ಆ ಇಳಿಸಂಜೆಯ ಹೊತ್ತಿನಲಿ ಎಲ್ಲರೂ ನೋಡ-ನೋಡುತ್ತಿದ್ದಂತೆ ಧಗಧಗನೆ ಉರಿವ ಅಗ್ನಿಜ್ವಾಲೆಗೆ ಆತ ಆಕೆಯನ್ನು ಎತ್ತಿ ಎಸೆದುಬಿಟ್ಟಿದ್ದ.
ಇಷ್ಟುದಿನ ಎಲ್ಲರಿಗೂ ಬೇಕಾಗಿದ್ದ ಆ ಮಹತಾಯಿಯನ್ನು ವಯಸ್ಸಾಗಿದೆ ಎಂಬ ಕಾರಣಕ್ಕೆ ಅಪ್ರಯೋಜಕಳು ಎಂದು ತೀರ್ಮಾನಿಸಿ ಬಿಟ್ಟಿದ್ದರು.ಮನೆಯ ಎಲ್ಲರನ್ನೂ ಇಷ್ಟುದಿನ ಸಲಹಿದಾಕೆ ಎಂಬುದನ್ನೂ ಮರೆತು ಆ ಕೃತ್ಯವನ್ನು ಎಸಗಿಬಿಟ್ಟಿದ್ದರು.
ಆಕೆ ಮನೆಯಲ್ಲಿ ಎಲ್ಲರಿಗೂ ಅಚ್ಚುಮೆಚ್ಚು. ಆತನೊಬ್ಬನ್ನು ಬಿಟ್ಟು. ಆಕೆಯಾದರೋ ಆತನಿಗೆ ಮನದಲ್ಲಿಯೂ ಕೂಡಾ ಕೆಟ್ಟದ್ದನ್ನು ಭಾವಿಸಿಲ್ಲವೇನೋ....ಆದರೂ ಆತನಿಗೆ ಆಕೆಯೆಂದರೆ ಅಸಹ್ಯ.....ಒಂದೊಮ್ಮೆ ಆಡಿಬಿಟ್ಟಿದ್ದ ಕೂಡ...ನಿನ್ನನ್ನು ಕಡಿದೇ ತೀರುತ್ತೇನೆಂದು.....ಆದರೆ...ಆದರೆ...ಈಗ ಆಕೆಯೂ ತನ್ನಂತಯೇ ಒಂದು ಜೀವಿ ,ಆಕೆಗೂ ಜೀವವಿದೆ... ಎಂಬುದನ್ನೂ ಮರೆತು ಜೀವಂತವಾಗಿ ಅಗ್ನಿಗೆ ಆಹುತಿಯಾಗಿಸಿಬಿಟ್ಟಿದ್ದ...
ಆಕೆಯ ದೇಹ ಅಗ್ನಿಯಲ್ಲಿ ದಹಿಸುತ್ತಿದ್ದರೂ,ಆಕೆ ಬೊಬ್ಬಿರಿದವಳಲ್ಲ...ಚೀರಿದವಳಲ್ಲ.. ಕೊನೆವರೆಗೂ ಒಂದು ಮಾತೂ ಆಡದೇ ಮೌನಿಯಾಗಿಯೇ ಉಳಿದಳು....ಮೌನಿಯಾಗಿಯೇ....ಸತ್ತಳು....ಮೌನವೇ ಎಲ್ಲದಕ್ಕೂ ಉತ್ತರವೇನೋ ಎಂಬುದಕ್ಕೆ ಜ್ವಲಂತ ಸಾಕ್ಷಿ ಆಕೆ...
ಆಕೆಯ ಆ ಸಾವಿನ ಕ್ಷಣದಲ್ಲೂ ಆತನ ಕಣ್ಣಿನಿಂದ ಒಂದೇ ಒಂದು ಹನಿ ನೀರೂ ಜಾರಲಿಲ್ಲ....ನಿರ್ಭಾವುಕನಾಗಿ ನಿಂತಿದ್ದ....ಆತನ ಮನದಲ್ಲಿದ್ದುದು ಒಂದೇ....ಆಕೆ ಇನ್ನು ಅಪ್ರಯೋಜಕಳು ಎಂದು....
ಹಾಗಾದರೆ ವಯಸ್ಸಾದವರಿಗೆ ಬೆಲೆಯೇ ಇಲ್ಲವೇ....
ಈ ಜಗತ್ತಿನಲ್ಲಿ ಅವರಿಗೆ ಬದುಕುವ ಹಕ್ಕಿಲ್ಲವೇ...
ಯಾವುದನ್ನೂ ವಿರೋಧಿಸುವುದಿಲ್ಲ ಎಂದ ಮಾತ್ರಕ್ಕೆ
ಒಪ್ಪಿಗೆ ಎಂದರ್ಥವಲ್ಲ...ಮೌನಂ ಸಮ್ಮತಿ ಲಕ್ಷಣಂ ಎಂದರ್ಥವಲ್ಲ...
ಉರಿವ ಬೆಂಕಿಯಲೂ ....ಮೌನವಾಗಿಯೇ ಉಳಿದ ನೀನು...ಮಹತಾಯಿ...
ನೀನು ಮಹಾತ್ಯಾಗಿ....
ನೀನೇ....ನೀನೇ....
ನಮ್ಮನೆಯ... ಬದನೆಕಾಯಿ (ಗಿಡ).
©ಅಡಿಗ ( Adiga Clicks , 9483917526 )
Sunday, 17 December 2017
ಸಜೀವದಹನ.
Thursday, 2 November 2017
ಬೆಳ್ಕಲ್ ಎಂಬ ಭೂ ಸ್ವರ್ಗ..
ಆಕೆಯನ್ನುನೋಡುವ ಕಾತರ ಬಹಳ ದಿನಗಳಿಂದ ಇದ್ದಿತ್ತಾದರೂ ನೋಡುವ ಶುಭಗಳಿಗೆ ರಾಜ್ಯೋತ್ಸವದಂದು ಲಭಿಸಿದ್ದು ನನ್ನ ಭಾಗ್ಯವೇ ಸರಿ."ಕಲ್ಪನೆಯ ಅಮರಾವತಿಯನ್ನೂ ನಾಚಿಸುವ ಝರಿಯ ಸಿರಿಯದು. ಕೊಡಚಾದ್ರಿಯ ತಪ್ಪಲಿನ ದಟ್ಟ ಕಾನನದ ನಡುವೆ ಅಪರಿಚಿತರಿಗೂ ಅನಂತ ಪ್ರೇಮ ಸುಧೆಯ ಜಲಧಾರೆ ಈಯುವಾಕೆ,ಈಕೆ ಬೆಳ್ಕಲ್ ಸುಂದರಿ..."
ಮಿತ್ರ ಅಶ್ವತ್ಥನೊಂದಿಗೆ ಹೊರಟ ಸವಾರಿ ಅಂಪಾರಿನಲ್ಲಿ ಒಂದು ಕಿಲೋ ಸೇಬು ತೆಗೆದುಕೊಳ್ಳುವುದರಿಂದ ಆರಂಭಿಸಿ,ಜಡ್ಕಲ್ಲಿನಿಂದ ಮುದೂರು ಮಾರ್ಗವಾಗಿ ಸಾಗಿ ಅಲ್ಲಿಂದ ಕ್ಷೌರದಂಗಡಿ-ರಬ್ಬರ್ ತೋಟದವರು ದಾರಿಹೋಕರು ಹೀಗೇ ಹಲವರಲ್ಲಿ ದಾರಿ ಕೇಳುತ್ತಾ ಹಾದಿಯ ಕೊನೆಗೆ ಗಣಪತಿ ದೇವಾಲಯದ ಸಮೀಪ ಸ್ವಲ್ಪ ಮುಂದೆ ಸಾಗಿ ಅಲ್ಲಿಯೆ ಒಬ್ಬರ ಮನೆಯಲ್ಲಿ ಅವರ ಅಣತಿಯಂತೆ ನಮ್ಮ ವಾಹನವನ್ನು ಇರಿಸಿ,ನಮ್ಮ ಚಾರಣವನ್ನು ಆರಂಭಿಸಿದೆವು.
