ಆಕೆಯನ್ನು ಈ ಮೊದಲೇ ನೋಡಿದ್ದೆನಾದರೂ ಈ ಬಾರಿ ಆಕೆಯ ಸೌಂದರ್ಯ ಇಮ್ಮಡಿಯಾಗಿತ್ತೋ ಅಥವಾ ನಾನೇ ... ಆಕೆಯ ಬೆಡಗಿಗೆ ಮಾರುಹೋದೆನೋ ನಾ ತಿಳಿಯೆ...
ಆಕೆ ಮಲೆನಾಡಿನವಳು . ಆಕೆಯ ತವರು ಏಲ್ಲೋ ತಿಳಿಯದು , ಆದರೆ ಆಕೆ ಈಗ ಇರುವುದು ಶೃಂಗೇರಿಯ ಸಮೀಪ ಕಿಗ್ಗ ಎಂಬಲ್ಲಿ .
ಅಲ್ಲಿಯೇ ಒಬ್ಬರು ಭಟ್ಟರ ಮನೆಯಲ್ಲಿ ನಮ್ಮ ರಥಗಳನ್ನು ನಿಲ್ಲಿಸಿ ಅಲ್ಲಿಂದ ಆಕೆಯೆಡೆಗೆ ಹೊರಟೆವು .
ಹಾ... ನಾನು ಅವಳ ಬಗ್ಗೆಯೇ ಹೆಳುತ್ತ ನನ್ನ ಮಿತ್ರರ ಬಗ್ಗೆ ಹೇಳುವುದನ್ನೆ ಮರೆತೆ . ನಾನು ನನ್ನ ಮಿತ್ರರಾದ ಅಶ್ವಿನ್ ಐತಾಳ್ ಮತ್ತು ನಾಗರಾಜ ಉಡುಪರೊಂದಿಗೆ ಆಕೆಯನ್ನು ನೋಡಲು ಹೆಚ್ಚಿನ ಪುರ್ವ ತಯಾರಿಯಿಲ್ಲದೆ ಹೊರಟೆವು ... ಆದರೆ ಹೋದ ಮೇಲೆ ತಿಳಿಯಿತು ಸ್ವಲ್ಪ ತಯಾರಿ ಬೇಕಿತ್ತು ... ಅಂದರೆ ಪರ್ಫ್ಯೂಮ್ ಇತ್ಯಾದಿ ಏನಾದರೂ ಹಿಡಿದುಕೊಳ್ಳಬೇಕಿತ್ತು ....ಯಾಕೆಂದರೆ ಅವಳ ಮನೆ ಹತ್ತಿರ ವಿಪರೀತ ಇಂಬಳ... .ಭಟ್ಟರ ಮನೆಯಿಂದ ಸ್ವಲ್ಪ ದೂರ ನಡೆದು ಅಲ್ಲಿದ ಎಡಕ್ಕೆ ತಿರುಗಿ ಗುಡ್ಡದ ಮಧ್ಯಭಾಗದ ಕಾಲುದಾರಿಯಲ್ಲಿ ಓಡಲು ಆರಂಭಿಸಿದ ನಾವು ತನ್ಮಧ್ಯ ಹಲವಾರು ತೊಡಕುಂಟಾದರೂ ಓಡುವುದನ್ನು ನಿಲ್ಲಿಸಲಿಲ್ಲ ...ನಿಂತರೆ ದೇವರೇ ಗತಿ...ಅದಾಗಲೇ ನಮ್ಮ ಪಾದಗಳಿಗೆ ಮುತ್ತಿಕ್ಕಿದ್ದ ಇಂಬಳಗಳು ಅವುಗಳ ನೆಂಟರನ್ನೆಲ್ಲಾ ಕರೆಯಲಾರಂಭಿಸಿಬಿಡುತ್ತವೆ . ಇಂತಹ ಹಾದಿಯಲ್ಲಿ ಸುಮಾರು ೧ ಕಿ.ಮೀ ನಷ್ಟು ಓಡಿ ಆಕೆಯ ಪದತಲದಲ್ಲಿ ಬಂತು ನಿಂತಾಗ ಆವರೆಗೆ ಆದ ಆಯಾಸವೆಲ್ಲ ಮರೆತಂತಾಯ್ತು...ಆದರೆ ನಮ್ಮನ್ನು ಅಂಟಿದ್ದ ಇಂಬಳಗಳು ನಮ್ಮನ್ನು ವಾಸ್ತವಕ್ಕೆ ಕರೆದವು. ಹರಸಾಹಸದಿಂದ ( ಅನುಭವದ ಕೊರತೆ ಅಲ್ಲವೆ ,ಅದಕ್ಕೆ ಹರಸಾಹಸ ಅಂದದ್ದು ) ಅವುಗಳನ್ನು ಕಿತ್ತೆಸೆದು ...ನಮ್ಮ ಪಾದರಕ್ಷೆಗಳನ್ನು ಅಲ್ಲಿಯೇ ಬಿಟ್ಟು ಆಕೆಯ ಮಡಿಲ ಸೇರುವಾಸೆಯಿಂದ ಆಕೆಯ ಸಮೀಪ ನಡೆದೆವು...ಅಬ್ಬಬ್ಬಾ.... ಅದಾಗಲೇ ನೆಲಕಚ್ಚಿದ್ದ ಬೃಹದ್ಗಾತ್ರದ ಮರಗಳನ್ನು ನೋಡಿ ನಿಬ್ಬೆರಗಾದೆವು .
