಹಾಗೆ ಬಿಪಿ,ಶುಗರ್ , ಕ್ಯಾಲ್ಸಿಯಂ ಹೀಗೆ ಹತ್ತು ಹಲವಾರು ಕಾಯಿಲೆಗಳ ಸೋಗಿನಲ್ಲಿ ಜನರನ್ನು ದೋಚುತ್ತಿದ್ದ , ದೋಚುತ್ತಿರುವ ನಾವು ಹೀಗೇ ಮುಂದುವರೆದರೆ ಮುಂದೆಯೂ ದೋಚಬಹುದಾದ ಹಣದ ಮೊತ್ತ ಎಷ್ಟಾಗಬಹುದೆಂದು ಊಹಿಸಲೂ ಅಸಾಧ್ಯ. )
          ಕೊನೆಯ ಮಾತು.
ಸಾಧ್ಯವಾದಷ್ಟು ಜನ್ ಔಷಧಿ ಕೇಂದ್ರದಲ್ಲಿ ಔಷಧಗಳನ್ನು ಸ್ವೀಕರಿಸಿ , ನಿಮ್ಮ ಊರಿನಲ್ಲಿಯೂ ಕೇಂದ್ರದ ಸ್ಥಾಪನೆಗೆ ಮನವಿ ಸಲ್ಲಿಸಿ.
     (ವಿ .ಸೂ . ಕೇವಲ ಸಾಮಾನ್ಯ ವ್ಯಕ್ತಿಯಾಗಿ ಕೇಂದ್ರ ಸರಕಾರದ ಈ ಜನ್ ಔಷಧಿ ಯೋಜನೆಯನ್ನು ಪ್ರತಿಯೊಬ್ಬರಿಗೂ ತಲುಪಿಸುವ ನಿಟ್ಟಿನಲ್ಲಿ ಬರೆದಂಥ ಲೇಖನವೇ , ಹೊರತಾಗಿ ಯಾವುದೇ ಪಕ್ಷ , ವ್ಯಕ್ತಿಯ ಹೊಗಳಿಕೆಯ   ಅಥವಾ ಪ್ರಚಾರದ ಕುರಿತಾದದ್ದಲ್ಲ.)
📝 ಪದ್ಮನಾಭ ಅಡಿಗ
(9483917526)

Tuesday, 15 May 2018

ಮಲೆನಾಡಿನೊಡಲ ಜಾತೆ.

           ಆಕೆಯನ್ನು ಈ ಮೊದಲೇ ನೋಡಿದ್ದೆನಾದರೂ ಈ ಬಾರಿ ಆಕೆಯ ಸೌಂದರ್ಯ ಇಮ್ಮಡಿಯಾಗಿತ್ತೋ ಅಥವಾ ನಾನೇ ... ಆಕೆಯ ಬೆಡಗಿಗೆ ಮಾರುಹೋದೆನೋ ನಾ  ತಿಳಿಯೆ...
ಆಕೆ ಮಲೆನಾಡಿನವಳು . ಆಕೆಯ ತವರು ಏಲ್ಲೋ ತಿಳಿಯದು , ಆದರೆ ಆಕೆ ಈಗ ಇರುವುದು ಶೃಂಗೇರಿಯ ಸಮೀಪ ಕಿಗ್ಗ ಎಂಬಲ್ಲಿ .