ದಟ್ಟ ಕಾಡಿನ ನಡುವೆ ಒಂಟಿ ಹಾದಿಯ ಪಯಣದಲ್ಲಿ ಅಲ್ಲಲ್ಲಿ ವಿರಮಿಸುತ್ತ ಮಹಾವೃಕ್ಷಗಳ ಮಡಿಲಲ್ಲಿ ಕೂತು ಗರ್ಭಸ್ಥ ಶಿಶುವಿನ ಬೆಚ್ಚನೆಯ ಭಾವವನು ಮೈದಳೆಯುತ್ತ ಮುಂದೆ ಸುಮಾರು ೪೫ ನಿಮಿಷಗಳ ಕಾಲ್ನಡಿಗೆಯ ನಂತರ ಆಕೆ ಒಮ್ಮೆ ದರುಶನವಿತ್ತಳು.ಅದಾಗಲೇ ಭೋರ್ಗರೆವ ನೀರ ರವದ ನಡುವೆ ಮನುಷ್ಯರ ಕೇಕೆ -ಹಾಹಾಕಾರ ಕೇಳಿಸುತ್ತಿತ್ತು. ಇದ್ಯಾಕೆ ಹೀಗೆ ಚೀರಾಡುವರು ಇವರು ಎಂಬ ನಮ್ಮ ಪ್ರಶ್ನೆಗೆ ನಮಗೆ ಆಕೆ ನಂತರ ಉತ್ತರ ಇತ್ತಿದ್ದಳು ಅಂಬೋಣ.ಕೊನೆಗೂ ಆಕೆಯ ಪೂರ್ಣ ದರ್ಶನ ಪಡೆಯುವಲ್ಲಿ ಸಫಲರಾದ ನಾವು ಆಕೆಯ ಪಾದಸ್ಪರ್ಶಕೆ ಹಂಬಲಿಸುತ್ತಿದ್ದೆವು . ಛಾಯಾಗ್ರಹಣದ ಶಾಸ್ತ್ರವನ್ನು ಒಮ್ಮೆ ಮುಗಿಸಿ, ಆಕೆಯ ಮಡಿಲಲ್ಲಿ ಮಗುವಾಗುವಾಸೆಯಿಂದ ಅವಳೆಡೆಗೆ ಬಂಡೆಗಲ್ಲುಗಳ ದಾಟಿ ತಲುಪಿದೆವು . ನಮ್ಮ ಪುಣ್ಯ ಇಂಬಳಗಳ ಕಾಟವಿಲ್ಲ.
ಮನಸೋ ಇಚ್ಛೆ ...ಮನದಣಿಯೆ ಮೀಯುವಾಗ ಆಕೆಯ ಮಡಿಲಲ್ಲಿ ಉಳಿದವರು ಯಾಕೆ ಕೂಗುತ್ತಿದ್ದರು ಎಂಬುದಕ್ಕೆ ಉತ್ತರವಿತ್ತಿದ್ದಳು .ಕೊಂಡೊಯ್ದ ಸೇಬುಗಳನ್ನು ಅಲ್ಲಿ ತಿನ್ನುವಾಗ ಅದೆಂತಹ ಖುಶಿಯೊ ನಾ ತಿಳಿಯೆ...ಅಲ್ಲದೆ ಸಾವಿರ ಸಾವಿರ ಸೂಜಿಯಿಂದ ಒಮ್ಮೆಲೇ ಮೈಯನ್ನು ಚುಚ್ಚಿದ ಅನುಭವ...ಸುಮಾರು ೮೦ ಮೀಟರ್ ಎತ್ತರದಿಂದ ಬೀಳುವ ಸಹಸ್ರಾರು ನೀರ ಹನಿಗಳಿಗೆ ಮೈಯೊಡ್ಡಿ ನಿಲ್ಲುವಾಗ ಸಾಕೆನಿಸುವಷ್ಟು ಆನಂದ...ಅಪರಿಮಿತ ಸುಖದ ಅನುಭೂತಿ...ಅದನ್ನು ಪದಗಳಿಂದ ವಿವರಿಸಲಾಗದೇನೋ...ವಾಯುವಿನ ಆಟಕ್ಕೆ ಈಕೆ ನಡೆಯುತಿಹ ನಾರಿಯ ನೀಳ್ಜಡೆಯಂತೆ ಅತ್ತಿಂದಿತ್ತ ಹೊಯ್ದಾಡುತ್ತಿದ್ದಳು. ಸುಮಾರು ೨೦ ಮೀ ಅಗಲದವರೆಗೂ ಇವರಿರ್ವರ ಆಟದ ಪರಿಧಿಯಿತ್ತು.
ಈಕೆಯ ಪ್ರೇಮಪಾಶದಿ ಬಂಧಿಯಾದಾಗ ಒಮ್ಮೆ ಅನಿಸಿತ್ತು...ಪ್ರತಿ ತಾಯಿಗೂ ಪ್ರಸವ...ಎಂಬುದು ವೇದನೆಯಾದರೂ ಕರುಳ ಬಳ್ಳಿ ಬರುವುದೆಂದು ಸಂತಸವಲ್ಲವೇ...ಆನಂದದ ಹಾಗೂ ಕಷ್ಟದ ಸಮಯ ಒಟ್ಟಿಗೆ ಬಂದಾಗ ಅದನ್ನು ಮರೆಯಲಾಗದು ಎಂಬ ಮಾತು ಅಕ್ಷರಶಃ ನಿಜ ಅನ್ನಿಸಿತ್ತು.ರಪರಪನೆ ಬೀಳುವ ನೀರ ಹನಿಯಡಿಯಲ್ಲಿ ನಿಲ್ಲಲಾಗದು...ನಿಲ್ಲದೇ ಬಿಟ್ಟು ಹೋಗಲು ಮನಸಾಗದು.ಅದೊಂದು ಮಾದಕತೆ.ಆ ಸಮಯ ನಮ್ಮ ಬಾಯಲ್ಲಿ ಬರುವ ಪ್ರತಿ ವಾಕ್ಯಗಳು ಕವನದಂತಿದ್ದವು.