ಇನ್ನು ಆಕೆಯನ್ನು ನೋಡಲು ಕಣ್ಣು ಸಾಲದು , ಆಕೆಯ ಬಗ್ಗೆ ಹೇಳಲು ಮಾತು ಸಾಲದು ...
ಪ್ರಕೃತಿಮಾತೆಯ ಕೈಗೂಸು .... ಜನರ ಜೀವನಾಡಿಯಾಗಿ ಹರಿಯುತ್ತಿದ್ದಳಾ ಮಘೆಬೈಲಿನ ಸುಂದರಿ .ಒಂದಷ್ಟು ಹೊತ್ತು ಅಲ್ಲಿಯೇ ಕಳೆದು... ಆಕೆಯ ತಲೆಯನ್ನೊಮ್ಮೆ ನೋಡುವ ಕಾತರದಿಂದ ಆಕೆಯ ಪಕ್ಕದಲ್ಲಿದ್ದ ಮರದ ಸಹಾಯದಿಂದ ಕಾಡ ಬಳ್ಳಿಯ ಸಹಾಯದಿಂದ ಕಲ್ಲುಗಳನ್ನೇರಿ ಮೇಲೆ ಹೋಗಿ ....ಅಲ್ಲಿಂದ ಪಕ್ಷಿನೋಟವೂ ಚಿತ್ರೀಕರಣಗಳೂ...ಮುಗಿದು...ಸ್ವಲ್ಪ ಹರಟಿ....ಅಲ್ಲಿಂದ ಸ್ವಲ್ಪ ಮುಂದೆ ಸಾಗಿ ಅಲ್ಲಿಯೂ ಧರೆಗುರುಳಿದ್ದ ದೊಡ್ದ ಮರವೊಂದರ ಮೇಲೆ ತೆರಳಿ ಅಲ್ಲಿಯೂ ಚಿತ್ರಗಳನ್ನು ಕ್ಲಿಕ್ಕಿಸಿ....ಅಕಸ್ಮಾತ್ ನಮಗೊಂದು ದುಂಬಿ ಎದುರಾಗಿತ್ತು. ದುಂಬಿಯೆಂದರೆ ನಮ್ಮ ಆಲೋಚನೆಗೆ ಮೀರಿದ್ದು ...ಒಂದು ಗುಬ್ಬಿ ಗಾತ್ರದ ದುಂಬಿ... ನಮ್ಮಗಳ ಚಿತ್ತ ಅತ್ತ ಸರಿಯುದರೊಳಗೆ ಅದು ನಮ್ಮಿಂದ ಮರೆಯಾಗಿತ್ತು.
ಅಲ್ಲಿಂದ ಕೆಳಗಿಳಿದು ಪುನಃ ಆ ಪ್ರಕೃತಿ ಮಾತೆಯ ಮಡಿಲಿಗೆ ಬಂದು ಆಕೆಯ ಮಡಿಲಲಿ ಮಗುವಾಗಿ...ಆಕೆಯ ತಣ್ಣನೆಯ ಸ್ಪರ್ಶಕೆ ನಮ್ಮ ತನುವನರ್ಪಿಸಿ....ಸ್ವರ್ಗ ಎಂಬುದು ಇದೆಯೇ ? ...ಎಂಬ ಪ್ರಶ್ನೆಗೆ ಇದೆ ಎಂಬುದು ಉತ್ತರವಾದರೆ ....ಅದು ಇದೇ...... ಎಂಬಷ್ಟು ಮನಕೆ ಮುದ ನೀಡುವ ಅನುಭವ ....