ಅಲ್ಲಿಯೇ ಒಬ್ಬರು   ಭಟ್ಟರ ಮನೆಯಲ್ಲಿ ನಮ್ಮ ರಥಗಳನ್ನು ನಿಲ್ಲಿಸಿ ಅಲ್ಲಿಂದ ಆಕೆಯೆಡೆಗೆ ಹೊರಟೆವು .
ಹಾ... ನಾನು ಅವಳ ಬಗ್ಗೆಯೇ ಹೆಳುತ್ತ ನನ್ನ ಮಿತ್ರರ ಬಗ್ಗೆ ಹೇಳುವುದನ್ನೆ ಮರೆತೆ . ನಾನು ನನ್ನ ಮಿತ್ರರಾದ ಅಶ್ವಿನ್ ಐತಾಳ್ ಮತ್ತು ನಾಗರಾಜ ಉಡುಪರೊಂದಿಗೆ ಆಕೆಯನ್ನು ನೋಡಲು ಹೆಚ್ಚಿನ ಪುರ್ವ ತಯಾರಿಯಿಲ್ಲದೆ ಹೊರಟೆವು ... ಆದರೆ ಹೋದ ಮೇಲೆ ತಿಳಿಯಿತು ಸ್ವಲ್ಪ ತಯಾರಿ ಬೇಕಿತ್ತು ... ಅಂದರೆ ಪರ್ಫ್ಯೂಮ್  ಇತ್ಯಾದಿ ಏನಾದರೂ ಹಿಡಿದುಕೊಳ್ಳಬೇಕಿತ್ತು ....ಯಾಕೆಂದರೆ ಅವಳ ಮನೆ ಹತ್ತಿರ ವಿಪರೀತ ಇಂಬಳ... .ಭಟ್ಟರ ಮನೆಯಿಂದ ಸ್ವಲ್ಪ ದೂರ ನಡೆದು ಅಲ್ಲಿದ ಎಡಕ್ಕೆ ತಿರುಗಿ ಗುಡ್ಡದ ಮಧ್ಯಭಾಗದ ಕಾಲುದಾರಿಯಲ್ಲಿ ಓಡಲು ಆರಂಭಿಸಿದ ನಾವು ತನ್ಮಧ್ಯ ಹಲವಾರು ತೊಡಕುಂಟಾದರೂ ಓಡುವುದನ್ನು ನಿಲ್ಲಿಸಲಿಲ್ಲ ...ನಿಂತರೆ ದೇವರೇ ಗತಿ...ಅದಾಗಲೇ ನಮ್ಮ ಪಾದಗಳಿಗೆ ಮುತ್ತಿಕ್ಕಿದ್ದ ಇಂಬಳಗಳು ಅವುಗಳ ನೆಂಟರನ್ನೆಲ್ಲಾ ಕರೆಯಲಾರಂಭಿಸಿಬಿಡುತ್ತವೆ . ಇಂತಹ ಹಾದಿಯಲ್ಲಿ ಸುಮಾರು ೧ ಕಿ.ಮೀ ನಷ್ಟು ಓಡಿ ಆಕೆಯ ಪದತಲದಲ್ಲಿ ಬಂತು ನಿಂತಾಗ ಆವರೆಗೆ ಆದ ಆಯಾಸವೆಲ್ಲ ಮರೆತಂತಾಯ್ತು...ಆದರೆ ನಮ್ಮನ್ನು ಅಂಟಿದ್ದ ಇಂಬಳಗಳು ನಮ್ಮನ್ನು ವಾಸ್ತವಕ್ಕೆ ಕರೆದವು.  ಹರಸಾಹಸದಿಂದ ( ಅನುಭವದ ಕೊರತೆ ಅಲ್ಲವೆ ,ಅದಕ್ಕೆ ಹರಸಾಹಸ ಅಂದದ್ದು ) ಅವುಗಳನ್ನು ಕಿತ್ತೆಸೆದು ...ನಮ್ಮ ಪಾದರಕ್ಷೆಗಳನ್ನು ಅಲ್ಲಿಯೇ ಬಿಟ್ಟು ಆಕೆಯ ಮಡಿಲ ಸೇರುವಾಸೆಯಿಂದ ಆಕೆಯ ಸಮೀಪ ನಡೆದೆವು...ಅಬ್ಬಬ್ಬಾ.... ಅದಾಗಲೇ ನೆಲಕಚ್ಚಿದ್ದ ಬೃಹದ್ಗಾತ್ರದ ಮರಗಳನ್ನು ನೋಡಿ ನಿಬ್ಬೆರಗಾದೆವು .