ಮನಸ್ಸಿಲ್ಲದಿದ್ದರೂ ಕಾಲನ ಭಯದಿಂದ ಆಕೆಯ ಮಡಿಲಿನಿಂದ ಹೊರಬಂದು ಮೈಯೊರಸಿಕೊಂಡು ಉಳಿದ ಸೇಬುಗಳನ್ನು ತಿಂದು ಆಕೆಯ ಪೂರ್ಣ ಸ್ವರೂಪವನ್ನು ಕೆಮರಾದಿಂದಲೂ ಕ್ಲಿಕ್ಕಿಸಿ ,ಸ್ವಲ್ಪ ವಿರಮಿಸಿ ನಂತರ ಆ ಭೂಸ್ವರ್ಗದಿಂದ ಬಂದ ದಾರಿಯಲ್ಲಿಯೇ ಹೊರಟು ಸ್ವಲ್ಪ ದೂರದಲ್ಲಿಯೇ ಆಕೆಯಿಂದ ಹುಟ್ಟಿದ ಇನ್ನೊಂದು ಜಲಧಾರೆಯನ್ನೂ ಕಂಡು ಊರಿನೆಡೆಗೆ ಸಾಗಿದೆವು. ಹೋಗುವಾಗ ಕೆಲವು ಸ್ಥಳಗಳಲ್ಲಿ ಆಡಿದ ಸಾಂದರ್ಭಿಕ ಮಾತುಗಳು ಹಾದಿಯ ನೆನಪಿಗೆ ಸಹಕಾರಿಯಾಯ್ತು .ಐತಾಳ್ರು ಇದನ್ನೆ Trekking tips ಆಗಿಯೂ ನೀಡಬಹುದೆಂದು ಹೇಳಿದರು.ಕೊನೆಗೆ ಗಾಡಿಯನ್ನು ತೆಗೆದುಕೊಂಡು,ಸ್ವಲ್ಪ ಮುಂದೆ ಬಂದುಒಂದು ಗದ್ದೆಯ ಸಮೀಪ ನಿಲ್ಲಿಸಿ ಪುನಹ ಆ ಜಲಸಿರಿಯ ಪೂರ್ಣ ರೂಪವನ್ನು ನೋಡಿ,ಕ್ಲಿಕ್ಕಿಸಿ ಅಲ್ಲಿಯೇ ಇದ್ದ ಗಿಣಿಗಳ ಛಾಯಾಗ್ರಹಣ ಮಾಡಿ ಅಲ್ಲಿಂದ ಹೊರಟು ಐತಾಳರ ಮನೆ ತಲುಪಿ ಬಿಸಿ ಬಿಸಿ ಕಾಫಿ ಹೀರಿ ದೋಸೆ -ಹೋಳಿಗೆ ತಿಂದು ಮನೆ ತಲುಪಿದಲ್ಲಿಗೆ ...ನನ್ನ ನೆನಪಿನ ಕಡತಕ್ಕೆ ಇನ್ನೊಂದು ಖುಶಿಯ ಪುಟವ ಸೇರಿಸುತ್ತಾ ಈ ಕಥೆಯನ್ನು ಮುಕ್ತಾಯ ಮಾಡುತ್ತಿದ್ದೇನೆ .
* ದಾರಿಯ ಮಾಹಿತಿ ನೀಡಿದ ಮಿತ್ರ ಉಮೇಶಣ್ಣ ಹಾಗೂ ನಾಗರಾಜ ಉಡುಪರಿಗೂ ಧನ್ಯವಾದ.
* ಇಲ್ಲಿ ಬೇಸರದ ಸಂಗತಿಯೆಂದರೆ ಪ್ರವಾಸಿಗರು ಸುಂದರ ಕಾನನದ ಅಂದವನ್ನು ಪ್ಲಾಸ್ಟಿಕ್ ಇನ್ನಿತರ ಕಸಗಳಿಂದ ಮಲಿನಗೊಳಿಸುತ್ತಿರುವುದು.ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ.ಆದ್ದರಿಂದ ...ಪ್ರಕೃತಿಯ ಬಗ್ಗೆ ಶುದ್ಧ ಕಾಳಜಿಯುಳ್ಳವರಾಗೋಣ.ನಾವು ಕೊಂಡೊಯ್ದು ಕಸಗಳನ್ನು ಎಲ್ಲೆಂದರಲ್ಲಿ ಬಿಸಾಡದೇ ಅದಕ್ಕಿರುವ ಜಾಗದಲ್ಲಿಯೇ ಎಸೆಯೋಣ . ಪ್ರಾಥಮಿಕ ಶುಚಿತ್ವದ ಅರಿವನ್ನು ಎಲ್ಲರಿಗೂ ಮೂಡಿಸೋಣ.
Saturday, 21 October 2017
ಮಲೆನಾಡಿನ ಜಲಸುಂದರಿಯರು.
ದಿನ -೧
ಅಪ್ಸರಕೊಂಡ
ದಿನಾಂಕ ೧೩-೧೦-೧೭ ಬೆಳಗ್ಗೆ ೬-೪೫ಕ್ಕೆ ನಮ್ಮನೆಯಿಂದ ಆರಂಭವಾದ ಈ ಮಹಾಪ್ರಯಾಣ ಹೆಮ್ಮಾಡಿ ,ಬೈಂದೂರು , ಭಟ್ಕಳ ಮಾರ್ಗವಾಗಿ ಸಾಗಿ ಮೊದಲನೆಯದಾಗಿ ಹೊನ್ನಾವರದಿಂದ ಸ್ವಲ್ಪ ಹಿಂದೆ ಅಪ್ಸರಕೊಂಡ ಜಲಪಾತಕ್ಕೆ ಭೇಟಿ .ಈ ಸ್ಥಳದಲ್ಲಿ ನದಿಯು ಶರಧಿಯ ಸೇರುವ ಪರಿಯ ನೋಡುವ ಭಾಗ್ಯ ನಮಗೆ ಸಿಗಲಿದೆ .
ವಿಭೂತಿ
ಹೊನ್ನಾವರ ಕುಮಟಾ ಮಾರ್ಗವಾಗಿ ಮಾದನಗೇರಿಯಲ್ಲಿ ಬಲಕ್ಕೆ ತಿರುಗಿ ಯಲ್ಲಾಪುರ ಮಾರ್ಗವಾಗಿ ಹಿಲ್ಲೂರಿನಿಂದ ವಿಭೂತಿ ಜಲಪಾತಕ್ಕೆ ತೆರಳಿದೆನು.ಗಾಡಿ ನಿಲ್ಲಿಸಿ ಬೆಟ್ಟದ ಸುಗಮವಾದ ದಾರಿಯಲ್ಲಿ ಮುಕ್ಕಾಲು ಕಿಲೋಮೀಟರ್ ಸಾಗಿದಾಗ ನಮಗೆ ಈ ಜಲಪಾತದ ದರ್ಶನವಾಗುತ್ತದೆ .ಪ್ರಶಾಂತವಾದ ವಾತಾವರಣ ,ಸುಂದರ ಜಲಪಾತ ಅಲ್ಲದೆ ಇದರ ಎರಡನೆಯ ಹಂತವನ್ನು ಗುಡ್ದದಿಂದ ಸ್ವಲ್ಪ ಕೆಳಗಿಳಿದು ನೋಡಬಹುದು .
ನಂತರ ರಾಮನಗುಳಿಯಿಂದ ೫ ಕಿ,ಮೀ. ಗಾಂವ್ಕರ್ ಅವರ ಮನೆಯಲ್ಲಿ ಭೋಜನ ಸೇವಿಸಿದೆನು.
ಶಿರಲೆ ಜಲಪಾತ
ಗೋಪಾಲಕೃಷ್ಣನೊಂದಿಗೆ ಕುಮಟಾ ಯಲ್ಲಾಪುರ ಮಾರ್ಗದಲ್ಲಿ ಇಡುಗುಂದಿಯ ಸಮೀಪ ಬಲಕ್ಕೆ ತಿರುಗಿ ೨ ಕಿ.ಮೀ (ಸ್ವಲ್ಪ ಕಷ್ಟದ ಹಾದಿ)ತಗ್ಗು ಪ್ರದೇಶದ ರಸ್ತೆಯಲ್ಲಿ ತೆರಳಿ ಜಲಪಾತದ ಸಮೀಪ ಗಾಡಿಯನ್ನಿಟ್ಟು ತೋಟದ ಮೂಲಕ ಜಲಪಾತದ ಬುಡಕ್ಕೆ ಹೋದೆವು . ಪುನಃ ಗಾಂವ್ಕರ್ ಮನೆಯಲ್ಲಿ ವಾಸ್ತವ್ಯ.