ಮನದಣಿಯೆ ಅಲ್ಲಿದ್ದು ....ಚಿತ್ರಗಳನ್ನೂ ಕ್ಲಿಕ್ಕಿಸಿ ....ಹೊಟ್ಟೆ ಚುರುಕ್ ಎಂದಾಗ ಮನಸ್ಸಿಲ್ಲದ ಮನಸ್ಸಿನಿಂದ ಅಲ್ಲಿಂದ ಹೊರಟು ಬಂದ ದಾರಿಯಲ್ಲಿ ಹಿಂತಿರುಗಿ ನಮ್ಮ ರಥಗಳನ್ನೇರಿ ಹೆಗ್ಗದ್ದೆ ತಲುಪಿ ಅಲ್ಲಿ ಹೊಟ್ಟೆ ಬಿರಿಯುವಷ್ಟು ಉಂಡು ವಿರಮಿಸಿದೆವು . ಹ ಇಲ್ಲಿಯೂ ಸ್ವಲ್ಪ ಹೇಳಲಿಕ್ಕಿದೆ...ಕೆಲವರು ಹೇಳುವುದುಂಟು ಹಸಿವಾದಾಗ ಹೇಗಿದ್ದರೂ ಹೊಟ್ಟೆಗೆ ಹೋಗುತ್ತದೆ ಎಂದು ...ಆದರೆ ಇಲ್ಲಿ ಅಮ್ಮನ ಕೈಯಡುಗೆ ಅಂದರೆ ನಲಪಾಕ ಎಂದರೂ ಕಡಿಮೆಯೇ .....ಅಹಾ....
ನಂತರ ಅಲ್ಲಿಂದ ಹೊರಡುವ ನಮ್ಮ ಆಲೋಚನೆಗೆ ಮಳೆರಾಯನು ಅಡ್ಡಗಟ್ಟಿ ನಮ್ಮನ್ನು ಅಲ್ಲಿಯೇ ಉಳಿಯುವಂತೆ ಮಾಡಿದ...
ಅಲ್ಲಿಂದ ಮರುದಿನ ಪ್ರಾತಃ ಬೇಗನೆ ಹೊರಟ ನಮಗೆ ಬಿದರಗೋಡು ಎಂಬಲ್ಲಿ ಮಿತ್ರ ಸುದರ್ಶನ ಹೆಬ್ಬಾರರ ಜೊತೆಯಾಗಿ ಅವನ ಮನೆಗೂ ಹೋಗಿ...ಕಾಫಿ ಹೀರಿ ...ಅಲ್ಲಿಂದ ಕುಂದಾದ್ರಿಯನ್ನೇರಿದೆವು.....ಅಬ್ಬಾ ..ಆಹಾ.....ಎಂಬಷ್ಟು ಸುಂದರ ವಾತಾವರಣ....ಸೂರ್ಯೋದಯವು ಕಾಣ ಸಿಗದಿದ್ದರೂ " ಬಾನಿನಲಿ ಭಾನುಮುಗಿಲಿನೊಡಗುಡಿ ಮೂಡಿಸಿದ ವರ್ಣಚಿತ್ತಾರ ಇನ್ನೂ ಹಾಗೇ ಇತ್ತು... ನಮ್ಮಗಳ ಮನತುಂಬುವಷ್ಟು ... ನನ್ನ ಮೆಮೋರಿ ಕಾರ್ಡ್ ತುಂಬುವಷ್ಟು ....ಕೆಮರಾದ ಛಾರ್ಜ್ ಮುಗಿಯುವಷ್ಟು ...... "
ಅಲ್ಲಿಂದ ಪುನಃ ಹೆಬ್ಬಾರರ ಮನೆ ತಲುಪಿ ಪದ್ಮಕ್ಕ ಮಾಡಿದ ಬಿಸಿ-ಬಿಸಿ ಚಪಾತಿ ತಿಂದು......ಅಲ್ಲಿಂದ ನಮ್ಮಗಳ ಮನೆಯತ್ತ ಮುಖಮಾಡಿ ಹೊರಟೆವು...
ಆಗುಂಬೆ ಘಾಟಿಯನ್ನಿಳಿದು ಸೋಮೆಶ್ವರದಿಂದ ಕುಂದಾಪುರ ಮಾರ್ಗಕ್ಕೆ ತಿರುಗಿದಾಗ ನಮ್ಮ ಆಲೋಚನಾ ಪಥದಲ್ಲಿ ಹಾದು ಹೋದದ್ದು ...ಮುಂದಿನ ಸುಂದರಿಯ ಹುಡುಕಾಟ....ಅದಕ್ಕೊಂದು ಚಾರಣ ...ನಮ್ಮ ಹುಡುಗಾಟ ...ಇದಕ್ಕೆ ಇಂಬು ಕೊಟ್ಟದ್ದು ಒನಕೆ ಅಬ್ಬಿ ಎಂಬ ಜಲಸುಂದರಿ ....
ಶೀಘ್ರದಲ್ಲೇ ಆಕೆಯ ಪರಿಚಯ ಮಾಡಿಕೊಂಡು ಆಕೆಯನ್ನೂ ಕಂಡು ಬರುವ ಎಂಬ ಆಲೋಚನೆ ಮಾಡುತ್ತ ಮನೆ ಸೇರಿದೆವು .....
nice click
ReplyDeleteಧನ್ಯವಾದ.....
DeleteOsm
ReplyDelete☺👍
ReplyDeleteGood
ReplyDeleteಧನ್ಯವಾದ.....
Delete