      ಇನ್ನು ಆಕೆಯನ್ನು ನೋಡಲು ಕಣ್ಣು ಸಾಲದು , ಆಕೆಯ ಬಗ್ಗೆ ಹೇಳಲು ಮಾತು ಸಾಲದು ...
ಪ್ರಕೃತಿಮಾತೆಯ ಕೈಗೂಸು .... ಜನರ ಜೀವನಾಡಿಯಾಗಿ ಹರಿಯುತ್ತಿದ್ದಳಾ ಮಘೆಬೈಲಿನ ಸುಂದರಿ .ಒಂದಷ್ಟು ಹೊತ್ತು ಅಲ್ಲಿಯೇ ಕಳೆದು... ಆಕೆಯ ತಲೆಯನ್ನೊಮ್ಮೆ ನೋಡುವ ಕಾತರದಿಂದ ಆಕೆಯ ಪಕ್ಕದಲ್ಲಿದ್ದ ಮರದ ಸಹಾಯದಿಂದ ಕಾಡ ಬಳ್ಳಿಯ ಸಹಾಯದಿಂದ ಕಲ್ಲುಗಳನ್ನೇರಿ ಮೇಲೆ ಹೋಗಿ ....ಅಲ್ಲಿಂದ ಪಕ್ಷಿನೋಟವೂ ಚಿತ್ರೀಕರಣಗಳೂ...ಮುಗಿದು...ಸ್ವಲ್ಪ ಹರಟಿ....ಅಲ್ಲಿಂದ ಸ್ವಲ್ಪ ಮುಂದೆ ಸಾಗಿ ಅಲ್ಲಿಯೂ ಧರೆಗುರುಳಿದ್ದ ದೊಡ್ದ ಮರವೊಂದರ ಮೇಲೆ ತೆರಳಿ ಅಲ್ಲಿಯೂ ಚಿತ್ರಗಳನ್ನು ಕ್ಲಿಕ್ಕಿಸಿ....ಅಕಸ್ಮಾತ್ ನಮಗೊಂದು ದುಂಬಿ ಎದುರಾಗಿತ್ತು. ದುಂಬಿಯೆಂದರೆ ನಮ್ಮ ಆಲೋಚನೆಗೆ ಮೀರಿದ್ದು ...ಒಂದು ಗುಬ್ಬಿ ಗಾತ್ರದ ದುಂಬಿ... ನಮ್ಮಗಳ ಚಿತ್ತ ಅತ್ತ ಸರಿಯುದರೊಳಗೆ ಅದು ನಮ್ಮಿಂದ ಮರೆಯಾಗಿತ್ತು.

         ಅಲ್ಲಿಂದ ಕೆಳಗಿಳಿದು ಪುನಃ ಆ ಪ್ರಕೃತಿ ಮಾತೆಯ ಮಡಿಲಿಗೆ ಬಂದು ಆಕೆಯ ಮಡಿಲಲಿ ಮಗುವಾಗಿ...ಆಕೆಯ ತಣ್ಣನೆಯ ಸ್ಪರ್ಶಕೆ ನಮ್ಮ ತನುವನರ್ಪಿಸಿ....ಸ್ವರ್ಗ ಎಂಬುದು ಇದೆಯೇ ? ...ಎಂಬ ಪ್ರಶ್ನೆಗೆ ಇದೆ ಎಂಬುದು ಉತ್ತರವಾದರೆ ....ಅದು ಇದೇ...... ಎಂಬಷ್ಟು ಮನಕೆ ಮುದ ನೀಡುವ ಅನುಭವ ....

       ಮನದಣಿಯೆ ಅಲ್ಲಿದ್ದು ....ಚಿತ್ರಗಳನ್ನೂ ಕ್ಲಿಕ್ಕಿಸಿ ....ಹೊಟ್ಟೆ ಚುರುಕ್ ಎಂದಾಗ ಮನಸ್ಸಿಲ್ಲದ ಮನಸ್ಸಿನಿಂದ ಅಲ್ಲಿಂದ ಹೊರಟು ಬಂದ ದಾರಿಯಲ್ಲಿ ಹಿಂತಿರುಗಿ ನಮ್ಮ ರಥಗಳನ್ನೇರಿ ಹೆಗ್ಗದ್ದೆ ತಲುಪಿ ಅಲ್ಲಿ ಹೊಟ್ಟೆ ಬಿರಿಯುವಷ್ಟು ಉಂಡು ವಿರಮಿಸಿದೆವು . ಹ ಇಲ್ಲಿಯೂ ಸ್ವಲ್ಪ ಹೇಳಲಿಕ್ಕಿದೆ...ಕೆಲವರು ಹೇಳುವುದುಂಟು ಹಸಿವಾದಾಗ   ಹೇಗಿದ್ದರೂ ಹೊಟ್ಟೆಗೆ ಹೋಗುತ್ತದೆ ಎಂದು ...ಆದರೆ ಇಲ್ಲಿ ಅಮ್ಮನ ಕೈಯಡುಗೆ ಅಂದರೆ ನಲಪಾಕ ಎಂದರೂ ಕಡಿಮೆಯೇ .....ಅಹಾ....