ದಿನ-೨
ಕಾನೂರು ಜಲಪಾತ
ಅಂದರೆ ದಿನಾಂಕ೧೪-೧೦-೧೭ ಬೆಳಿಗ್ಗೆ ಗಾಂವ್ಕರ್ ಅವರ ಮನೆಯಲ್ಲಿ ಪರಿಚಯವಾದ ಪ್ರಸಾದ್ ಅವರೊಂದಿಗೆ ಕಾನೂರು ಜಲಪಾತಕ್ಕೆ ಕೊಡ್ಲಗದ್ದೆ ಘಾಟಿಯ ಮೂಲಕ ಹೋಗಿದ್ದು ...ಅಬ್ಬಾ hill climb game live ಆಡಿದ ಅನುಭವ.(ಅಂತಹ ದಾರಿ).೭ ಕೀ,ಮೀ ಕಾಡಿನ ಒಳಗಡೆ ಗಾಡಿಯ ಮೂಲಕ ಸಾಗಿ ಸುಮಾರು ೧ ಕೀ.ಮೀ ನಡೆದು ಜಲಪಾತವನ್ನು ವೀಕ್ಷಿಸಿದೆವು...ಇದೊಂದು ಅದ್ಭುತ ಜಲಪಾತ. ನಾವು ಈ ಜಲಪಾತದ ತಲೆಯ ಮೇಲಿದ್ದೆವು .ಹಾಗೂ ಹೀಗೂ ಸಾಹಸ ಮಾಡಿ tripod ಸಹಾಯದಿಂದ ಒಂದಿಷ್ಟು ಚಿತ್ರಗಳನ್ನು ಸೆರೆಹಿಡಿದು ,ಮತ್ತೂ ಸಾಹಸ ಮಾಡಿ ಬೆಟ್ಟದ ತುದಿಯ ಮರದ ಮೇಲೆ ಹತ್ತಿ ಅಲ್ಲಿಂದಲೂ ಚಿತ್ರಗ್ರಾಹಣ ನಡೆಯಿತು.ಒಂದು ಬೇಸರದ ಸಂಗತಿ ಎಂದರೆ ನನ್ನ camera ಇಂದ ಈ ಜಲಪಾತದ ಪೂರ್ಣ ಚಿತ್ರ ಸೆರೆ ಹಿಡಿಯಲು ಸಾಧ್ಯವಾಗದಿದ್ದದ್ದು .
ಮಾಗೋಡು ಜಲಪಾತ
ಅಲ್ಲಿಂದ ಪ್ರಸಾದ್ ಅವರಿಂದ ಬೀಳ್ಗೊಂಡು ,ಸ್ವಲ್ಪ ಕಡಿದಾದ ದಾರಿಯಿಂದ ಮಾಗೋಡು ತಲುಪಿದೆನು.ಮಾಗೋಡು ಜಲಪಾತವನ್ನು ದೂರದಿಂದ ಮಾತ್ರ ವೀಕ್ಷಿಸಲು ಸಾಧ್ಯ .ಹಾಗೆ ತುಂಬಾ ಎತ್ತರದಿಂದ ಬೀಳುವ ನೀರಿನಿಂದ ಉಂಟಾಗುವ ಹಿಮ ಮೈಮನಗಳನ್ನು ಪುಳಕಗೊಳಿಸುವುದಂತೂ ಸತ್ಯ . ಅಲ್ಲದೇ ಕಾಮನಬಿಲ್ಲು ಜಲಪಾತದ ಜೊತೆಗೆ ನಿಂತದ್ದೂ ವಿಶೇಷ.ಇಲ್ಲಿಂದ ನೇರವಾಗಿ ಹಂಗಾರಿ ಮನೆ ತಲುಪಿ ಭೋಜನ ಮಾಡಿ ಹಂಗಾರಿಯ ತಂದೆಯೊಂದಿಗೆ ಸಾತೊಡ್ಡಿಯಸುಂದರಿಯ ನೋಡ ಹೊರಟೆವು.
ಸಾತೊಡ್ಡಿ ಜಲಪಾತ
ಅಬ್ಬಾ...ದುರ್ಗಮ ಹಾದಿ ಸುರಿಮಳೆಯು ಜೊತೆಯಾಗಿ ನಮ್ಮನ್ನು ಕಂಗೆಡಿಸಿದ್ದು ನಿಜ.ದಿನದ ಕೊನೆಯ ವೀಕ್ಷಕರಾಗಿ ಅಲ್ಲಿಂದ ವಾಪಾಸಾಗಿ ಪೃಥ್ವಿಯ ಮನೆಗೆ ಹೋಗಿ ಅಲ್ಲಿ ಉಪಾಹಾರ ಸೇವಿಸಿ,ಅಲ್ಲಿಂದ ಹಂಗಾರಿ ಮನೆಗೆ ವಾಪಾಸಾಗಿ ಭೋಜನ ಮುಗಿಸಿ ಮಲಗಿದೆ.
ದಿನ-೩
ದಿನಾಂಕ ೧೫-೧೦-೧೭ ಹಂಗಾರಿ ಮನೆಯಿಂದ ಹೊರಟು ಶಿರಸಿಯ ಗಡಿಕೈ ಅಕ್ಷಯಣ್ಣನ ಮನೆಗೆ ಹೋಗಿ ಅವರ ಮನೆಯ ತೋಟದಲ್ಲಿ ಬೆಳೆದ ಅಡಿಕೆ,ಕಾಳುಮೆಣಸು,ಬಾಳೆ ಹಾಗೂ ಇನ್ನಿತರ ಬೆಳೆಗಳ ಬಗ್ಗೆ ಮಾಹಿತಿ ಪಡೆದು ,ಅವುಗಳಿಗೆ ಬರುವ ಕೊಳೆ ಮತ್ತು ಅದರ ನಿವಾರಣೆಯ ಬಗ್ಗೆ ತಿಳಿದು ಅಲ್ಲಿಯೆ ಸಮೀಪದ ಶಿರುಕಲು ಗುಂಡಿ ಎಂಬ ಸಣ್ಣ ಜಲಪಾತಕ್ಕೆ ತೆರಳಿ ಆಕೆಯ ದರುಶನ ಪಡೆದು,ಪುನಃ ಮನೆಗೆ ತೆರಳಿದೆವು.
ಉಂಚಳ್ಳಿ ಜಲಪಾತ
ಮಧ್ಯಾಹ್ನ ಭೋಜನ ಮುಗಿಸಿ ನಾನು ಅಕ್ಷಯಣ್ಣ ,ರಶ್ಮಿ ಅಕ್ಕ, ಅಮೃತಾ ಎಲ್ಲರೂ ಒಟ್ಟಾಗಿ ಉಂಚಳ್ಳಿ ಜಲಪಾತಕ್ಕೆ ತೆರಳಿದೆವು. ಅಲ್ಲಿನ ಮಂಜಿನೊಂದಿಗೆ ನಮ್ಮ ಮನದ ದುಗುಡಗಳನ್ನೆಲ್ಲ ಕರಗಿಸಿ ,ಅಲ್ಲಿಂದ ವಾಟೆಹಳ್ಳ ಜಲಪಾತದ ವೀಕ್ಷಣೆಗೆ ತೆರಳಿದೆವು.
ಆಹಾ... ಇಂಬಳಗಳು ನಮಗಾಗಿಯೇ ಕಾಯುತ್ತಿದ್ದವೆನೊ ಎಂಬಂತೆ ನಮ್ಮ ಕಾಲಿಗಂಟಿದ್ದವು.ದಾರಿ ಸಿಗಲಿಲ್ಲ ಎಂಬ ಚಿಂತೆ ಒಂದೆಡೆಯಾದರೆ ಇಂಬಳ ತೆಗೆಯುವ ಮಜಾ ಇನ್ನೊಂದೆಡೆ...ಕೊನೆಗೂ ಜಲಪಾತವನ್ನು ದರ್ಶಿಸುವ ಆಸೆಯನ್ನು ಕೈಬಿಟ್ಟು ನಮ್ಮ ವಾಹನದೆಡೆಗೆ ಓಡಿ-ಓಡಿ ಬಂದೆವು...ಅಲ್ಲಿನ ಹಳ್ಳದಲ್ಲಿ ಇಂಬಳಗಳನ್ನೆಲ್ಲ ನಮ್ಮ ಆಸೆಯೊಂದಿಗೆ ಬಿಟ್ಟು ಬಂದೆವು.
ಭೀಮನಗುಡ್ಡ
ಅಲ್ಲಿಂದ ಭೀಮನಗುಡ್ದಕ್ಕೆ ತಲುಪಿ ಅಲ್ಲಿನ ಹಿತವಾದ ಮಂಜಿಗೆ ನಮ್ಮ ಮೈಯೊಡ್ದಿ ಮನೆಯಿಂದ ತಂದ ಮುಳ್ಳುಸೌತೆಗೆ,ಉಪ್ಪು,ಹುಳಿ ಖಾರವನ್ನು ಮಿಶ್ರಣ ಮಾಡಿ ಸವಿದದ್ದು ನೆನಪಿನ ಸುರುಳಿಯೊಳಗುಳಿದ ಅನುಭವ.ಅದೇ ಸಂದರ್ಭದಲ್ಲಿ ಮೋಡ ಕರಗಿ ಪ್ರಕೃತಿಮಾತೆ ಒಮ್ಮೆ ನಮಗೆ ದರುಶನವಿತ್ತಳು.ಕತ್ತಲಾದಂತೆ ಅಲ್ಲಿಂದ ಹೊರಟು ಗಡಿಕೈ ತಲುಪಿ ಬಿಸಿ-ಬಿಸಿ ಕಾಫಿ ಹೀರಿ ಚಿಪ್ಸ್ ತಿಂದು,ಅಲ್ಲಿಂದ ಬೀಳ್ಗೊಂದು ಉಷಾಳ ಮನೆ ತಲುಪಿ ಉಭಯಕುಶಲೋಪರಿಯೊಂದಿಗೆ ಅಜ್ಜಿಯೊಂದಿಗೆ ಹರಟಿ,ಭೋಜನ ಮುಗಿಸಿ...ಪುನಃ ಹರಟುತ್ತಿದ್ದಾಗ ಚಿಕ್ಕಮ್ಮ ಚಾಪೆ ಹಾಸಿದ್ದೇನೆ ಎಂದಾಗ ನಿದ್ದೆಗೆ ಅನುವಾದೆನು.
ದಿನ -೪
ಬುರುಡೆ ಜಲಪಾತ
ದಿನಾಂಕ ೧೬-೧೦-೧೭ರಂದು ಬೆಳಗೆದ್ದು ತಿಂಡಿ ಮುಗಿಸಿ ಅಲ್ಲಿಂದ ಹೊರಟು ಬುರುಡೆ ಜಲಪಾತದ ವೀಕ್ಷಣೆಗೆ online map ಸಹಾಯದಿಂದ ತಲುಪಬೇಕೆಂಬ ಆಶಯದಿಂದ map ಹೇಳಿದ ದಾರಿಯಲ್ಲಿ ಸಾಗಿದಾಗ ಮುರಿದ ಸೇತುವೆಯೊಂದು ಗಾಬರಿಪಡಿಸಿತ್ತು ,ಆದರು ಕೆಲ ದ್ವಿಚಕ್ರಸವಾರರು ಅದನ್ನು ದಾಟುವುದನ್ನು ನೋಡಿ ನಾನೂ ಧೈರ್ಯ ಮಾಡಿ ದಾಟಿದೆ.ಆದರೆ ಯಡವಟ್ಟದದ್ದು ಅದರ ನಂತರ map ತೋರಿಸಿದ ಹಾದಿಯಲ್ಲಿ ಸಾಗಿದ ನಾನು,ದಾರಿ ಕಾಣದೆ ಊರವರ ಸಹಾಯದಿಂದ ,ಮತ್ತು map ಅಲ್ಲಿ ಇದ್ದ ಒಂದು ದೂರವಾಣಿ ಸಂಖ್ಯೆಗೆ ಕರೆಮಾಡಿದಾಗ ಆದರ್ಶ ಎಂಬವರು ದಾರಿಯ ಮಾಹಿತಿ ನೀಡಿದರು.ಅಲ್ಲದೇ ಕ್ಯಾದಗಿ ಅರಣ್ಯ ಇಲಾಖೆ ಸಿಬ್ಬಂದಿಗಳ ವಚನಾನುಸಾರ ಸಾಗಿ ಜಲಪಾತದ ತಲೆಯವರೆಗೂ ವಾಹನದಿಂದ ಸಾಗದೆನು.ಆದರೆ ಅಲ್ಲಿಂದ ಜಲಪಾತದ ವೀಕ್ಷಣೆ ಅಸಾಧ್ಯ , ಅದಕ್ಕೆ ಸುಮಾರು ೨೦೦ ಮೀಟರ್ನಷ್ಟು ಕಡಿದಾದ ಇಳಿಜಾರು ಪ್ರದೇಶದಿಂದ ಕೆಳಗೆ ಹೋಗಬೇಕು.ಸ್ವಲ್ಪ ಅಪಾಯಕಾರಿ ಪ್ರದೇಶ ಎನ್ನಬಹುದೇನೋ.ಕೆಳಕ್ಕೆ ಹೋದಂತೆ ಆಮ್ಲಜನಕದ ಕೊರತೆ ಕಾಣುತ್ತದೆ.ಮತ್ತೂ ಕೆಳಗಿಳಿದಾಗ ನಿರ್ಮಲವಾದ ಝರಿಯೊಂದಿಗಿನ ಸುಂದರಪ್ರಕೃತಿಮಾತೆ ನಮಗೆ ಕಾಣಸಿಗುವಳು.ಅಲ್ಲಿ ಸ್ವಚ್ಛಂದವಾಗಿ ವಿಹರಿಸಿ ಮತ್ತೂ ಕೆಳಗಿನ ಝರಿಯನ್ನು ಸಾಹಸದಿಂದ ದಟ್ಟ ಕಾಡಿನ ನಡುವೆ ಸಾಗಿ ಅಲ್ಪ ಸ್ವಲ್ಪ ಕಾಮನಬಿಲ್ಲಿನ ಕೂಡುವಿಕೆಯೊಂದಿಗೆ ಮಾತ್ರವೇ ಕಂಡು ಮನಃಪಟಲದಲ್ಲಿ ಮಾತ್ರ ಮುದ್ರಿಸಿಕೊಳ್ಳಬಹುದು.ಮತ್ತೂ ಸ್ವಲ್ಪ ಹೊತ್ತು ಸ್ವರ್ಗದ ಬಾಗಿಲಿನಂತಿದ್ದ ಜಲಧಾರೆಯ ಬುಡದಲ್ಲಿ ಕುಳಿತು ವಾಪಾಸಾಗುವ ಹಾದಿಯ ನೆನೆದು ರುದ್ರರಮಣೀಯ ಜಲಧಾರೆಯನ್ನು ಮತ್ತೊಮ್ಮೆ ಕಂಡು ಅಂತೂ ಇಂತೂ ಗುಡ್ಡ ಹತ್ತಿ ವಾಹನವಿದ್ದಲ್ಲಿ ತಲುಪಿದೆನು.