      ನಂತರ ಅಲ್ಲಿಂದ ಹೊರಡುವ ನಮ್ಮ ಆಲೋಚನೆಗೆ ಮಳೆರಾಯನು ಅಡ್ಡಗಟ್ಟಿ ನಮ್ಮನ್ನು ಅಲ್ಲಿಯೇ ಉಳಿಯುವಂತೆ ಮಾಡಿದ...
ಅಲ್ಲಿಂದ ಮರುದಿನ ಪ್ರಾತಃ ಬೇಗನೆ ಹೊರಟ ನಮಗೆ ಬಿದರಗೋಡು ಎಂಬಲ್ಲಿ ಮಿತ್ರ ಸುದರ್ಶನ ಹೆಬ್ಬಾರರ ಜೊತೆಯಾಗಿ ಅವನ ಮನೆಗೂ ಹೋಗಿ...ಕಾಫಿ ಹೀರಿ ...ಅಲ್ಲಿಂದ ಕುಂದಾದ್ರಿಯನ್ನೇರಿದೆವು.....ಅಬ್ಬಾ ..ಆಹಾ.....ಎಂಬಷ್ಟು ಸುಂದರ ವಾತಾವರಣ....ಸೂರ್ಯೋದಯವು ಕಾಣ ಸಿಗದಿದ್ದರೂ " ಬಾನಿನಲಿ ಭಾನುಮುಗಿಲಿನೊಡಗುಡಿ ಮೂಡಿಸಿದ ವರ್ಣಚಿತ್ತಾರ ಇನ್ನೂ ಹಾಗೇ ಇತ್ತು... ನಮ್ಮಗಳ ಮನತುಂಬುವಷ್ಟು ... ನನ್ನ ಮೆಮೋರಿ ಕಾರ್ಡ್ ತುಂಬುವಷ್ಟು ....ಕೆಮರಾದ ಛಾರ್ಜ್ ಮುಗಿಯುವಷ್ಟು ...... "

ಅಲ್ಲಿಂದ ಪುನಃ ಹೆಬ್ಬಾರರ ಮನೆ ತಲುಪಿ ಪದ್ಮಕ್ಕ ಮಾಡಿದ ಬಿಸಿ-ಬಿಸಿ ಚಪಾತಿ ತಿಂದು......ಅಲ್ಲಿಂದ ನಮ್ಮಗಳ ಮನೆಯತ್ತ ಮುಖಮಾಡಿ ಹೊರಟೆವು...

     ಆಗುಂಬೆ ಘಾಟಿಯನ್ನಿಳಿದು ಸೋಮೆಶ್ವರದಿಂದ  ಕುಂದಾಪುರ ಮಾರ್ಗಕ್ಕೆ ತಿರುಗಿದಾಗ ನಮ್ಮ ಆಲೋಚನಾ ಪಥದಲ್ಲಿ ಹಾದು ಹೋದದ್ದು ...ಮುಂದಿನ ಸುಂದರಿಯ ಹುಡುಕಾಟ....ಅದಕ್ಕೊಂದು ಚಾರಣ ...ನಮ್ಮ ಹುಡುಗಾಟ ...ಇದಕ್ಕೆ ಇಂಬು ಕೊಟ್ಟದ್ದು ಒನಕೆ ಅಬ್ಬಿ ಎಂಬ ಜಲಸುಂದರಿ ....
ಶೀಘ್ರದಲ್ಲೇ ಆಕೆಯ ಪರಿಚಯ ಮಾಡಿಕೊಂಡು ಆಕೆಯನ್ನೂ ಕಂಡು ಬರುವ ಎಂಬ ಆಲೋಚನೆ ಮಾಡುತ್ತ ಮನೆ ಸೇರಿದೆವು .....