ಈ ಜಲಪಾತಕ್ಕೆ ಉಬ್ಬಸ , breathing ಸಮಸ್ಯೆ ಇರುವವರು ಇಳಿಯುವುದು ಅಪಾಯಕಾರಿ.
ಬುರುಡೆ ಜಲಪಾತಕ್ಕೆ ಸಿದ್ಧಾಪುರ-ಕುಮಟಾ ಹಾದಿಯು ಸೂಕ್ತ.
ಅಲ್ಲಿಂದ ಹೊರಟು ಸಿದ್ಧಾಪುರಕ್ಕೆ ಬಂದು ಚಪಾತಿ ತಿಂದು,ಅಲ್ಲಿಂದ ಜೋಗ ಜಲಪಾತ ನೋಡುವ ಶಾಸ್ತ್ರ ಮುಗಿಸಿದೆನು.ಹೀಗೆ ಹೇಳಿದ್ದು ಯಾಕೆಂದರೆ ಪ್ರಾಕ್ರತಿಕ ಸೌಂದರ್ಯ ಸವಿದವಗೆ ಈ ಕೃತಕವೆನ್ನಿಸುವ ಸುಗಮ ಹಾದಿಯ ಜನಸಾಗರವಿರುವ ಜಲಪಾತ ರುಚಿಸಲಿಲ್ಲ.
ಅಲ್ಲಿಂದ ಸಾಗರದ ಹೆಗ್ಗೋಡಿಗೆ ಬಂದು ವಸ್ತ್ರವಿನ್ಯಾಸ ಖಾದಿ ವಸ್ತ್ರಗಳನ್ನು ಖರೀದಿಸಿ ,ದೀಕ್ಷಿತರ ಮನೆಯಲ್ಲಿ ತಡರಾತ್ರಿಯವರಗೂ ಅಲ್ಲಿದ್ದ ಪುಟಾಣಿಗಳೊಂದಿಗೆ ಹರಟಿದೆವು.
ದಿನ-೫
ದಿನಾಂಕ ೧೭-೧೦-೧೭ಅವರನ್ನು ಬೀಳ್ಕೊಟ್ಟು ,ಅಲ್ಲಿಂದ ಶೃಂಗೇರಿಗೆ ಬಂದು ಉಷಾ ಅಕ್ಕನ ಕೈಯಡುಗೆಯ ಸವಿದು ,ನಾ ಓದಿದ ಪರಿಸರಕ್ಕೆ ಹೋಗಿ ಆತ್ಮೀಯರ ಮಾತನಾಡಿಸಿ ಹೆಗ್ಗದ್ದೆಗೆ ಬಂದು ಒಂದಿಷ್ಟು ಹರಟಿದೆವು.
ದಿನ -೬
ದಿನಾಂಕ ೧೮-೧೦-೧೭ ಹಬ್ಬದ ಸ್ನಾನ ಮುಗಿಸಿ ಪ್ರದೀಪನ ಮನೆಗೆ ತೆರಳಿ ಅಲ್ಲಿಂದ,ಪುತ್ತೂರಿನ ಸಂತೃಪ್ತಿಗೆ ಹೋಗಿ ಸಂತೃಪ್ತರಾಗಿ ,ಪುನಃ ವೇಣೂರಿಗೆ ವಾಪಾಸಾದೆವು.
ದಿನ -೭
ಅಲ್ಲಿಂದ ಹೊರಟು ನಮ್ಮನೆಗೆ ತಲುಪಿದಲ್ಲಿಗೆ ನನ್ನ ಮಹಾಪ್ರಯಾಣ ಸುಖಾಂತ್ಯವಾಯಿತು.
ಈ ಪಯಣದಲ್ಲಿ ೧೦೨೪ ಕೀ.ಮೀ ಕ್ರಮಿಸಿ ೧೦+೧ ಜಲಪಾತಗಳು,೧ ಗುಡ್ಡ ಪ್ರದೇಶವನ್ನು ಹಾಗೂ ಹತ್ತಾರು ಊರುಗಳು ,ಹತ್ತಾರು ಮನೆಗಳು ...ಹಲವಾರು ಸಂಸ್ಕೃತಿಯ ಕಂಡು,ಕೃಷಿಯ ಕಿಂಚಿತ್ ಜ್ಞಾನ ಪಡೆದು ....ಆತ್ಮೀಯರನ್ನು ಕಂಡು ...ಹೊಸ ಪರಿಚಯಗಳೊಂದಿಗೆ...ಪಟಪಟನೆ ಮಾತಾಡುವ ಐಶು ಪುಟ್ಟಿ.....ಈ ಎಲ್ಲವನ್ನೂ...ಎಲ್ಲರನ್ನೂ ನನ್ನ ಅನುಭವದ ನೆನಪಿನ ಸರಣಿಯೊಳಗೆ ದಾಖಲಿಸುತಿಹೆನು.
ಚಿತ್ರ ಸಂಖ್ಯೆ ಮತ್ತು ಸ್ಥಳ
೧- ಅಪ್ಸರಕೊಂಡ
೨- ಅಪ್ಸರಕೊಂಡದಿಂದ ಸಮುದ್ರ
೩- ವಿಭೂತಿ
೪- ಶಿರಲೆ
೫,೬- ಕಾನೂರು
೭- ಮಾಗೋಡು
೮- ಮಾಗೋಡುವಿನಿಂದ ಕಾಣುವ ಅನಾಮಿಕೆ.
೯- ಸಾತೊಡ್ಡಿ
೧೦- ಶಿರುಕಲುಗುಂಡಿ
೧೧- ಉಂಚಳ್ಳಿ
೧೨- ವಾಟೆಹಳ್ಳದ ಸಮೀಪ
೧೩- ಬುರುಡೆಯ ಸಮೀಪದ ಸುಂದರ ದೃಶ್ಯ.
೧೪- ಬುರುಡೆಗೆ ಹೋಗುವಾಗ ಇದಿರಾದ ಮುರಿದ ಸೇತುವೆ
೧೫,೧೬,೧೭- ಬುರಡೆ ಜಲಪಾತದ ಹಂತಗಳು.
೧೯- ಜೋಗ
*******************
Tuesday, 30 May 2017
ಮಹಾಪ್ರಯಾಣ
ಮಹಾಪ್ರಯಾಣ
ಬಿರುಬಿಸಿಲಿನ ಝಳಕ್ಕೆ ಬೆಂದು ಬೊಬ್ಬೆ ಬಂದ ಕಾಲುಗಳನ್ನು ಎಳೆದುಕೊಂಡು ಮಲೆನಾಡಿನ ಹೆಬ್ಬಾಗಿಲಾದ ಆಗುಂಬೆಯ ಕಪ್ಪು ಹಾದಿಯಲ್ಲಿ ನಡೆಯುತ್ತಿದ್ದ ಗುರುಪಾದಪ್ಪ . ಅವನ ಈ ಪಯಣ ಗತಜೀವಗಳನ್ನು , ಆ ಭಾವಗಳನ್ನು ನೆನಪ ಸರಪಳಿಯಾಗಿ ಕಾಡಿ ಮನಸನ್ನು ಮಡುಗಟ್ಟಿಸುತ್ತಿತ್ತು .
ಹಚ್ಚ ಹಸುರಿನ ಸೀರೆಯುಟ್ಟ ಆಗುಂಬೆಯಲ್ಲಿ ನಟ್ಟನಡು ಮಧ್ಯಾಹ್ನ ಸೂರ್ಯ ತನ್ನ ಉಗ್ರ ಪ್ರತಾಪವನ್ನು ಕಿರಣಗಳ ಮೂಲಕ ಭುವಿಗೆ ತೋರ ಹೊರಟಂತಿತ್ತು .ತಾಳಲಾರದ ಆ ಬೇಗೆಯಲ್ಲಿಯೂ, ಕಾಲಲ್ಲಿರುವ ಬೊಕ್ಕೆಯನ್ನೂ ಲೆಕ್ಕಿಸದೇ ಹುಬ್ಬಳ್ಳಿಯನ್ನು ತಲುಪುವ ಧಾವಂತದಲ್ಲಿ ಆತ ಹೆಜ್ಜೆ ಹಾಕುತ್ತಿದ್ದ . ಎಂಟನೇ ದಿನದ ಅವನ ಈ ಮಹಾಪ್ರಯಾಣ ಊಟ ಇದ್ದೋ ಇಲ್ಲದೆಯೂ...ನಿದ್ದೆ ಇದ್ದೂ ಇಲ್ಲದೆಯೂ..ಸಾಗುತ್ತಿತ್ತು. ಆದರೆ ಮನಸ್ಸು ಮಾತ್ರ ಅವನನ್ನು ಭೂತದೆಡೆಗೆ ಕೊಂಡೊಯ್ದಿತ್ತು .
ಏಂಟು ತಿಂಗಳ ಹಿಂದೆ ಅವನದ್ದು ತುಂಬು ಸಂಸಾರ . ಮನೆಯೂ ತುಂಬಿತ್ತು ಜನಗಳಿಂದ .ಅಲ್ಲಿ ಖುಶಿಗೆ ಬಡತನವಿರಲಿಲ್ಲ... ಹಾಗಂತ ಬಡತನಕ್ಕೂ ಕೊರತೆಯಿರಲಿಲ್ಲ . ಅವನ ಹೆಂಡತಿ ಲಚ್ಚಿ , ಮಗಳು ಗೌರಿ , ಮಗ ಬಸವ ಶಾಲೆಗೆ ಹೋಗುತ್ತಿದ್ದ . ದುಡಿದರೆ ಊಟ ,ಅಂತಹ ಕೆಲಸ. ವಯಸ್ಸಿಗೆ ಬಂದ ಮಗಳನ್ನು ಸೋದರಿಕೆಯ ಸಂಬಂಧದಲ್ಲಿಯೆ ಮದುವೆ ಮಾಡಿಸಿದ್ದ.ಅವನ ಅಳಿಯ ಅವನ ಹೆಂಡತಿಯ ಸ್ವಂತ ತಮ್ಮ .ಮದುವೆ ಖರ್ಚಿಗೆಂದು ಸಾಹುಕಾರನಲ್ಲಿ ಸಾಲ ಮಾಡಿದ್ದ.
ಗ್ರಹಚಾರ ಕೆಟ್ಟರೆ ಕಷ್ಟ ತಲೆ ಮೇಲೆ ಕೂರುತ್ತದೆಂಬುದಕ್ಕೆ ಗುರುಪಾದಪ್ಪನ ಜೀವನವೇ ಜ್ವಲಂತ ಸಾಕ್ಷಿ . ಮದುವೆಯ ಸಂಭ್ರಮವೆಲ್ಲ ಮುಗಿದು ಯಥಾಪ್ರಕಾರದ ಜೀವನಕ್ಕೆ ತಿರುಗಿ , ಸೌದೆ ತರಲು ಊರ ಹೊರಗೆ ಹೋಗಿದ್ದ ಅವನ ಜೀವಕ್ಕೆ ಜೀವವಾಗಿದ್ದ ಅವನ ಅರ್ಧಾಂಗಿ ಅವನ ಪ್ರೀತಿಯ ಲಚ್ಚಿ ಯಾವುದೋ ಗಾಡಿಯ ಬುಡಕ್ಕೆ ಸಿಕ್ಕಿ ಜೀವ ಕಳೆದುಕೊಂಡಿದ್ದಳು .ಹಣವಿದ್ದವನೇ ಬಲವಂತ ಎಂಬುದೇ ನ್ಯಾಯವಾಗಿದ್ದರಿಂದ ಆ ಅಪರಾಧಿಯಿಂದ ನ್ಯಾಯವೂ ಲಚ್ಚಿಯೊ್ಡನೆ ಬೀದಿಬದಿಯ ಹೆಣವಾಯ್ತು .
ಇಬ್ಬರೂ ಸೇರಿ ದುಡಿದು ಸಾಲವನ್ನು ಬೇಗನೆ ತೀರಿಸುವ ಎಂದಿದ್ದ ಲಚ್ಚಿ ಜೀವನಪಯಣವನ್ನು ಅರ್ಧಕ್ಕೆ ಮುಗಿಸಿದ್ದಳು .ಶಾಲೆಗೆ ಹೋಗಬೇಕಾದ ಮಗ ದುಡಿಯಲು ಇಳಿದ . ಮಗ ದುಡಿಯುವುದನ್ನು ನೋಡಲಾಗದ ಅಪ್ಪ ಹೆಚ್ಚು ಹಣ ಸಂಪಾದಿಸಿ ಸಾಲ ತೀರಿಸುವ ಆಸೆಗೆ್ ಊರನ್ನು ಬಿಟ್ಟು ಮೇಸ್ತ್ರಿಯೊಂದಿಗೆ ಭಾಷೆ ತಿಳಿಯದ ಕೇರಳದ ಕಣ್ಣೂರಿಗೆ ಹೊರಟಿದ್ದ .
ಸಂಬಳವೇನೋ ಚೆನ್ನಗಿಯೇ ಇತ್ತು , ಆದರೆ ಇವನಿಗೆ ಅಲ್ಲಿಯೂ ಕೈ ಹಿಡಿಯದ ಅದೃಷ್ಟ , ಹೋದ ಕೆಲವೇ ದಿವಸಕ್ಕೆ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಮೇಸ್ತ್ರಿಯನ್ನೂ ಬಲಿತೆಗೆದುಕೊಂಡು ಇವನ ದುಡಿಯುವ ಕೈಗಳನ್ನೂ ಕಿತ್ತುಕೊಂಡಿತ್ತು .
ದೇಶ ತಿಳಿಯದು ಅಲ್ಲಿನ ಭಾಷೆ ತಿಳಿಯದು .ಕೈಯಲ್ಲಿ ಕಾಸಿಲ್ಲ ಮೈಯಲ್ಲಿ ತ್ರಾಣವಿಲ್ಲ . ವಿಧಿಯ ಆಟದ ಮರ್ಮವ ತಿಳಿದವರಾರು ???
ಯಾವ ಜನುಮದ ಅವನ ಬಂಧುವೋ ಒಬ್ಬ ವೈದ್ಯರು ಉಚಿತವಾಗಿ ಅವನ ಕೈಯನ್ನು ಸರಿಪಡಿಸಿದರು . ಅಲ್ಲಿಂದ ಹೊರಬಿದ್ದವ ನಡೆದಾದರೂ ಊರು ಸೇರುತ್ತೇನೆಂದು ಹೊರಟ ....
ಹೋಗುತ್ತಲಿದ್ದ....ಹೋಗುತ್ತಲೇ ಇದ್ದ........
ಗೃಹಲಕ್ಷ್ಮಿಯಾದ ಲಚ್ಚಿಯನ್ನು ಕಳೆದುಕೊಡ , ಕಾಯಕ ನಿಡುವ ಯಜಮಾನನ್ನೂ ಕಳೆದುಕೊಂಡ , ದುಡಿವುದಕ್ಕೆ ಕೈಯಿಲ್ಲ , ದುಡಿದರೂ ಊಟಕ್ಕೇ ಕೈಯಿಲ್ಲ......
ಏತ್ತಲಿನಿಂದಲೋ ಇನ್ನೆತ್ತಲಿನೆಡೆಗೋ ; ತಿಳಿಯದಿದ್ದುದರಿಂದ ತಿಳಿದಿದುರೆಡೆಗೆ ; ಕತ್ತಲಿನಿಂದ ಬೆಳಕಿನೆಡೇಗೋ.... ಪೂರ್ಣವಾಗದ ಅವನ ಮಹಾಪ್ರಯಾಣ ಸಾಗುತ್ತಲೇ ಇತ್ತು .
Sunday, 7 May 2017
ಶೂನ್ಯ
ಉಳ್ಳವರಿಗೆ ಹೇಳಿಕೊಳ್ಳಲಾಗದ ಸ್ಥಿತಿ
ಇಲ್ಲದವರಿಗೆ ಹೊಂದುವ ಚಿಂತೆ...
ವಿಷಯ ಸುಖಗಳ ಮೋಹ,
ಪ್ರಾಪಂಚಿಕ ಲೌಕಿಕತೆಯ ಪೆಡಂಭೂತ
ಅಟ್ಟುತಿದೆ ...ನೂಕುತಿದೆ,
ಕಾರ್ಗತ್ತಲಿನ ದುರ್ನರಕದ ಸಂಸಾರ ಬಂಧನಕೆ.......
ಶೂನ್ಯದ ಸಮತಲವು
ಅಳಿಯಲೂಕೂಡದು -
ಆಳಲೂಬಾರದು.
Thursday, 4 May 2017
ಓ ಮನವೇ
ಗತಿಸಿರುವ ಭಾವಗಳ ಹುಡುಕಾಟದಲ್ಲಿ
ಪಡೆದೆ ನಾನೊಂದ , ಮರೆತೆನಾ...ಇನ್ನೊಂದ
ನಂಬಿಕೆಯ ಬುನಾದಿಯ ಪುನಃ ಪ್ರತಿಷ್ಠೆಗೆ
ಭಾವಗಳೇ ಅಡಿಪಾಯ...
ತೆರೆದ ಮನಸಲಿ ಬೆಸೆವ ಬಂಧದ
ಅಳಿವೋ .....? ಉಳಿವೋ ....? ತಿಳಿಯದು !
ಕಳೆದುಕೊಳ್ಳುವ ಸುಲಭ ಪಡೆಯುವುದರಲ್ಲಿಲ್ಲ...
ಕಳೆದುಕೊಳ್ಳದಿರು ಮನವ ...ಮಾನವ....
.......ಓ ಮನವೇ...
ಅಂತರಾತ್ಮವ ಸತ್ಯ ಜ್ಯೋತಿಯಿಂ
ನಡೆಸು ನೀ ಧರ್ಮಪಥದಲೀ.....
Tuesday, 11 April 2017
ಮೇಘದ ಮಾತುಗಳು
ಮೇಘವೇ ಹೇಳು ನೀ , ನನ್ನಯ ಗೆಳತಿಗೆ
ತುಂತುರು ಹನಿಯಲೂ ಸುರಿಸು ನೀ ಪ್ರೀತಿಯ
ಮಿಂಚಾಗಿ ಬರದಿರು ಬಾಳಲಿ
ಕೊನೆತನಕ ಇರಲೀ ಬಂಧ
ಮುನಿಸುಗಳೆ ಇಲ್ಲದ ಪ್ರೀತಿ
ಸಾಗಲೀ ನದಿಯಾ ರೀತಿ
ಕನಸೆಂಬ ಕಲ್ಪನೆಗೆ ಕೇಳದಿರು ಕಾರಣವ...
ಮನಸೆಂಬ ಕನ್ನಡಿಗೆ ಕಣ್ಣುಗಳೇ ಪ್ರತಿಬಿಂಬ.
Saturday, 1 April 2017
ಸಾಕಾರ
ಮಳೆಯ ಹನಿಯಲಿ ನಿನ್ನ ಮೊಗ ಮೂಡಿ,
ಮಿಂಚ ಹೊಳಪಲೂ ನಿನ್ನ ಕಂಗಳ ಸಂಚು,
ಹರಿವ ತೊರೆ ಜಲದೊಳಗೂ ನಿನದೇ ನಿನಾದ ,
ಬೀಸೋ ಗಾಳಿಯೂ ಸಾರಿದೆ ನಿನ್ನ ಪಿಸುಮಾತುಗಳ,
ಬಯಲಾಗಿದೆ ನಿನ್ನ ಸಾಕಾರವೀಗ .....
Friday, 17 March 2017
ಹಿತೈಷಿ
ಮನಕೆ ಸನಿಹಾದವನ ಮನವು
ಸಂತೋಷಗೊಂಡಾಗ
ನನ್ನ ಮನಸಿನ ತುಂಬ ಹೊಳೆ ಹೊಳೆವ ಸಂತಸ...
ಅವ್ಯಕ್ತ ರೀತಿಯಲಿ ಹಿತೈಷಿ ನಾನವನ
ಪರಮನಲಿ ಎರಡಾತ್ಮ ಒಂದಾಗೋ ಪ್ರಯತ್ನ ....
ಶರಣಾದೆ ನಾ....
ಆ ನಿನ್ನ ಮೌನದಿಂ ನೀ ನನ್ನ ಕರೆದಾಗ,
ಆ ಸಂಜೆಗೆಂಪಿನಲಿ ನೀ ಬಂದು ಹೋದಾಗ ,
ನಿನ ಪ್ರೀತಿಯಾ ಕರೆಯು ನನ್ನೆದೆಯ ಬಡಿದಾಗ,
ಮನದಲ್ಲಿ ಭರಪ್ರೀತಿ ಝರಿಯಾಗಿ ಹರಿದಾಗ ,
ನನ್ನೆದೆಯ ಕಮಲದಲಿ ನೀ ದುಂಬಿಯಾದಾಗ ,
ಬಾಳೆಂಬ ನೌಕೆಯನು ನೀ ನಡೆಸಬಂದಾಗ ,
ಧನ್ಯತಾ ಭಾವದಲಿ ನಾ ಶರಣು ಎಂದಾಗ
Sunday, 12 March 2017
ಅಮ್ಮಾ...
ವಾತ್ಸಲ್ಯ ಎಂಬ ಪದವೊಂದೇ....
ನಿನ್ನ ಅಳೆಯಲು .....
ಪ್ರೀತಿಯೊಂದೇ ನಿನ್ನ
ಸೋಲಿಸಲು........